ಶನಿವಾರ, ಆಗಸ್ಟ್ 26, 2017

ಅರಸೀಕೆರೆಯಲ್ಲಿ ಗಣೇಶನ ವಿಸರ್ಜನೆ ಹೀಗೆ ನಡೆಯುತ್ತಿದೆ

Arsikere


ಬರಪೀಡಿತ ಅರಸೀಕೆರೆ ತಾಲ್ಲೂಕಿನಲ್ಲಿ ಎಲ್ಲ ಕೆರೆ ಕಟ್ಟೆಗಳೂ ಖಾಲಿಯಾಗಿವೆ, ಈ ಸಂದರ್ಭದಲ್ಲಿ ಅರಸೀಕೆರೆ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮಾಡಲು ನೀರಿರುವ ಒಂದು ಜಾಗವಿಲ್ಲ.  ಹೀಗಾಗಿ ಕೆಲವರು ತಮ್ಮ ತಮ್ಮ ಮನೆಯಲ್ಲಿ ಬಕೇಟಿನಲ್ಲಿ ಗಣೇಶನನ್ನು ವಿಸರ್ಜಿಸುತ್ತಿದ್ದಾರೆ. ಇನ್ನು ಕೆಲವು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ, ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ವಿಶೇಷ ಕಾಳಜಿ ವಹಿಸಿ, ಅರಸೀಕೆರೆ ನಗರಸಭೆಯ ಅಧ್ಯಕ್ಷರು ಮತ್ತು ಸದಸ್ಯರುಗಳ ನೇತೃತ್ವದಲ್ಲಿ ಪಟ್ಟಣದ ಕಂತೇನಹಳ್ಳಿ ದೊಡ್ಡಕೆರೆಯಲ್ಲಿ ಸುಮಾರು 15 ಅಡಿ ಆಳದ ಒಂದು ದೊಡ್ಡ ಹೊಂಡವನ್ನು ತುರ್ತಾಗಿ ನಿರ್ಮಿಸಿ ಅದಕ್ಕೆ ಬೋರ್ ವೆಲ್ ಮೂಲಕ ನೀರನ್ನು ಸರಬರಾಜು ಮಾಡಿ ಸಾರ್ವಜನಿಕರಿಗೆ ಗಣೇಶ ವಿಸರ್ಜನೆಗೆ ಅವಕಾಶ ಮಾಡಿದ್ದಾರೆ. 


ಈ ಬರಗಾಲ ಹೀಗೆ ಮುಂದುವರಿದರೆ, ಮುಂದೆ ಗಣೇಶ ವಿಸರ್ಜನೆಗೆ ಬೋರ್ ವೆಲ್ ನೀರೂ ಕೂಡ ದೊರಕುವುದು ಕಷ್ಟವಾಗುತ್ತದೆ.  ಆಗ ಗುಂಡಿತೋಡಿ ಗಣೇಶನನ್ನು ಮಣ್ಣಿನಿಂದ ಮುಚ್ಚಬೇಕಾಗಬಹುದು.  ದೈವ ಕೃಪೆಯಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದಲ್ಲಿ ಮಾತ್ರ ಪರಿಸ್ಥಿತಿ ಸುಧಾರಿಸಬಹುದು. 


Share:

ಶುಕ್ರವಾರ, ಆಗಸ್ಟ್ 25, 2017

ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯ ಆಗಮನಕ್ಕೆ ಈ ದಿನ ಆಕಾಶದಿಂದ ತುಂತುರು ಮಳೆಯ ಸಿಂಚನವಾಗಿ ಶುಭ ಮುನ್ಸೂಚನೆ ನೀಡಿದೆ.  ತಾಲ್ಲೂಕಿನಾದ್ಯಂತ ಮಳೆಬೆಳೆ ಇಲ್ಲದೇ ಜನರು ರೈತಾಪಿವರ್ಗದವರು ಕಂಗಾಲಾಗಿದ್ದಾರೆ.  ಯಾವುದೇ ಕೆರೆಕಟ್ಟೆಗಳಲ್ಲಿ ನೀರಿಲ್ಲದೇ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.  ಅರಸೀಕೆರೆ ಪಟ್ಟಣದ ಕೆರೆಯಲ್ಲಿ ನೀರಿಲ್ಲದೇ ಇರುವುದರಿಂದ ಕಳೆದ ಕೆಲವು ವರ್ಷಗಳಿಂದ ಗಣೇಶನ ವಿಸರ್ಜನೆಗೆ ಗುಂಡಿತೋಡಿ ಅದಕ್ಕೆ ನೀರು ತುಂಬಿಸಿ ಗಣಪತಿಯನ್ನು ವಿಸರ್ಜಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶ್ರೀ ಪ್ರಸನ್ನ ಗಣಪತಿಯ ಕೃಪೆಯಿಂದ ಈ ವರ್ಷ ನಮ್ಮ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿ ಎಲ್ಲ ಕೆರೆಕಟ್ಟೆಗಳು ತುಂಬಿಹರಿಯಲಿ, ನಮ್ಮ ಅರಸೀಕೆರೆಯ ಕಂತೇನಹಳ್ಳಿ ಕೆರೆಯೂ ತುಂಬಿ ಕೋಡಿ ಬೀಳಲಿ, ಅದರಲ್ಲಿ ನಮ್ಮ ಹೆಮ್ಮೆಯ ಶ್ರೀ ಪ್ರಸನ್ನ ಗಣಪತಿಯವರ “ತೆಪ್ಪೋತ್ಸವ” ವೈಭವದಿಂದ ಜರುಗಲಿ ಎಂದು ಪ್ರಾರ್ಥಿಸೋಣ.

ತಮ್ಮೆಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು


ಅರಸೀಕೆರೆ.in


Share:

ಗುರುವಾರ, ಆಗಸ್ಟ್ 24, 2017

ಅರಸೀಕೆರೆ ತಾಲ್ಲೂಕು ಮಾಡಾಳು ಶ್ರೀ ಸ್ವರ್ಣಗೌರಿ ದೇವಿಯ ಪ್ರತಿಷ್ಠಾಪನೆ

Arsikere


ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದಲ್ಲಿ ಶ್ರೀ ಸ್ವರ್ಣಗೌರಿ ದೇವಿಯ ಪ್ರತಿಷ್ಠಾಪನೆ ಸಂಭ್ರಮದಿಂದ ಜರುಗಿತು.  ಲಿಂಗೈಕ್ಯ ಶಿವಲಿಂಗಸ್ವಾಮಿಯವರು ನೀಡಿರುವ ಮೂಗುತಿಯನ್ನು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಶ್ರೀಶ್ರೀಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರು ಇಂದು ಬೆಳಿಗ್ಗೆ ಬಾವಿಯ ಬಳಿ ಪೂಜಿಸಿದ ನಂತರ ಗೌರಮ್ಮನವರಿಗೆ ತೊಡಿಸಲಾಯಿತು.  ಮಂಗಳ ವಾದ್ಯಗಳೊಡನೆ ಅಮ್ಮನವರನ್ನು  ಉತ್ಸವದಲ್ಲಿ ದೇವಾಲಯಕ್ಕೆ ತರಲಾಯಿತು.  ಅಲ್ಲಿ ಸ್ವಾಮೀಜಿಯವರ ಸಮ್ಮುಖದಲ್ಲಿ ಶ್ರೀ ಸ್ವರ್ಣಗೌರಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.  ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ನೆರದಿದ್ದರು.  ಭಕ್ತಾಧಿಗಳಿಗೆ ದೇವಸ್ಥಾನದ ವತಿಯಿಂದ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ.  ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.


