ಮಂಗಳವಾರ, ಸೆಪ್ಟೆಂಬರ್ 6, 2016

ಮಾಡಾಳು ಗೌರಮ್ಮನಿಗೆ ಕರ್ಪೂರದ ಹರಕೆ

"ಮಾಡಾಳು ಗೌರಮ್ಮನಿಗೆ ಕರ್ಪೂರದ ಹರಕೆ"


ಅರಸೀಕೆರೆ ತಾಲ್ಲೂಕು ಮಾಡಾಳು ಶ್ರೀ ಸ್ವರ್ಣಗೌರಿ ದೇವಿಯ 10 ದಿನಗಳ ಮಹೋತ್ಸವವು ಇದೇ ತಿಂಗಳ 4 ತಾರೀಖಿನಿಂದ ಪ್ರಾರಂಭವಾಗಿದೆ, ಗೌರಮ್ಮನವರ ವಿಸರ್ಜನಾ ಮಹೋತ್ಸವ 13ನೇ ತಾರೀಖಿನಂದು ನಡೆಯಲಿದೆ.

ಗೌರಮ್ಮನವರಿಗೆ ಕರ್ಪೂರ ಸೇವೆ, ಗುಗ್ಗುಳ ಸೇವೆ ಮಾಡುತ್ತೇವೆಂದು ಭಕ್ತರು ಹರಕೆ ಕಟ್ಟಿಕೊಳ್ಳುತ್ತಾರೆ.  ತಮ್ಮ ಇಷ್ಟಾರ್ಥಗಳು ಪೂರ್ಣವಾದರೆ ಮಾಡಾಳು ಗೌರಮ್ಮನ ದೇವಾಲಯದ ಮುಂಭಾಗದಲ್ಲಿರುವ ಕುಂಡದಲ್ಲಿ ಕರ್ಪೂರದ ಹರಕೆಯನ್ನು ಸಲ್ಲಿಸುತ್ತಾರೆ.  ಅವರವರ ಶಕ್ತ್ಯಾನುಸಾರ 10 ರೂಪಾಯಿ ನಿಂದ ಹಿಡಿದು ಸಾವಿರಾರು ರೂಪಾಯಿಗಳ ವರೆಗೆ ಕರ್ಪೂರವನ್ನು ದೇವಾಲಯದ ಮುಂಭಾಗದ ಕುಂಡದಲ್ಲಿ ಸಲ್ಲಿಸುತ್ತಾರೆ.   ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ನೋಡಿದರೆ, ಗೌರಮ್ಮನವರಿಗೆ ಹರಕೆ ಕಟ್ಟಿಕೊಂಡವರಿಗೆ ಉತ್ತಮ ಫಲಗಳು / ಇಷ್ಟಾರ್ಥಗಳು ಖಂಡಿತವಾಗಿಯೂ ದೊರೆಯುತ್ತಿವೆ ಎಂದು ತಿಳಿದುಬರುತ್ತದೆ.

ಕರ್ಪೂರವನ್ನು ಮೊದಲು ಕ್ಯಾಂಫರ್ ಲಾರೆಲ್ ಎಂಬ ಮರಗಳ ತಿರುಳಿನಿಂದ ತಯಾರಿಸುತ್ತಿದ್ದರು.  ಆದರೆ ಕರ್ಪೂರದ ಬೇಡಿಕೆ ಹೆಚ್ಚಾಗತೊಡಗಿದಾಗ ಡಿ-ಪೈನೀನ್ ಎಂಬ ವಸ್ತುವನ್ನು ಬಳಸಿ ಕೃತಕ ವಿಧಾನದಿಂದ ತಯಾರಿಸುತ್ತಿದ್ದಾರೆ. ಇದಲ್ಲದೇ ಟರ್ಪನ್ಟೈನ್ ಬಳಸಿಯೂ ಕರ್ಪೂರವನ್ನು ತಯಾರಿಸುತ್ತಿದ್ದಾರೆ.  ಇತ್ತೀಚೆಗೆ ಎಲ್ಲಕಡೆ ಸಿಗುತ್ತಿರುವುದು ಕೃತಕವಾಗಿ ತಯಾರಿಸುವ ಕರ್ಪೂರ.

