ಶುಕ್ರವಾರ, ಏಪ್ರಿಲ್ 7, 2017

ವಿಶ್ವ ಆರೋಗ್ಯ ದಿನಾಚರಣೆ

ಅರಸೀಕೆರೆ ಪಟ್ಟಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ  ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಆಚರಿಸಲಾಯಿತು.  ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಜನ ಜಾಗೃತಿ ಜಾಥಾವನ್ನು ತಾ.ಪಂ ಅಧ್ಯಕ್ಷೆ ಮಂಜುಳಾ ಬಾಯಿ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು. ಜಾಥಾ ಬಿ.ಎಚ್ ರಸ್ತೆ ಮೂಲಕ ಸಾಗಿ ಅರಸೀಕೆರೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ, ಹಿರಿಯ ವೈದ್ಯರಾದ ಡಾ. ಕೆ.ಎಲ್.ಚಂದ್ರಶೇಖರ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಸಂಸ್ಥಾಪನಾ ದಿನದ ನೆನಪಿಗಾಗಿ, ಪ್ರತಿ ವರ್ಷ ಏಪ್ರಿಲ್ 7 ರಂದು “ವಿಶ್ವ ಆರೋಗ್ಯ ದಿನಾಚರಣೆ”ಯನ್ನು ಆಚರಿಸಲಾಗುತ್ತದೆ. ಜಗತ್ತಿನ ಹಲವೆಡೆ ಇಂದು ಸಭೆ, ಸಮಾರಂಭ, ಜಾಗೃತಿ ಜಾತ ಇತ್ಯಾದಿಗಳು ನಡೆಯುತ್ತವೆ.  ಈ ವರ್ಷದ ಘೋಷಣಾ ವಾಕ್ಯ “Depression : let’s talk”, “ಖಿನ್ನತೆ : ಮಾತನಾಡೋಣ” ಎಂದು.

ಖಿನ್ನತೆ :-
ಕೆಲವು ಬೇಸರದ ಘಟನೆಗಳು ನಡೆದಾಗ ದುಃಖವಾಗುವುದು ಸಹಜ. ಆದರೆ, ಈ ಭಾವನೆ ತುಂಬಾ ದಿನಗಳವರೆಗೆ ಇದ್ದರೆ (ಎರಡು ವಾರಗಳಿಗಿಂತ ಹೆಚ್ಚು) ಅಥವಾ ಮತ್ತೆ ಮತ್ತೆ ಕಾಣಿಸಿಕೊಂಡು ದೈನಂದಿನ ಜೀವನ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಇದು ಕ್ಲಿನಿಕಲ್ ಖಿನ್ನತೆಯ (ಡಿಪ್ರೆಷನ್) ಚಿಹ್ನೆಯಾಗಿರುತ್ತದೆ. ಇದಕ್ಕೆ ಚಿಕಿತ್ಸೆ ಅಗತ್ಯ.
ಖಿನ್ನತೆಯು ವ್ಯಕ್ತಿಯ ಯೋಚನೆ, ಭಾವನೆ, ವರ್ತನೆ, ಸಂಬಂಧಗಳು, ಕೆಲಸ ಮಾಡುವ ಸಾಮರ್ಥ್ಯ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ತೀವ್ರವಾದ ಖಿನ್ನತೆ ಇರುವ ವ್ಯಕ್ತಿ ಆತ್ಮಹತ್ಯೆಯ ಪ್ರಯತ್ನ ಕೂಡ ಮಾಡಬಹುದು.
ಖಿನ್ನತೆಯ ಕೆಲವು ಲಕ್ಷಣಗಳು ಹೀಗಿವೆ:

    ಹೆಚ್ಚಿನ ಸಮಯದಲ್ಲಿ ದುಃಖ ಅಥವಾ ಬೇಸರದಲ್ಲಿರುವುದು.
    ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಲು ಕಷ್ಟ ಪಡುವುದು ಮತ್ತು ಅವುಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು. ದಿನವಿಡೀ ಸುಸ್ತಾದಂತೆ ಅನಿಸುವುದು. ಮುಂಚೆ ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸಗಳಲ್ಲಿ ಈಗ ನಿರಾಸಕ್ತಿಯ ಭಾವ.
    ಏಕಾಗ್ರತೆಯ ಕೊರತೆ, ಯೋಚಿಸಲು ಅಥವಾ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು (ಉದಾ: ಹವ್ಯಾಸ, ಅಧ್ಯಯನದ ಮೇಲೆ ಗಮನ ನೀಡಲು ಕಷ್ಟ, ಇತ್ಯಾದಿ).
    ಆತ್ಮವಿಶ್ವಾಸ ಮತ್ತು ಆತ್ಮಗೌರವ ಕಡಿಮೆಯಾಗುವುದು.
    ತನ್ನ ಬಗ್ಗೆ, ಜೀವನದ ಬಗ್ಗೆ ಹಾಗೂ ಭವಿಷ್ಯದ ಬಗ್ಗೆ ಋಣಾತ್ಮಕ ಭಾವನೆ.
    ಹಸಿವಾಗದಿರುವುದು ಅಥವಾ ಅತಿಯಾಗಿ ತಿನ್ನುವುದು.
    ಹಿಂದಿನ ಸೋಲುಗಳಿಗೆ ತನ್ನನ್ನೇ ದೂಷಿಸಿಕೊಳ್ಳುವುದು, ಅಪರಾಧಿ ಭಾವ; ತಾನು ಅನುಪಯುಕ್ತ ಎಂಬ ಭಾವನೆ.
    ಓದು, ಕೆಲಸ, ಮತ್ತು ಇತರ ಕಾರ್ಯಗಳಲ್ಲಿ ನಿರಾಸಕ್ತಿ.
    ಸರಿಯಾಗಿ ನಿದ್ರೆ ಬಾರದಿರುವುದು ಅಥವಾ ನಿದ್ರೆ ಮಾಡಲು ಸಾಧ್ಯವೇ ಆಗದಿರುವುದು.
    ತಲೆ ನೋವು, ಕತ್ತು ನೋವು, ಸೆಳೆತ ಹೀಗೆ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು
    ಆತ್ಮಹತ್ಯೆ ಅಥವಾ ಸ್ವಯಂ ಹಾನಿಯ ಬಗ್ಗೆ ಯೋಚಿಸುವುದು