ಮಾಡಾಳು ಶ್ರೀ ಸ್ವರ್ಣಗೌರಿ ದೇವಿಯವರ ವಿಸರ್ಜನಾ ಮಹೋತ್ಸವವು ಸೆಪ್ಟೆಂಬರ್ 2, 2017 ಶನಿವಾರದಂದು ಸಂಜೆ 6 ಗಂಟೆಗೆ ಜರುಗಲಿದೆ.Share:

ಬುಧವಾರ, ಆಗಸ್ಟ್ 23, 2017

ಮಾಡಾಳು ಶ್ರೀ ಸ್ವರ್ಣಗೌರಿ ದೇವಿಯವರ ಜಾತ್ರಾ ಮಹೋತ್ಸವ

Arsikere


ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದಲ್ಲಿ ನೆಲೆಸಿರುವ ಶ್ರೀ ಸ್ವರ್ಣಗೌರಿ ದೇವಿಯವರ ಜಾತ್ರಾ ಮಹೋತ್ಸವವು ದಿನಾಂಕ 24-08-2017 ರಿಂದ 02-09-2017 ರ ವರೆಗೆ ನಡೆಯಲಿದೆ.

ದಿನಾಂಕ 24-08-2017 ಗುರುವಾರದಂದು ಮಧ್ಯಾನ್ಹ 2 ಗಂಟೆಗೆ ಸ್ವರ್ಣಗೌರಿ ದೇವಿಯವರನ್ನು ಮಂಗಳ ವಾದ್ಯಗಳೊಂದಿಗೆ ಬಾವಿಯ ಬಳಿಯಿಂದ ದೇವಸ್ಥಾನಕ್ಕೆ ಕರೆತಂದು ಪ್ರತಿಷ್ಠಾಪಿಸಲಾಗುತ್ತದೆ.  ದಿನಾಂಕ 02-09-2017 ರಂದು ಸಂಜೆ 6 ಗಂಟೆಗೆ ದೇವಾಲಯದ ಸಮೀಪವಿರುವ ಕಲ್ಯಾಣಿಯಲ್ಲಿ ಅಮ್ಮನವರ ವಿಸರ್ಜನಾ ಮಹೋತ್ಸವ ನಡೆಯಲಿದೆ.

ದೇವಸ್ಥಾನದ ಮುಂಭಾಗದಲ್ಲಿರುವ ಕರ್ಪೂರದ ಕುಂಡದಲ್ಲಿ ಇದುವರೆಗೂ ಭಕ್ತರು ಸಲ್ಲಿಸುತ್ತಿದ್ದ ಕರ್ಪೂರದ ಹರಕೆಯಿಂದ ದೇವಾಲಯದ ಸುತ್ತಮುತ್ತ ಮಾಲಿನ್ಯ ಉಂಟಾಗುತ್ತಿತ್ತು.  ಇದನ್ನು ಪರಿಹರಿಸಲು ದೇವಸ್ಥಾನ ಮಂಡಲಿಯವರು ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಹೊಗೆ ಕೊಳವೆ ಚಿಮಣಿಯನ್ನು ಸ್ಥಾಪಿಸಿದ್ದಾರೆ.  ಕರ್ಪೂರ ಕುಂಡದಲ್ಲಿ ಸಲ್ಲಿರುವ ಹರಕೆ ಕರ್ಪೂರವು ಉರಿದು ಕೊಳೆವೆಯಲ್ಲಿ ಹೊಗೆ ಹೋಗಿ ಮಾಲಿನ್ಯವು ಸ್ವಲ್ಪ ಮಟ್ಟಿಗೆ ನಿಯಂತ್ರಣಗೊಳ್ಳಲಿದೆ.

ದೇವಸ್ಥಾನದ ಮುಂಭಾಗದಲ್ಲಿದ್ದ ಮಣ್ಣಿನ ರಸ್ತೆಯನ್ನು ಇದೀಗ ಸಂಪೂರ್ಣವಾಗಿ ಕಾಂಕ್ರೀಟಿನಿಂದ ನಿರ್ಮಿಸಲಾಗಿದೆ ಹಾಗೂ ದೇವಸ್ಥಾನದ ಸುತ್ತಲೂ ಬಾಕ್ಸ್ ಚರಂಡಿಯನ್ನು ಸ್ಥಳೀಯ ಪಂಚಾಯಿತಿಯ ವತಿಯಿಂದ ನಿರ್ಮಿಸಲಾಗಿದೆ.  ಇದರಿಂದಾಗಿ ಭಕ್ತಾದಿಗಳಿಗೆ ಓಡಾಡಲು ಅನುಕೂಲ ಉಂಟಾಗಲಿದೆ.
Share:

ಶನಿವಾರ, ಆಗಸ್ಟ್ 19, 2017

ವಿಶ್ವ ಛಾಯಾಗ್ರಹಣ ದಿನ

Arsikere


ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ, ಅರಸೀಕೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಅರಸೀಕೆರೆ ಕಸಬಾ ಹೋಬಳಿ ಬೊಮ್ಮೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ಅರಸೀಕೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಬಿ.ವಿ. ಗೋವಿಂದರಾಜು ನಾಯ್ಡು ರವರು ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಿದರು.  ಶ್ರೀರಾಮ ಜಮದಗ್ನಿ ರವರು ವಿಶ್ವ ಛಾಯಾಗ್ರಹಣ ದಿನದ ಕುರಿತು ಮಾತನಾಡಿದರು. 

ಸಂಘದ ಕಾರ್ಯದರ್ಶಿ ಜಗದೀಶ್, ಖಜಾಂಚಿ ಖಲೀಲ್, ಶಾಲೆಯ ಮುಖ್ಯೋಪಾಧ್ಯಾಯರಾದ ಸುಮಿತ್ರ, ಶಾಲೆಯ ಶಿಕ್ಷಕರು ಹಾಗೂ ಛಾಯಾಗ್ರಾಹಕ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು.

Share:

ಮಂಗಳವಾರ, ಆಗಸ್ಟ್ 15, 2017

ಸ್ವಾತಂತ್ರ್ಯ ದಿನಾಚರಣೆ 2017

Arsikereಅರಸೀಕೆರೆ ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಇಂದು ಸಂಭ್ರಮ ಸಡಗರಗಳಿಂದ 71 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.  ಅರಸೀಕೆರೆ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಆದ ಶ್ರೀ.ಎನ್.ವಿ.ನಟೇಶ್ ರವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.  ನಂತರ ತೆರದ ಜೀಪಿನಲ್ಲಿ ಕವಾಯತು ವೀಕ್ಷಣೆ ನಡೆಸಿದರು.  ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ, ಮಾಜಿ ಸೈನಿಕರಿಗೆ ಮತ್ತು ತಾಲ್ಲೂಕಿನ್ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಶ್ರೀ.ಕೆ.ಎಂ.ಶಿವಲಿಂಗೇಗೌಡರು ಅಧ್ಯಕ್ಷರ ಭಾಷಣ ಮಾಡಿದರು.  ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನಸೂರೆಗೊಂಡಿತು.