ಮಾಡಾಳಿನಲ್ಲಿ ಭಕ್ತರು ಹರಕೆಯ ರೂಪದಲ್ಲಿ ಸಲ್ಲಿಸುವ ಈ ಕರ್ಪೂರದ ಜ್ವಾಲೆಯ ಹೊಗೆಯು ಮುಗಿಲೆತ್ತರಕ್ಕೆ ಏರಿರುತ್ತದೆ.  ಇದರಿಂದ ಸಾಕಷ್ಟು ಪರಿಸರ ಮಾಲಿನ್ಯ ಉಂಟಾಗುತ್ತದೆ.  ಅಷ್ಟೇ ಅಲ್ಲದೇ, ಭಕ್ತರು ಕರ್ಪೂರವನ್ನು ಪ್ಲಾಸ್ಟಿಕ್ ಕವರ್ ಸಮೇತವಾಗಿ ಈ ಕುಂಡಕ್ಕೆ ಹಾಕುವುದರಿಂದ ಈ ಹೊಗೆಯು ವಿಷಕಾರಿಯಾಗಿ ಪರಿಣಮಿಸುತ್ತದೆ.   ಈ ಕುಂಡದ ಸಮೀಪದಲ್ಲಿ ಕೆಲಹೊತ್ತು ಇದ್ದರೆ ಸಾಕು ನಿಮ್ಮ ಶರೀರ, ಬಟ್ಟೆ ಹಾಗೂ ಮೂಗಿನ ಹೊಳ್ಳೆಗಳಲ್ಲಿ ಈ ಹೊಗೆಯು ಅಂಟಿಕೊಳ್ಳುತ್ತದೆ.  ಹತ್ತು ದಿನಗಳ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕರ್ಪೂರವು ಈ ಕುಂಡದಲ್ಲಿ ಉರಿಯುತ್ತದೆ ಎಂದಮೇಲೆ ಇದರಿಂದ ಉಂಟಾಗುವ ಮಾಲಿನ್ಯದ ಪ್ರಮಾಣ ಎಷ್ಟಾಗಬಹುದು ಎಂದು ಊಹಿಸಬಹುದು.

ಕೆಲ ತಿಂಗಳಹಿಂದೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಹೋಗಿದ್ದೆ, ಅಲ್ಲಿ ಭಕ್ತರು  ಅಮ್ಮನವರಿಗೆ ಅಕ್ಕಿಯನ್ನು ಹರಕೆಯ ರೂಪದಲ್ಲಿ ಸಲ್ಲಿಸುತ್ತಾರೆ, ಇದಕ್ಕಾಗಿ ದೇವಾಲಯದ ಮುಂಭಾಗದಲ್ಲಿ ಒಂದು ಕೌಂಟರ್ ಇದೆ, ಅಲ್ಲಿ ನಿಮ್ಮ ಶಕ್ತ್ಯಾನುಸಾರ ಹಣವನ್ನು ಸಂದಾಯ ಮಾಡಿದರೆ, ಆ ಹಣಕ್ಕೆ ಒಂದು ರಸೀತಿಯನ್ನು ಕೊಡುತ್ತಾರೆ, ಆ ರಸೀತಿಯನ್ನು ದೇವಾಲಯದ ಒಳಗಿರುವ ಅಕ್ಕಿ ಹರಕೆ ಸಲ್ಲಿಸುವ ಜಾಗದಲ್ಲಿ ನೀಡಿದರೆ ಒಂದು ಸಣ್ಣ ಬಟ್ಟಲಿನಲ್ಲಿ ಅಕ್ಕಿಯನ್ನು ಕೊಡುತ್ತಾರೆ, ನಾವು ಅದನ್ನು ಅಕ್ಕಿಯ ಪಾತ್ರೆಗೆ ಸುರಿಯಬೇಕು. ಇದು ನಮ್ಮಿಂದಲೇ ದೇವಾಲಯಕ್ಕೆ ಅಕ್ಕಿ ಸಲ್ಲಿಕೆಯಾಗಿದೆ ಎಂದು ಭಕ್ತರ ಮನಸ್ಸಿನಲ್ಲಿ ಮೂಡುವಂತೆ ಮಾಡುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅಕ್ಕಿ ಸೇವೆಗೆ ಎಷ್ಟೇ ಹಣ ಸಂದಾಯ ಮಾಡಿದ್ದರೂ ನಿಮಗೆ ಒಂದು ಬಟ್ಟಲಿನಷ್ಟು ಅಕ್ಕಿಯನ್ನು ಮಾತ್ರ ಸಲ್ಲಿಸಲು ಅವಕಾಶ ನೀಡುತ್ತಾರೆ.   ಅಂದರೆ, ಒಂದು ರೀತಿಯ  ಸಾಂಕೇತಿಕವಾದ ಕಾರ್ಯ ಜರುಗುತ್ತದೆ.