ಖಿನ್ನತೆಗೆ ಚಿಕಿತ್ಸೆ :
ಖಿನ್ನತೆಯು ಹೆಚ್ಚಾಗಿ ಮನಸ್ಸಿನಲ್ಲೇ ಅಡಗಿರುತ್ತದೆ. ಜನರು ಈ ಬಗ್ಗೆ ಮುಕ್ತವಾಗಿ ಮಾತನಾಡಲು ಹೆದರುತ್ತಾರೆ. ಸಾಮಾಜದಲ್ಲಿ ಅಪಹಾಸ್ಯಕ್ಕೀಡಾಗಬಹುದು, ದುರ್ಬಲ ಎನಿಸಿಕೊಳ್ಳಬಹುದು ಎಂಬ ಭಯದಿಂದ ನಗೆ ಬೀರಿ ದುಃಖವನ್ನು ಮುಚ್ಚಿಡುತ್ತಾರೆ. ಸಮಾಜದಲ್ಲಿ ಬೇರೂರಿರುವ ಕಳಂಕದಿಂದ ಜನರು ಮನೋವೈದ್ಯರ ಸಹಾಯ ಕೇಳಲು ಹಿಂಜರಿಯುತ್ತಾರೆ.  ಖಾಯಿಲೆಯ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ, ಖಿನ್ನತೆಯ ಲಕ್ಷಣಗಳನ್ನು ಗುರುತಿಸಲಾಗದೇ ಧೀರ್ಘ ಕಾಲ ತಾವೂ ಬಳಲುತ್ತಾರೆ ಮತ್ತು ಕುಟುಂಬದವರು ಸಹ ಯಾತನೆ ಪಡುತ್ತಾರೆ.
ಸ್ವಲ್ಪ ಮಟ್ಟದ ಖಿನ್ನತೆಗೆ ಆಪ್ತಸಮಾಲೋಚನೆ ಅಥವಾ ಇತರ ಥೆರಪಿಗಳು ಸಾಕಾಗುತ್ತವೆ. ತೀವ್ರವಾದ ಖಿನ್ನತೆಗೆ ಮಾತ್ರ ಥೆರಪಿಯೊಂದಿಗೆ ಔಷಧಗಳ ಅಗತ್ಯವಿರುತ್ತದೆ.
ಖಿನ್ನತೆಯ ಚಿಕಿತ್ಸೆಯಲ್ಲಿ ಹಲವು ವಿಧಾನಗಳಿವೆ. ಖಿನ್ನತೆಯ ತೀವ್ರತೆ, ವ್ಯಕ್ತಿಯ ಆರೋಗ್ಯದ ಸ್ಥಿತಿ ಮತ್ತು ಚೇತರಿಸಿಕೊಳ್ಳಲು ಅವರಲ್ಲಿರುವ ಚೈತನ್ಯದ ಆಧಾರದ ಮೇಲೆ ವೈದ್ಯರು ಚಿಕಿತ್ಸೆಯ ನಿರ್ಧಾರ ಮಾಡುತ್ತಾರೆ.
ಖಿನ್ನತೆಯ ಚಿಕಿತ್ಸೆಯಲ್ಲಿ ವಿವಿಧ ಮನೋವೈಜ್ಞಾನಿಕ ಥೆರಪಿಗಳು ಪರಿಣಾಮಕಾರಿ ಎಂದು ಗುರುತಿಸಲಾಗಿದೆ. ಸಕಾರಾತ್ಮಕ ಚಿಂತನೆಗಳು ಮತ್ತು ಸಮಸ್ಯೆಯನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ರಿಲಾಕ್ಸೇಶನ್ ವಿಧಾನಗಳನ್ನು ಕಲಿಸಲಾಗುತ್ತದೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ, ಸಪೋರ್ಟಿವ್ ಥೆರಪಿ, ಮೈಂಡ್ಫುಲ್ನೆಸ್ ಬೇಸ್ಡ್ ಕಾಗ್ನಿಟಿವ್ ಥೆರಪಿ ಮತ್ತು ಇತರ ವಿಧಾನಗಳನ್ನು ಬಳಸುತ್ತಾರೆ.
ತೀವ್ರವಾದ ಖಿನ್ನತೆಗೆ ವೈದ್ಯರು ಔಷಧಿಗಳನ್ನು (antidepressants) ಶಿಫಾರಸು ಮಾಡುತ್ತಾರೆ.
ಮಧುಮೇಹ, ಥೈರಾಯ್ಡ್ ಅಥವಾ ಇತರ ಖಾಯಿಲೆಗಳೊಂದಿಗೆ ಬಂದಿರುವ ಖಿನ್ನತೆಯಾದರೆ, ಸಮಸ್ಯೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುತ್ತಾರೆ.

(ಮಾಹಿತಿ : http://kannada.whiteswanfoundation.org/disorder/depression)

ಅರಸೀಕೆರೆ ಪಟ್ಟಣದಲ್ಲಿಂದು ವಿಶ್ವ ಆರೋಗ್ಯ ದಿನಾಚರಣೆ ಆಚರಿಸಲಾಯಿತು

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....