Share:

ಶನಿವಾರ, ಆಗಸ್ಟ್ 12, 2017

ಅರಸೀಕೆರೆ ಎಪಿಎಂಸಿ ಚುನಾವಣಾ ಫಲಿತಾಂಶ

Arsikere


ಬಹು ಕುತೂಹಲ ಮೂಡಿಸಿದ್ದ ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣಾ ಫಲಿತಾಂಶ ಇಂದು ಪ್ರಕಟವಾಯಿತು.  ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಸಂತ ಮರಿಯ ಪ್ರೌಢಶಾಲೆಯಲ್ಲಿ ಪ್ರಾರಂಭಗೊಂಡ ಮತ ಎಣಿಕೆಯು ಮಧ್ಯಾನ್ಹ 3 ಗಂಟೆಯ ಹೊತ್ತಿಗೆ ಮುಕ್ತಾಯವಾಯಿತು.

ತಾಲ್ಲೂಕಿನ ಮಾರುಕಟ್ಟೆ ಸಮಿತಿಯ ಒಟ್ಟು 13 ಸ್ಥಾನಗಳ ಪೈಕಿ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾದ್ದರಿಂದ 12 ಸ್ಥಾನಗಳಿಗೆ ದಿನಾಂಕ 10-08-2017 ರಂದು ಚುನಾವಣೆ ನಡೆದಿತ್ತು.

12 ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾದರೆ, 4 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು. 1 ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲವು ಪಡೆದರು.


ಚುನಾವಣೆಯ ಉಸ್ತುವಾರಿಯನ್ನು ಅರಸೀಕೆರೆ ತಾಲ್ಲೂಕು ದಂಡಾಧಿಕಾರಿಯವರು ವಹಿಸಿದ್ದರು. ಚುನಾವಣಾಧಿಕಾರಿಗಳಾಗಿ ಬಿಇಓ ನಟರಾಜ್ ರವರು ಕಾರ್ಯ ನಿರ್ವಹಿಸಿದರು.  ಅರಸೀಕೆರೆ ಪೊಲೀಸ್ ಉಪವಿಭಾಗಾಧಿಕಾರಿಗಳಾದ ದಶರಥ ಮೂರ್ತಿ ರವರ ನೇತೃತ್ವದಲ್ಲಿ ತಾಲ್ಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.


Share:

ಗುರುವಾರ, ಆಗಸ್ಟ್ 10, 2017

ಅರಸೀಕೆರೆ ಎಪಿಎಂಸಿ ಚುನಾವಣೆಗೆ ಮತದಾರರ ನೀರಸ ಪ್ರತಿಕ್ರಿಯೆ

ಅರಸೀಕೆರೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 12 ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯಿತು.  ಮತದಾನ ಪ್ರಕ್ರಿಯೆ ಶಾಂತಯುತವಾಗಿ ನಡೆಯಿತು, ಆದರೆ ಮತದಾರರ ಪ್ರತಿಕ್ರಿಯೆ ಬಹಳ ನೀರಸವಾಗಿದ್ದು ಶೇ.48.17 ರಷ್ಟು ಮತದಾನವಾಯಿತು. ಅಗ್ಗುಂದ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.35.76 ಮತದಾನವಾಗಿದ್ದರೆ ಅರಸೀಕೆರೆ ವರ್ತಕರ ಕ್ಷೇತ್ರದಲ್ಲಿ ಶೇ.87.18 ಮತದಾನವಾಯಿತು. ಒಟ್ಟು 83,486 ಮತದಾರರ ಪೈಕಿ 40,214 ಮಾತ್ರ ಮತಚಲಾಯಿಸಿದರು.  12ನೇ ತಾರೀಖು ಮತಗಳ ಎಣಿಕೆ ಕಾರ್ಯ ಜರುಗಲಿದೆ.Share:

ಬುಧವಾರ, ಆಗಸ್ಟ್ 9, 2017

ಅರಸೀಕೆರೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Arsikere


ಶಾಲಾ ಕಾಲೇಜು ವ್ಯಾಸಂಗಕ್ಕೆ ಬೇರೆ ಬೇರೆ ಊರುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಹೊಂದಿದ್ದಾರೆ ಎಂಬ ಕಾರಣಕ್ಕೆ ಕೆಲ ಬಸ್ಸಿನಲ್ಲಿ ಹತ್ತಲು ಅವಕಾಶ ನೀಡುತ್ತಿಲ್ಲವಾದ್ದರಿಂದ, ಮತ್ತು ಶಾಲಾ ಕಾಲೇಜು ಪ್ರಾರಂಭದ ಸಮಯಕ್ಕೆ ತಲುಪುವಂತೆ ಬಸ್ಸುಗಳ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಆಗ್ರಹಿಸಿ ಇಂದು ಬೆಳಿಗ್ಗೆ ಅರಸೀಕೆರೆ ಪಟ್ಟಣದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಧಿಡೀರ್ ಪ್ರತಿಭಟನೆ ನಡೆಸಿದರು.  ಇದರಿಂದಾಗಿ ಪಟ್ಟಣದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.  ಸಾರಿಗೆ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು. ಅರಸೀಕೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಿಲೋಮೀಟರ್ ವರೆಗೂ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.


ಚಿತ್ರ ಮಾಹಿತಿ : ಪೋಲೀಸ್ ಇಲಾಖೆShare:

ಸೋಮವಾರ, ಆಗಸ್ಟ್ 7, 2017

ಚಂದ್ರ ಗ್ರಹಣ

Arsikere


ಖಗೋಳ ವಿಸ್ಮಯಗಳಲ್ಲಿ ಒಂದಾದ “ಚಂದ್ರಗ್ರಹಣ” ದಿನಾಂಕ 07-08-2017 ಸೋಮವಾರದಂದು ರಾತ್ರಿ 10.22 ನಿಮಿಷದಿಂದ 12.49 ರ ವರೆಗೆ ಸಂಭವಿಸಿತು. ಅರಸೀಕೆರೆ ಪಟ್ಟಣದಲ್ಲಿ ಸಂಜೆಯಿಂದಲೇ ಮೋಡಕವಿದ ವಾತಾವಣವಿದ್ದು, ಆಗ್ಗಾಗೆ ತುಂತುರು ಮಳೆ ಬೀಳುತ್ತಿತ್ತು. ರಾತ್ರಿ ಮೋಡದ ಮರೆಯಲ್ಲಿ ಆಗ್ಗಾಗ್ಗೆ ಕಾಣುತ್ತಿದ್ದ ಚಂದ್ರ ಗ್ರಹಣವನ್ನು ಪಟ್ಟಣದ ಸಾಯಿನಾಥ ರಸ್ತೆಯಲ್ಲಿರುವ ಸೂರ್ಯ ಸ್ಟೂಡಿಯೋ ಮಾಲೀಕರಾದ ಶ್ರೀ. ರಂಗನಾಥ ಹೆಬ್ಬಾರ್ ರವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
Share:

