ಬುಧವಾರ, ಜುಲೈ 5, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಮಹಾ ರಥೋತ್ಸವ

Arsikere

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಮಹಾ ರಥೋತ್ಸವವು ಬುಧವಾರದಂದು ಭಕ್ತ ಜನಸಾಗರದ ಸಮ್ಮುಖದಲ್ಲಿ ವೈಭೋಗದಿಂದ ಜರುಗಿತು. 

ಇಂದು ಬೆಳಗಿನಿಂದಲೇ ವಿಶೇಷ ಸೇವೆಗಳು ಪ್ರಾರಂಭಗೊಂಡವು, ಯಾತ್ರಾ ದಾನೋತ್ಸವ, ಶ್ರೀ ಕೃಷ್ಣಗಂಧೋತ್ಸವ, ಹೂವಿನ ಸೇವೆ, ನಿತ್ಯೋತ್ಸವ, ಪ್ರಾಕಾರೋತ್ಸವ, ಸೂರ್ಯಮಂಡಲೋತ್ಸವ, ರಥ ಮಂಟಪ ಸೇವೆ, ವಸಂತಸೇವೆ ಹಾಗೂ ರಥದಮೇಲೆ ಪೊಂಗಲು ಸೇವೆಗಳು ಜರುಗಿದವು.  11 ಗಂಟೆಯಿಂದ 12.30 ರೊಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ವೈಖಾನಸಾಗಮರೀತ್ಯ ರಥಾರೋಹಣ ಜರುಗಿತು.  ನೆರೆದಿದ್ದ ಸಹಸ್ರಾರು ಭಕ್ತಾಧಿಗಳ ಗೋವಿಂದ ನಾಮಸ್ಮರಣೆಯ ಜಯಘೋಷದ ನಡುವೆ ರಥವನ್ನು ಎಳೆಯಲಾಯಿತು.  ರಥದ ಕಳಸಕ್ಕೆ ಭಕ್ತರು ಬಾಳೆಹಣ್ಣನ್ನು ತೂರಿ ಭಕ್ತಿಸಮರ್ಪಿಸಿದರು.

ಅರಸೀಕೆರೆ ಶಾಸಕರಾದ ಕೆ.ಎಮ್.ಶಿವಲಿಂಗೇಗೌಡರು, ಹಾಸನ ಜಿ.ಪಂ ಅಧ್ಯಕ್ಷೆ ಶ್ವೇತ ದೇವರಾಜ್, ಅರಸೀಕೆರೆ ನಗರಸಭಾಧ್ಯಕ್ಷ ಎಂ.ಸಮೀಉಲ್ಲ, ಉಪಾಧ್ಯಕ್ಷ ಪಾರ್ಥಸಾರಥಿ, ಅರಸೀಕೆರೆ ತಾ.ಪಂ ಅಧ್ಯಕ್ಷೆ ಮಂಜುಳಾಬಾಯಿ ಚಂದ್ರಾನಾಯ್ಕ, ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಎನ್.ವಿ.ನಟೇಶ್ ಸೇರಿದಂತೆ ತಾಲ್ಲೂಕಿನ ಜನಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರುಗಳು, ಕಂದಾಯ ಇಲಾಖೆ, ಮುಜರಾಯಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ರಥೋತ್ಸವ ಸಮಿತಿಯ ಅಧ್ಯಕ್ಷರಾದ ಟಿ.ಆರ್.ನಾಗರಾಜ್ ಹಾಗೂ ಸಮಿತಿಯ ಸದಸ್ಯರುಗಳು, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜಾತ್ರಾ ಮಹೋತ್ಸವಕ್ಕೆ ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅರಸೀಕೆರೆ ಉಪವಿಭಾಗದ ಡಿ.ವೈ.ಎಸ್.ಪಿ ಧಶರಥಮೂರ್ತಿ ರವರ ನೇತೃತ್ವದಲ್ಲಿ ಜಿಲ್ಲೆಯ ಅನೇಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾರ್ಯನಿರ್ವಹಿಸಿದರು.  ಸಿಸಿಟಿವಿ ಕ್ಯಾಮರಾಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿತ್ತು.

ಅರಸೀಕೆರೆ ತಾಲ್ಲೂಕು ಆರೋಗ್ಯ ಇಲಾಖೆಯ ವತಿಯಿಂದ ಜಾತ್ರಾ ಮಹೋತ್ಸವದಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಆರೋಗ್ಯ ಕೇಂದ್ರವನ್ನು ತೆರೆದು ಅಲ್ಲಿಗೆ ವೈದ್ಯರುಗಳನ್ನು ನೇಮಿಸಲಾಗಿತ್ತು.


ಚಿತ್ರಗಳು : ಶ್ರೀರಾಮ ಜಮದಗ್ನಿ
Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....