ಬುಧವಾರ, ಏಪ್ರಿಲ್ 19, 2017

ಅರಸೀಕೆರೆಗೆ ಆಗಮಿಸಲಿರುವ ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಜ್ಯೋತಿ ರಥಯಾತ್ರೆ

ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ


ವಿಶಿಷ್ಟಾದ್ವೈತ ಪ್ರತಿಪಾದಕರಾದ ಭಗವದ್ ಶ್ರೀ ರಾಮಾನುಜಾಚಾರ್ಯರು ಅವತರಿಸಿ ಇದೇ 01-05-2017ಕ್ಕೆ ಒಂದು ಸಾವಿರ ವರ್ಷಗಳು ತುಂಬುತ್ತಿರುವ ಈ ಮಹಾ ಸುದಿನದಲ್ಲಿ, ಶ್ರೀ ಯದುಗಿರಿ ಯತಿರಾಜ ಮಠ ಮೂಲಸ್ಥಾನ, ತಿರುನಾರಾಯಣಪುರ ಮೇಲುಕೋಟೆಯ 41ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್ ಸ್ವಾಮೀಜಿಗಳ ನೇತೃತ್ವದಲ್ಲಿ ಭಗವದ್ ಶ್ರೀ ರಾಮಾನುಜರ ಹುಟ್ಟೂರಾದ ಶ್ರೀಪೆರಂಬದೂರಿನಿಂದ “ಶ್ರೀ ರಾಮಾನುಜರ ಜ್ಯೋತಿ”ಯನ್ನು ಪ್ರಜ್ವಲಿಸಿಕೊಂಡು ಬಂದು ಕರ್ನಾಟಕದಾದ್ಯಂತ ಪ್ರವಾಸ ಕೈಗೊಂಡು ಶ್ರೀ ರಾಮಾನುಜರ ಸಂದೇಶಗಳನ್ನು ಎಲ್ಲರಿಗೂ ಪ್ರಸರಿಸುತ್ತಾ, ದಿನಾಂಕ 01-05-2017ನೇ ಸೋಮವಾರ ಕೆರೆತೊಂಡನೂರಿನಲ್ಲೂ, ದಿನಾಂಕ 14-05-2017ನೇ ಭಾನುವಾರದಂದು ಬೆಂಗಳೂರು ಅರಮನೆ ಮೈದಾನದಲ್ಲಿ “ವಿಶ್ವಮಂಗಳ ಮಹೋತ್ಸವ”ವನ್ನು ಹಮ್ಮಿಕೊಳ್ಳಲಾಗಿದೆ.

ಹಾಸನ ಜಿಲ್ಲೆ ಅರಸೀಕೆರೆ ನಗರಕ್ಕೆ ಭಗವದ್ ಶ್ರೀ ರಾಮಾನುಜಾಚಾರ್ಯರ ಸಹಸ್ರ ಸಂಭ್ರಮದ "ಶ್ರೀ ರಾಮಾನುಜ ಜ್ಯೋತಿ" ಭಕ್ತಿರಥಯಾತ್ರೆಯು ದಿನಾಂಕ 20-04-2017ನೇ ಗುರುವಾರ ಸಾಯಂಕಾಲ 5 ಗಂಟೆಗೆ ಸರಿಯಾಗಿ, ಪಟ್ಟಣದ ಹಾಸನರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಆಗಮಿಸಲಿದೆ.


ರಥಯಾತ್ರೆಯೊಂದಿಗೆ ಶ್ರೀ ಯದುಗಿರಿ ಯತಿರಾಜ ಮಠ, ಮೇಲುಕೋಟೆಯ ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್ ಸ್ವಾಮಿಗಳು, ಶ್ರೀ ಕ್ಷೇತ್ರ ಬೆಲಗೂರಿನ ಅವಧೂತ ಸದ್ಗುರು ಶ್ರೀಶ್ರೀಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿಯವರು, ಶ್ರೀ ಲಕ್ಷ್ಮೀನರಸಿಂಹ ಕ್ಷೇತ್ರ ಅರಸೀಕೆರೆಯ ಪರಂಪರ ಅವಧೂತ ಸದ್ಗುರು ಶ್ರೀ ಸತೀಶ್ ಶರ್ಮಾಜಿ ಮಹಾರಾಜ್ ಇವರುಗಳ ದಿವ್ಯ ಸಾನಿಧ್ಯದಲ್ಲಿ ರಥಯಾತ್ರೆಯನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ಯತಿವರ್ಯರು ಮತ್ತು ಆಹ್ವಾನಿತ ಗಣ್ಯವ್ಯಕ್ತಿಗಳಿಂದ ಪುಷ್ಪಾರ್ಚನೆ, ನಂತರ ರಥಯಾತ್ರೆಯು ಅರಸೀಕೆರೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ರೀಡಿಂಗ್ ರೂಂ ರಸ್ತೆಯಲ್ಲಿರುವ ಶ್ರೀ ಸೀತಾರಾಮ ಕಲ್ಯಾಣ ಮಂದಿರಕ್ಕೆ ಆಗಮಿಸಲಿದೆ.  ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ರಾತ್ರಿ ಸ್ವಾಮೀಜಿಯವರಿಂದ ಆಶೀರ್ವಚನ ನಂತರ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದೆ.

ರಾತ್ರಿ 9 ಗಂಟೆಗೆ ರಥಯಾತ್ರೆಯು ಅರಸೀಕೆರೆ ತಾಲ್ಲೂಕು ಬೆಟ್ಟದಪುರ ಗ್ರಾಮದ ಶ್ರೀ ರಂಗಕ್ಷೇತ್ರ ಶ್ರೀ ರಂಗನಾಥಸ್ವಾಮಿ ಸನ್ನಿಧಿಗೆ ಆಗಮಿಸಲಿದೆ.  ದಿನಾಂಕ 21-04-2017ನೇ ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ಶ್ರೀ ರಂಗನಾಥಸ್ವಾಮಿ ಮತ್ತು ಭಗವದ್ ಶ್ರೀ ರಾಮಾನುಜರಿಗೆ ತಿರುಮಂಜನ, ತಿರುವಾರಾಧನ, ಮಹಾನಿವೇದನ, ಬೆಳಿಗ್ಗೆ 8 ಗಂಟೆಗೆ ಮಹಾ ಮಂಗಳಾರತಿ, ಶಾತ್ತುಮೊರೈ, ನಂತರ ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

ಈ ಎಲ್ಲ ಕಾರ್ಯಕ್ರಮಗಳು ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್ ರವರ ಸಾನಿಧ್ಯದಲ್ಲಿ ನಡೆಯಲಿದೆ.


ಈ ಕಾರ್ಯಕ್ರಮದಲ್ಲಿ ಎಲ್ಲ ಭಕ್ತ ಬಾಂಧವರು ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ ಭಗವದ್ ಶ್ರೀ ರಾಮನುಜರ ಕೃಪೆಗೆ ಪಾತ್ರರಾಗಲು ಕೋರಿದೆ.

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....