ಶನಿವಾರ, ಆಗಸ್ಟ್ 5, 2017

ಕಾಟಾಚಾರಕ್ಕಿರುವ ಅರಸೀಕೆರೆ ನಗರಸಭೆ ವೆಬ್ ಸೈಟ್

Arsikere


ಅರಸೀಕೆರೆ ನಗರಸಭೆಯ ಅಧಿಕೃತ ವೆಬ್ ಸೈಟ್ http://www.arasikerecity.mrc.gov.in/kn/Home ಗೆ ತಾವು ಭೇಟಿ ಕೊಟ್ಟರೆ ಒಂದರ ಮೇಲೆ ಒಂದು ಅಚ್ಚರಿಯ ಮಾಹಿತಿ ದೊರೆಯುತ್ತದೆ.  ಹೆಸರಿಗೆ ಅರಸೀಕೆರೆ ನಗರಸಭೆ ಎಂದಿದೆ, ಆದರೆ ಈ ವೆಬ್ ಸೈಟಿನ ಕನ್ನಡ ಆವೃತ್ತಿಯ ಮುಖಪುಟದಲ್ಲಿ ಮಂಡ್ಯದ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಳಾಸ ಕೂಡ ಮಂಡ್ಯದ ವಿಳಾಸ ಇದೆ. ಹುಡುಕುತ್ತ ಹೋದರೆ ಬರೀ ಅಧ್ವಾನಗಳೇ ಕಾಣುತ್ತವೆ. ವೆಬ್ ಸೈಟಿನ ಇಂಗ್ಲೀಷ್ ಆವೃತ್ತಿಯೂ ಕೂಡ ಹೇಳಿಸಿಕೊಳ್ಳುವಂತಿಲ್ಲ. ಬಹುಶಃ ಈ ವೆಬ್ ಸೈಟನ್ನು ಕಾಟಾಚಾರಕ್ಕೆ ನಿರ್ಮಿಸಿದಂತಿದೆ.


ಅರಸೀಕೆರೆ ನಗರಸಭೆಯ 27 ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ.  ದಯವಿಟ್ಟು ನಗರಸಭೆಯ ಅಧಿಕೃತ ವೆಬ್ ಸೈಟಿನಲ್ಲಿ ಸರಿಯಾದ ಮಾಹಿತಿಗಳು ದೊರಕುವಂತೆ ಐಟಿ ವಿಭಾಗದ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿ


Share:

ಬುಧವಾರ, ಆಗಸ್ಟ್ 2, 2017

ವಾಹನ ಚಾಲಕರಿಗೆ ಅಪಾಯಕಾರಿಯಾಗಿರುವ ಅವೈಜ್ಞಾನಿಕ ಕಾಂಕ್ರೀಟ್ ರಸ್ತೆ

Arsikere


ಅರಸೀಕೆರೆ ಪಟ್ಟಣದ ರೀಡಿಂಗ್ ರೂಂ ರಸ್ತೆಗೆ ಇತ್ತೀಚೆಗೆ ಸಿಮೆಂಟ್ ಕಾಂಕ್ರೀಟ್ ಹಾಕಿ ಮರು ನಿರ್ಮಾಣ ಮಾಡಲಾಯಿತು.  ಸುಮಾರು ಒಂದು ಅಡಿ ದಪ್ಪದಷ್ಟು ಸಿಮೆಂಟ್ ಕಾಂಕ್ರೀಟ್ ಹಾಕಿ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.  ಆದರೆ ಈ ರಸ್ತೆ ನಿರ್ಮಾಣವು ಅತ್ಯಂತ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.  ರಸ್ತೆಯ ಬದಿಗೆ ಯಾವುದೇ ರೀತಿಯ ಪ್ಯಾಕಿಂಗ್ ನೀಡದೇ ಇರುವುದರಿಂದ, ವಾಹನ ಚಾಲನೆ ಮಾಡುವಾಗ ಅಪ್ಪಿತಪ್ಪಿ ರಸ್ತೆಯ ಬದಿಗೆ ವಾಹನ ತಂದರೆ ಅಪಘಾತ ಶತಸಿದ್ಧ.

ಇಂದು (ಬುಧವಾರ) ಇದೇ ರಸ್ತೆಯ ವೆಂಕಟೇಶ್ವರ ಕಲಾಭವನದ ಮುಂಭಾಗದಲ್ಲಿರುವ ತಿರುವಿನಲ್ಲಿ ಎರಡು ಕಾರುಗಳು ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕಿಳಿದವು.  ಸುತ್ತಮುತ್ತಲಿನ ಜನರ ಸಹಕಾರದಿಂದ ಕಾರನ್ನು ಮೇಲೆತ್ತಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಅರಸೀಕೆರೆ ನಗರಸಭೆಯವರು ಈ ಬಗ್ಗೆ ಸೂಕ್ತ ಗಮನ ಹರಿಸಿ, ರಸ್ತೆಯ ಎರಡೂ ಬದಿಗಳಿಗೆ ಮಣ್ಣು ಅಥವಾ ಗ್ರಾವೆಲ್ ಪ್ಯಾಕಿಂಗ್ ನೀಡಿ, ವಾಹನ ಚಾಲಕರ ಸುರಕ್ಷತೆಗೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರ ಆಗ್ರಹ
Share:

ಮಂಗಳವಾರ, ಆಗಸ್ಟ್ 1, 2017

ಸಮುದ್ರದಲ್ಲಿರುವುದು ಸಾವಿರಾರು ನದಿಗಳು.

ಕರ್ನಾಟಕವನ್ನು ಸದ್ಯ ಆಳುತ್ತಿರುವ ಸರಕಾರ ಕಳೆದ ಒಂದು ತಿಂಗಳ ಅವಧಿಯಲ್ಲಿ ಕರ್ನಾಟಕದ ಜನತೆಯ ಆಶೋತ್ತರಗಳ ಈಡೇರಿಕೆ ಎಂಬರ್ಥದಲ್ಲಿ ಮತ್ತು ಅದು ತಮ್ಮ ಸರ್ಕಾರದ ಸಾಧನೆ ಎಂಬಂತೆ  ಮೂರು ವಿಚಾರಗಳಲ್ಲಿ ತನ್ನ ನಿಲುವನ್ನು ಜನತೆಯ ಮುಂದೆ ಪ್ರಕಟಿಸಿದೆ. ಒಂದು: ಲಿಂಗಾಯತ ಎಂಬುದನ್ನು ಪ್ರತ್ಯೇಕ ಧರ್ಮ ಎಂದು ಮಾನ್ಯ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುತ್ತೇನೆ ಎಂದಿದ್ದು. ಎರಡು: ರಾಜ್ಯಕ್ಕೆ ಸ್ವತಂತ್ರವಾದ ಬಾವುಟವನ್ನು ಅಧಿಕೃತಗೊಳಿಸುವ ಪ್ರಕ್ರಿಯೆಯನ್ನು ಶುರು ಮಾಡುತ್ತೇನೆ ಎಂದಿದ್ದು. ಮತ್ತು ಮೂರನೆಯದಾಗಿ ಅಂಬೇಡ್ಕರ್ ಚಿಂತನೆಯ ಹೆಸರಲ್ಲಿ ಸಮಾವೇಶವೊಂದನ್ನು ಏರ್ಪಡಿಸಿ ಅದನ್ನು ರಾಜಕೀಯ ಮೇಲಾಟವನ್ನಾಗಿಸಿದ್ದು.