ಇದೇ ಮಾದರಿಯಲ್ಲಿ ಮಾಡಾಳು ದೇವಾಲಯದ ಆಡಳಿತ ಮಂಡಳಿಯವರು, ದೇವಾಲಯದ ಬಳಿ ಒಂದು ಕರ್ಪೂರದ ಕೌಂಟರ್ ಅನ್ನು ನಿರ್ಮಿಸಿ, ಅಲ್ಲಿ ಭಕ್ತರಿಂದ ಕರ್ಪೂರದ ಹರಕೆ ಕಾಣಿಕೆಯನ್ನು ಸಂಗ್ರಹಿಸಿ, ಅದಕ್ಕೆ ರಸೀತಿಯನ್ನು ನೀಡಿ ಜೊತೆಗೆ ಒಂದು ಸಣ್ಣ ಬಿಲ್ಲೆ ಗಾತ್ರದ ಕರ್ಪೂರವನ್ನು ಅವರಿಗೆ ನೀಡಿ, ಅದನ್ನು ಭಕ್ತರು ಕುಂಡದಲ್ಲಿ ಸಲ್ಲಿಸುವಂತಾದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ… ಇದರಿಂದ ಪ್ರಮುಖವಾಗಿ ಎರಡು ಪ್ರಯೋಜನಗಳಾಗಲಿದೆ.  ಮೊದಲನೆಯದು, ಮಾಲಿನ್ಯ ನಿಯಂತ್ರಣ. ಒಬ್ಬ ವ್ಯಕ್ತಿ ಹತ್ತು ರೂಪಾಯಿಯ ಕರ್ಪೂರದ ಸೇವೆ ಮಾಡಿಸಿದರೂ ಆತನಿಂದ ಒಂದು ಬಿಲ್ಲೆಯಷ್ಟು ಕರ್ಪೂರ ದಹನವಾಗುತ್ತದೆ, ಮತ್ತೊಬ್ಬರು ಹತ್ತು ಸಾವಿರ ರೂಪಾಯಿ ನೀಡಿದರೂ ಒಂದು ಬಿಲ್ಲೆಯಷ್ಟೇ ಪ್ರಮಾಣದ ಕರ್ಪೂರ ದಹನವಾಗುತ್ತದೆ.  ಇದರಿಂದ ಮಾಡಾಳು ದೇವಾಲಯದ ಸುತ್ತಮುತ್ತಲಿನ ಹಾಗೂ ಗ್ರಾಮದಲ್ಲಿನ ಪರಿಸರಕ್ಕೆ ಆಗುವ ಹಾನಿಯನ್ನು ಹಾಗೂ ಭಕ್ತಾದಿಗಳಿಗೆ ಈ ಕರ್ಪೂರದ ಹೊಗೆಯಿಂದಾಗುವ ತೊಂದರೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಗಟ್ಟಬಹುದು.  ಮತ್ತೊಂದು ಪ್ರಯೋಜನವೆಂದರೆ, ಈ ಕರ್ಪೂರದ ಹರಕೆಯ ಹಣವು ಸಂಪೂರ್ಣವಾಗಿ ದೇವಾಲಯಕ್ಕೆ ಸಲ್ಲಿಕೆಯಾಗುವುದರಿಂದ ಜಾತ್ರಾ ಮಹೋತ್ಸವದ ಸಂದರ್ಭ ಒಂದರೆಲ್ಲೇ ಲಕ್ಷಾಂತರ ರೂಪಾಯಿಗಳ ಕರ್ಪೂರ ಹರಕೆ ಹಣ ದೇವಸ್ಥಾನಕ್ಕೆ ಸಂಗ್ರಹವಾಗುತ್ತದೆ.  ಈ ಹಣವನ್ನು ದೇವಾಲಯದ ಅಭಿವೃದ್ಧಿಕಾರ್ಯ, ಅನ್ನ ದಾಸೋಹ, ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಸಬಹುದಾಗಿರುತ್ತದೆ. 

ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸುವಾಗ ಆರಂಭದಲ್ಲಿ ವಿರೋಧಗಳು ಉಂಟಾಗುವುದು ಸಹಜ, ಇಲ್ಲಿಯೂ ಆರಂಭದಲ್ಲಿ ಭಕ್ತಾಧಿಗಳಿಂದ ವಿರೋಧ ಆಗಬಹುದು ಅಥವಾ ಇಲ್ಲದೆಯೂ ಇರಬಹುದು.  ಆದರೆ ಈ ಒಂದು ಕ್ರಮದಿಂದ ಪರಿಸರಕ್ಕೆ ಹಾಗೂ ದೇವಾಲಯಕ್ಕೆ ಒಳಿತಾಗುವುದರಲ್ಲಿ ಸಂಶಯವಿಲ್ಲ.   ಆದ್ದರಿಂದ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ರವರು, ಆರೋಗ್ಯಾಧಿಕಾರಿಗಳು ಹಾಗೂ ಪರಿಸರ ಇಲಾಖೆಯವರು ಮತ್ತು ದೇವಾಲಯದ ಆಡಳಿತ ಮಂಡಲಿಯವರು ಒಟ್ಟಾಗಿ ಕುಳಿತು ಭಕ್ತರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕರ್ಪೂರದ ಮಾಲಿನ್ಯವನ್ನು ತಡೆಗಟ್ಟುವ ಕುರಿತ ಒಂದು ಯೋಜನೆಯನ್ನು ರೂಪಿಸಿದರೆ ಅದರಿಂದ ಮುಂದೆ ಹಲವು ಪ್ರಯೋಜನಗಳು ದೊರೆಯುವುದರಲ್ಲಿ ಯಾವುದೇ ಸಂದೇಹವಿರುವುದಿಲ್ಲ.

ಶ್ರೀರಾಮ ಜಮದಗ್ನಿ

ಅರಸೀಕೆರೆ
Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....