ಮೇಲ್ನೋಟಕ್ಕೇ ಇವೆಲ್ಲ ಹಾಲಿ ಸರ್ಕಾರವನ್ನು ನಡೆಸುತ್ತಿರುವವರ ಚಿಂತನೆಯೇ ವಿನಾ ಅದೇನೂ ಮಂತ್ರಿಮಂಡಲದ ಶಿಫಾರಸಿನಿಂದಾಗಲೀ ಅಥವ ಸರ್ಕಾರವೇ ರಚಿಸಿದ್ದ ಬೇರಾವುದೋ ಆಯುಕ್ತರ/ ಅಧ್ಯಕ್ಷರ/ ಸಮಿತಿಯ ಶಿಫಾರಸೇನಲ್ಲ. ತನ್ನ ವೈಫಲ್ಯಗಳನ್ನು ಮುಚ್ಚಿಡುವ ಗೇಮ್ ಪ್ಲ್ಯಾನ್ ಇದಾಗಿದೆಯೆಂದು ಎಂಥವರಿಗೂ  ತಿಳಿದಿರುವ ಸಂಗತಿ. ಮೊದಲ ದಾಳದಲ್ಲಿ ಇವರ ಕೆಲಸ ಏನು? ಲಿಂಗಾಯತ ಎಂಬುದನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸುವಂತೆ ವಿವಿಧ ಸಂಘಟನೆಗಳು ಅರ್ಪಿಸಿದ ಮನವಿ ಪತ್ರವನ್ನು‌ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ತನ್ನ ಶಿಫಾರಸನ್ನೂ  ಆ ‌ಮನವಿ ಪತ್ರಕ್ಕೆ ಲಗತ್ತಿಸಿ   ಸಲ್ಲಿಸುವುದು ಮಾತ್ರ! ಒಮ್ಮೆ ಅದನ್ನು ಕೇಂದ್ರ ಸರಕಾರದ ಅಂಗಳಕ್ಕೆ ಒಗೆದ ಮೇಲೆ ಅದರಲ್ಲಿ ಇವರ ಜವಾಬ್ದಾರಿ ಏನೂ ಇಲ್ಲ! ಆಮೇಲೆ ಬೇಕಾದರೆ ಆ ಸಮಸ್ಯೆಯನ್ನು ಎದುರಿಟ್ಟುಕೊಂಡು ಕೇಂದ್ರ ತಲೆ ಚಚ್ಚಿಕೊಳ್ಳಬೇಕು! ಒಂದು ವೇಳೆ, ಕೇಂದ್ರ ಸರಕಾರ “ಸರಿ, ನಾವು ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸುತ್ತೇವೆ” ಎಂದು ಹೇಳಿದ್ದೇ ಆದರೆ ಅದರ ಸಂಪೂರ್ಣ ಕ್ರೆಡಿಟ್ ಅನ್ನು ಪಡೆಯಲು ಈ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಒಂದು ವೇಳೆ ಕೇಂದ್ರದ ಈಗಿನ ಸರ್ಕಾರ  ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಗುರುತಿಸಲು ವಿಳಂಬ ಮಾಡಿತೆಂದರೆ  ಅಥವಾ  ಇದೆಲ್ಲ ಆಗದು ಎಂದು ತಳ್ಳಿಹಾಕಿದರೆ ಆಗ ಕೇಂದ್ರ ಸರಕಾರವನ್ನು  ಮನುವಾದಿ ಸರಕಾರವೆಂದೋ  ಹಿಂದೂಪರ ಕೋಮುವಾದಿ ಸರಕಾರವೆಂದೋ  ಲಿಂಗಾಯತರ ವಿರುದ್ಧ ಇರುವ ಸರಕಾರ ಎಂದೆಲ್ಲ ಗುಲ್ಲೆಬ್ಬಿಸಿ ಎಲ್ಲಾ ಗೂಬೆಗಳನ್ನೂ ಕೇಂದ್ರದ ಮೇಲೆ, ಮೋದಿಯ ಮೇಲೆ ಕೂರಿಸುವುದಕ್ಕೂ ಇವರು  ಸಿದ್ಧರಾಗಿ ಕೂತಿದ್ದಾರೆ! ಈ ಇಡೀ ನಾಟಕದಲ್ಲಿ  ಕಳೆದುಕೊಳ್ಳುವಂಥಾದ್ದು ಏನೇನೂ ಇಲ್ಲ! ಆದರೆ ಕೇಂದ್ರ ಸರಕಾರ ಸಿಕ್ಸರ್ ಎತ್ತಿದರೂ ಬೌಲ್ಡ್ ಆದರೂ ಗೆಲ್ಲವುದು ಮಾತ್ರ ತಾನೇ ಎಂಬ ಆಲೋಚನೆಯಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಗೆ ಅಸ್ತ್ರವೊಂದನ್ನು ತಯಾರಿಸಿದೆ!

ಇನ್ನು ಎರಡನೆಯ ಘನ ವಿಷಯ ಕನ್ನಡ ಬಾವುಟಕ್ಕೆ ಸಂಬಂಧಿಸಿದ್ದು. ಸದಾ ಕನ್ನಡಿಗರ ನಿರಭಿಮಾನವನ್ನೇ ತನ್ನ ರಕ್ಷಣೆಗೆ ಬಳಸಿಕೊಳ್ಳುವ ನಮ್ಮ ರಾಜಕಾರಣ ಈ ವಿಷಯದಲ್ಲೂ ಬಹಳ ಎಚ್ಚರಿಕೆಯ ಹೆಜ್ಜೆಯನ್ನೇ ಇಟ್ಟಿದೆ. ಸರ್ಕಾರ ಅಂದರೆ ಅದರ ಮುಖ್ಯ ಮಂತ್ರಿ‌ ನೀಡಿರುವ ಹೇಳಿಕೆಯಲ್ಲೇ ರಾಜಕೀಯವಿದೆ.  ಅಧಿಕೃತ ಬಾವುಟ ಬೇಕು ಅಂತ ಸರ್ಕಾರವೇನೂ ಈ ವಿಷಯ ಎತ್ತಿಲ್ಲ. ಕನ್ನಡದ ಕಟ್ಟಾಳು, ಹಿರಿಯ ಹೋರಾಟಗಾರರಾದ ಪಾಟೀಲ ಪುಟ್ಟಪ್ಪನವರು ಆ ಬೇಡಿಕೆ ಇಟ್ಟಿದ್ದರಲ್ಲ ಅದನ್ನು ಮಾನ್ಯ ಮಾಡಿ ಅವರ ಬೇಡಿಕೆಗೆ ಸ್ಪಂದಿಸುವ ಸಲುವಾಗಿ ಒಂದು ಕಮಿಟಿ ಮಾಡಿದೆ ಅಷ್ಟೆ. ಕಮಿಟಿ ಕೊಡೋ ತೀರ್ಮಾನಕ್ಕೆ ತಮ್ಮ ಸರಕಾರ ಬದ್ಧವಾಗಿರುತ್ತದೆ – ಎಂದಿದೆ. ಆದರೆ, ಇಲ್ಲೂ ಕೂಡ ಕೇಂದ್ರ ಸರ್ಕಾರಕ್ಕೇ ಗುರಿ ಇಡಲಾಗಿದೆ  ಎಂಬುದನ್ನು ಪ್ರಜ್ಞಾವಂತ ಕನ್ನಡಿಗರು ಅರ್ಥ ಮಾಡಿಕೊಳ್ಳಲೇ ಬೇಕು.ಕನ್ನಡದ ಬಾವುಟಕ್ಕೆ ಅಧಿಕೃತ ಸ್ಥಾನಮಾನ ಕೊಡುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ! ಅದು ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥನಾಗಿರುವ ಕೇಂದ್ರ ಸರ್ಕಾರದ ಕೆಲಸ. ಹಾಗಾಗಿ ಇಲ್ಲಿನ ಅಂದರೆ ರಾಜ್ಯ ಸರ್ಕಾರ ಇರುವ ವ್ಯವಸ್ಥೆಯನ್ನು ಅನುಲಕ್ಷಿಸಿ ಮತ್ತು ತನ್ನ ಮೇಲಿರುವ ಹಕ್ಕೊತ್ತಾಯವನ್ನು ಗಮನಿಸಿ  ಇಲ್ಲಿನ ಜನರ ಅಭಿಪ್ರಾಯದಂತೆ ಹೀಗೆ ಹೀಗೆ ಮಾಡ್ಬೇಕು ಅಂತ ಇದ್ದೇವೆ. ಇದಕ್ಕೆ ಮಾನ್ಯತೆ ಕೊಡಿ – ಅಂತ ಕೇಂದ್ರ ಸರಕಾರಕ್ಕೆ ಒಂದು ಮನವಿಪತ್ರ ಸಲ್ಲಿಸಬಹುದು ಅಷ್ಟೆ. ರಾಜ್ಯ ಕೊಟ್ಟ ಮನವಿ ಸಂವಿಧಾನಾತ್ಮಕವಾಗಿದೆಯೇ? ಅಥವಾ ರಾಷ್ಟ್ರದ ಅಖಂಡತೆಗೆ ಧಕ್ಕೆ ಬರುವಂತಿದೆಯೇ? ಎಂಬುದನ್ನೆಲ್ಲ ನೋಡಿ, ಪರಾಮರ್ಶಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳುವ ಹಕ್ಕು ಮತ್ತು ಜವಾಬ್ದಾರಿ ಎರಡೂ ಇರುವುದು ಕೇಂದ್ರ ಸರಕಾರದ ಮೇಲೆ. ಅದು ಕೇಂದ್ರ ಸರ್ಕಾರದ ಗೃಹ ಇಲಾಖೆ, ಕಾನೂನು ಇಲಾಖೆ ಮತ್ತು ಮಾನವ ಸಂಪನ್ಮೂಲ ಇಲಾಖೆಗಳು ಹಲವು ಸುತ್ತಿನ ಸಭೆ ನಡಾವಳಿಗಳಿಂದ ಆಗಬೇಕಿರುವ ಕೆಲಸ. ಹಾಗಾದರೆ ಇಲ್ಲಿ ನಮ್ಮ ಮುಖ್ಯಮಂತ್ರಿಗಳ ಕೆಲಸ ಏನು? ಈಗಾಗಲೇ ನಾವೆಲ್ಲ ಬಳಸುತ್ತಿರುವ ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ಕೊಡಿ ಎಂಬ ಅರ್ಜಿಯನ್ನು ಈಗ ಹೊಸದಾಗಿ ನೇಮಿಸಿರುವ ಸಮಿತಿಯ ಶಿಫಾರಸಿಗೆ ತನ್ನ ಮುದ್ರೆ ಒತ್ತಿ ಕೇಂದ್ರಕ್ಕೆ ಸಲ್ಲಿಸುವುದು, ಅಷ್ಟೆ! ಕೇಂದ್ರ ಇವರ ಅರ್ಜಿಯನ್ನು ಪುರಸ್ಕರಿಸಿದರೆ ಅದರ ಪೂರ್ತಿ ಕೀರ್ತಿಯನ್ನು ತನ್ನ ಕಿರೀಟಕ್ಕೆ ಇಟ್ಟುಕೊಳ್ಳುವುದು ನಮ್ಮ ರಾಜ್ಯ ಸರ್ಕಾರದ ಉದ್ದೇಶ. ಒಂದು ವೇಳೆ ಕೇಂದ್ರ ಸರ್ಕಾರ  ಈ ಬೇಡಿಕೆ ಅಸಾಂವಿಧಾನಿಕವೆಂದು  ರಾಷ್ಟ್ರಕ್ಕೆ ಒಂದು ಧ್ವಜ ಇರೋವಾಗ ಮತ್ತೊಂದು ಧ್ವಜಕ್ಕೆ ದೇಶದೊಳಗೆ ಮಾನ್ಯತೆ ಕೊಡಲು ಸಾಧ್ಯವಿಲ್ಲ – ಎಂದು ಖಡಕ್ಕಾಗಿ ಹೇಳಿದರೆ ಆಗಲೂ ಲಾಭ ನಮ್ಮ ರಾಜ್ಯ ಸರ್ಕಾರಕ್ಕೇ!  ಆಗ ಕೇಂದ್ರ ಸರ್ಕಾರವನ್ನು  ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಸರಕಾರವೆಂದು ಬಯ್ಯುತ್ತ ತಿರುಗಬಹುದು. ಕೇಂದ್ರ ದಕ್ಷಿಣ ಭಾರತವನ್ನು ತುಳೀತಿದೆ. ಇಂಥ ರಾಷ್ಟ್ರೀಯ ಪಕ್ಷಕ್ಕೆ ಯಾರೂ ಬೆಂಬಲ ಕೊಡಬೇಡಿ ಎನ್ನುತ್ತ ಚುನಾವಣೆ ಸಂದರ್ಭದಲ್ಲಿ ಆಡಬೇಕಿರುವ ಮಾತುಗಳನ್ನು ಹೋಲ್‍ಸೇಲ್ ಆಗಿ ಈಗಾಗಲೇ ಬಾಯಿ ಪಾಠ ಮಾಡಿಕೊಂಡಿದೆ ನಮ್ಮ ರಾಜ್ಯ ಸರ್ಕಾರದ ಮಂತ್ರಿಮಂಡಲ. ಒಟ್ಟಾರೆ, ಈ ವಿಷಯದಲ್ಲೂ ಇವರು ಕಳೆದುಕೊಳ್ಳುವುದು ಏನೂ ಇಲ್ಲ; ಗಳಿಸುವುದೇ ಎಲ್ಲಾ!!

ಇನ್ನು ಮೊನ್ನೆ ಬೆಂಗಳೂರಿನಲ್ಲಿ ನಡೆದ ಅಂಬೇಡ್ಕರ್ ಹೆಸರಿನಲ್ಲಿ ನಡೆದ ಸಮಾವೇಶಕ್ಕೆ ವೆಚ್ಚವಾದ ಹಣ, ಅದನ್ನು ಸಂಘಟಿಸಿದವರ ಹಿನ್ನೆಲೆ, ಅದರಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದವರ ವಿವರ, ಅಲ್ಲಿ ಮಂಡಿತವಾದ ವಿಚಾರ ಧಾರೆ, ಎಲ್ಲವನ್ನೂ ಸರಿಯಾಗಿ ಗಮನಿಸಿದರೆ ಅದು ಕೂಡ ಮುಂಬರುವ ಚುನಾವಣೆಯನ್ನೇ ದೃಷ್ಟಿಯಲ್ಲಿರಿಸಿಕೊಂಡು ಮಾಡಿದ ಆದರೆ ಎಲ್ಲೂ ಪ್ರಕಟವಾಗದ ಚುನಾವಣ ಮ್ಯಾನಿಫೆಶ್ಟೋ. ನಿಜಕ್ಕೂ ಅಂಬೇಡ್ಕರ್ ಚಿಂತನೆಗಳ ಸರಿಯಾದ ಓದು ಮತ್ತು ಅದರ ಪ್ರಭಾವದಿಂದ ಹುಟ್ಟ ಬಹುದಾದ ಹೊಸ ಸಂವೇದನೆ ಇಂಥ ಸಮಾವೇಶಗಳಿಂದ ಸಾಧ್ಯವಿದೆಯಾ ಎಂದು ಆಲೋಚಿಸಬೇಕಿದೆ. ಎಡ ಅಥವ ಬಲ ಒಲವಿನ ಯಾರೇ ರಾಜಕಾರಣಿ ಈಗಾಗಲೇ ಆಗಿ ಹೋದ ನಾಯಕನನ್ನು ತನ್ನ ಲಾಭದ ದೃಷ್ಟಿಯಿಂದ ಅಳೆಯುತ್ತಾನೆಯೇ ವಿನಾ ಆ ನಾಯಕ ತನ್ನ ಕಾಲಕ್ಕೆ ನೀಡಿದ್ದ ಸಂದೇಶವನ್ನು ಈ ಕಾಲಕ್ಕೆ ತಕ್ಕಂತೆ ಮಾರ್ಪಡಿಸುವುದರಲ್ಲಿ ಬೇಕೆಂತಲೇ ಹಿಂದೆ ಬೀಳುತ್ತಾನೆ ಅನ್ನುವುದೂ ಈ ಸಮಾವೇಶದಲ್ಲಿ ಮಾತನಾಡಿದ ಹಲವು ಭಾಷಣಕಾರರ ಮಾತುಗಳಿಂದ ಶೃತವಾಗಿದೆ. ಮತ್ತು ಇದು ಮುಂದುವರೆದ ಅಹಿಂದ ಸಮ್ಮೇಳನದ ಮತ್ತೊಂದು ಸ್ವರೂಪವಾಗಿದೆ.

ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನೂ ಹಣ್ಣುಗಳನ್ನೂ ಹೊಡೆದುರುಳಿಸುವ ಕಲೆ ರಾಜಕಾರಣಿಗಳಿಗಳ ಕರಗತ ವಿದ್ಯೆ. ಅದನ್ನರಿಯದ ಸಾಮಾನ್ಯರು ಅವರನ್ನಾಳುವ ನಾಯಕರನ್ನು ನಂಬುತ್ತ ಅವರು ಹೇಳಿದ್ದನ್ನೇ ನಂಬುತ್ತಾ ತಮ್ಮ ಅಸ್ಮಿತೆಯನ್ನೂ ಮರೆತುಬಿಡುತ್ತಾರೆ ಅನ್ನುವುದು ಸದ್ಯ ನಮ್ಮ ಮುಂದಿರುವ ಈ ಮೂರೂ ವಿಚಾರಗಳಿಂದ ಮತ್ತೊಮ್ಮೆ ಸಾಬೀತಾಗಿದೆ. ಮತ್ತೊಮ್ಮೆ ಈ ಮೂರೂ ವಿಚಾರಗಳನ್ನು ತೂಕ ಹಾಕಿದರೆ;

ಲಿಂಗಾಯತರೊಳಗೇ ಈಗ (1) ನಾವು ಲಿಂಗಾಯತ ಆದರೆ ವೀರಶೈವ ಅಲ್ಲ; (2) ವೀರಶೈವ ಹೌದು ಲಿಂಗಾಯತ ಅಲ್ಲ; (3) ವೀರಶೈವ ಲಿಂಗಾಯತ ಎರಡೂ ಒಂದೇ ಮತ್ತು (4) ವೀರಶೈವ ಅಥವಾ ಲಿಂಗಾಯತ ಏನೇ ಆಗಿರಲಿ, ನಾವು ಹಿಂದೂಗಳು – ಎಂದು ಹೇಳುವ ಒಟ್ಟು ನಾಲ್ಕು ಗುಂಪುಗಳು ಸಿಡಿದೆದ್ದಿವೆ. ಸರ್ಕಾರ ಹಾಕಿದ ಬಾಂಬು ಸರಿಯಾದ ಸಮಯಕ್ಕೆ ಸರಿಯಾದ ಸ್ಥಳಕ್ಕೆ ಬಿದ್ದು, ಅದೆಣಿಸಿದಂತೆ ಲಿಂಗಾಯತ ಎಂಬ ಸಮುದಾಯ ಈಗ ಛಪ್ಪನ್ನಾರು ಚೂರಾಗಿ ಬಿದ್ದಿದೆ! ಅದನ್ನು ಮತ್ತೆ ಒಟ್ಟುಸೇರಿಸುವ ಕೆಲಸಕ್ಕೆ ಆ ಸಮೂಹದ ತಥಾಕತಿಥ ನಾಯಕ ಕೂತುಬಿಟ್ಟರೆ ಮತ್ತು ಅದರಲ್ಲೇ ಕಳೆದುಹೋಗುವಂತಾದರೆ ಚುನಾವಣೆ ಸಮಯಕ್ಕೆ ತನ್ನ ಬೇಳೆ ಸರಿಯಾಗಿ ಬೆಂದಿರುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ!

ಇನ್ನು ಬಾವುಟದ ವಿಷಯದಲ್ಲೂ ಅಷ್ಟೇ. ಈ ಸರಕಾರ ಬರುವ ಮೊದಲೂ ಕನ್ನಡ ಬಾವುಟ ಇತ್ತು. ಮುಂದೆಯೂ ಇರುತ್ತದೆ. ಅದಕ್ಕೆ ಈ  ಸರಕಾರ ಕೊಟ್ಟ ಅಥವಾ ಕೊಡಲಿರುವ ಕೊಡುಗೆ ಏನೇನೂ ಇಲ್ಲ. ಇನ್ನು ಪಾಟೀಲ ಪುಟ್ಟಪ್ಪನವರು ಧ್ವಜಕ್ಕೆ ಅಧಿಕೃತ ಮಾನ್ಯತೆ ಬೇಕು ಎಂಬ ಬೇಡಿಕೆ ಸಲ್ಲಿಸಿದ್ದು 2015ರಲ್ಲಿಯೇ ಹೊರತು ನಿನ್ನೆ ಮೊನ್ನೆ ಅಲ್ಲ! ಸರಕಾರಕ್ಕೆ ನಿಜವಾಗಿಯೂ ಕನ್ನಡದ ಬಗ್ಗೆ ಕಾಳಜಿ ಇದ್ದರೆ ಆಗಲೇ ಆ ವಿಷಯವನ್ನು ಎತ್ತಿಕೊಳ್ಳಬಹುದಿತ್ತಲ್ಲ? ಯಾಕೆ ಅದು ಚುನಾವಣೆ ಸಮೀಪಿಸುವವರೆಗೆ ಕಾಯಬೇಕಿತ್ತು? ಈಗ, ರಾಜ್ಯವೊಂದು ಬೇರೆ ಧ್ವಜ ಹೊಂದುವುದಕ್ಕೆ ಸಂವಿಧಾನದ ಯಾವ ಮಾನ್ಯತೆಯೂ ಇಲ್ಲ ಎಂಬುದು ಅತ್ಯಂತ ಸ್ಪಷ್ಟವಾಗಿ ಗೊತ್ತಿದ್ದ ಮೇಲೂ ಯಾಕೆ ಅದು ಸಮಿತಿ ರಚನೆ ಮಾಡಿದೆ? ಕನ್ನಡ ಧ್ವಜ ಎಂದು ಗುರುತಿಸಿಕೊಂಡಿರುವ, ರಾಮಮೂರ್ತಿಯವರು ವಿನ್ಯಾಸಗೊಳಿಸಿದ ಹಳದಿ-ಕೆಂಪು ಧ್ವಜವನ್ನೇ ಆರಿಸುವುದಿದ್ದರೆ ಸರಕಾರ ಯಾಕೆ ಕಮಿಟಿ ರಚನೆ ಮಾಡಬೇಕಿತ್ತು? ಹಾಗಾದರೆ ಈಗ ಇರುವ ಧ್ವಜಕ್ಕಿಂತ ಬೇರೆಯದಾದ ಹೊಸ ಧ್ವಜ ವಿನ್ಯಾಸಗೊಳ್ಳುತ್ತದೆಯೇ? ಅದರಲ್ಲಿ ಕೆಂಪು, ಹಳದಿ ಜೊತೆ ಹಸಿರು ಬಣ್ಣವನ್ನೂ ಸೇರಿಸಲಾಗುವುದು ಎಂಬ ಗುಸುಗುಸು ಕೇಳಿಬರುತ್ತಿದೆ. ಈ ಸರಕಾರ ಏನು ಮಾಡಲು ಹೊರಟಿದೆ? ಇಷ್ಟೆಲ್ಲ ಕಸರತ್ತು ಮಾಡಿಯೂ ಆ ಬೇಡಿಕೆಯನ್ನು ಕೇಂದ್ರ ಸರಕಾರ ಅಸಾಂವಿಧಾನಿಕ ಎಂಬ ನೆಲೆಯಲ್ಲಿ ತಿರಸ್ಕರಿಸಿದ್ದೇ ಆದರೆ ಆಗ ಕರ್ನಾಟಕದಲ್ಲಿ ಭುಗಿಲೇಳಬಹುದಾದ ಗಲಭೆ-ಗಲಾಟೆಗಳಿಗೆ ಹೊಣೆ ಯಾರಾಗುತ್ತಾರೆ? ರಾಜಕಾರಣಿಗಳಿಗೇನೋ ಮುಂದಿನ ಅಸೆಂಬ್ಲಿ ಚುನಾವಣೆ ಮುಖ್ಯವಾಗಿರಬಹುದು. ಆದರೆ ಹಿಂಸಾಚಾರದ ದಳ್ಳುರಿಯಿಂದ ಕರ್ನಾಟಕವನ್ನು ಬಚಾವ್ ಮಾಡುವವರು ಯಾರು??

ಇನ್ನು ಮೂರನೆಯ ವಿಷಯದಲ್ಲಿ  ಸ್ಪಷ್ಟವಾದದ್ದೆಂದರೆ, ಕೇವಲ ಓಟ್ ಬ್ಯಾಂಕಾಗಿ ಬಳಸಲಾಗುತ್ತಿದ್ದ ದಲಿತೋದ್ಧಾರದ ಮಾತು ಅಲ್ಪಸಂಖ್ಯಾತ ಹಿಂದುಳಿದ ಮತ್ತು ದಲಿತವರ್ಗಕ್ಕೂ ವಿಸ್ತರಿಸಿದ ಮತ್ತು ಅದಕ್ಕೆಂದೇ ನಡೆಸಲಾದ  ಅಂಬೇಡ್ಕರ್ ಹೆಸರಿನ ಸಮಾವೇಶ.

ಚುನಾವಣೆ ಗೆಲ್ಲುವುದಕ್ಕಾಗಿ ಎಂಥ ಹೀನ ಕೆಲಸಕ್ಕೂ ಇಳಿಯಬಲ್ಲ ನಮ್ಮ ರಾಜಕಾರಣ ಸದ್ಯ ಹೂಡುತ್ತಿರುವ ಒಂದೊಂದು ಬಾಣವೂ ಮುಂದೆ ಕೇವಲ ವಿರೋಧ ಪಕ್ಷವನ್ನಲ್ಲ, ಈ ರಾಜ್ಯವನ್ನು, ಈ ರಾಜ್ಯದ ಅಮಾಯಕರನ್ನು ಅಪಾಯದ ಅಂಚಿಗೆ ತಂದುನಿಲ್ಲಿಸಲಿದೆ ಎಂಬುದನ್ನು ನಾವೆಲ್ಲರೂ ಅರಿಯದಿದ್ದರೆ ಮತ್ತು ಅದನ್ನು ಜನಸಮುದಾಯಕ್ಕೆ ತಲುಪಿಸದಿದ್ದರೆ ಮುಂದಿನ ಎಲ್ಲ ಅವಘಡಗಳಿಗೆ ಪುರಾವೆಯೊದಗಿಸುವ ಮತ್ತು ಸಾಕ್ಷಿಯಾಗಬೇಕಿರುವ ಕಾಲ ದೂರವಿಲ್ಲ ಎನ್ನಿಸುತ್ತಿದೆ.

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....