ಮಂಗಳವಾರ, ಆಗಸ್ಟ್ 1, 2017

ಸಮುದ್ರದಲ್ಲಿರುವುದು ಸಾವಿರಾರು ನದಿಗಳು.

ಕರ್ನಾಟಕವನ್ನು ಸದ್ಯ ಆಳುತ್ತಿರುವ ಸರಕಾರ ಕಳೆದ ಒಂದು ತಿಂಗಳ ಅವಧಿಯಲ್ಲಿ ಕರ್ನಾಟಕದ ಜನತೆಯ ಆಶೋತ್ತರಗಳ ಈಡೇರಿಕೆ ಎಂಬರ್ಥದಲ್ಲಿ ಮತ್ತು ಅದು ತಮ್ಮ ಸರ್ಕಾರದ ಸಾಧನೆ ಎಂಬಂತೆ  ಮೂರು ವಿಚಾರಗಳಲ್ಲಿ ತನ್ನ ನಿಲುವನ್ನು ಜನತೆಯ ಮುಂದೆ ಪ್ರಕಟಿಸಿದೆ. ಒಂದು: ಲಿಂಗಾಯತ ಎಂಬುದನ್ನು ಪ್ರತ್ಯೇಕ ಧರ್ಮ ಎಂದು ಮಾನ್ಯ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುತ್ತೇನೆ ಎಂದಿದ್ದು. ಎರಡು: ರಾಜ್ಯಕ್ಕೆ ಸ್ವತಂತ್ರವಾದ ಬಾವುಟವನ್ನು ಅಧಿಕೃತಗೊಳಿಸುವ ಪ್ರಕ್ರಿಯೆಯನ್ನು ಶುರು ಮಾಡುತ್ತೇನೆ ಎಂದಿದ್ದು. ಮತ್ತು ಮೂರನೆಯದಾಗಿ ಅಂಬೇಡ್ಕರ್ ಚಿಂತನೆಯ ಹೆಸರಲ್ಲಿ ಸಮಾವೇಶವೊಂದನ್ನು ಏರ್ಪಡಿಸಿ ಅದನ್ನು ರಾಜಕೀಯ ಮೇಲಾಟವನ್ನಾಗಿಸಿದ್ದು.

ಮೇಲ್ನೋಟಕ್ಕೇ ಇವೆಲ್ಲ ಹಾಲಿ ಸರ್ಕಾರವನ್ನು ನಡೆಸುತ್ತಿರುವವರ ಚಿಂತನೆಯೇ ವಿನಾ ಅದೇನೂ ಮಂತ್ರಿಮಂಡಲದ ಶಿಫಾರಸಿನಿಂದಾಗಲೀ ಅಥವ ಸರ್ಕಾರವೇ ರಚಿಸಿದ್ದ ಬೇರಾವುದೋ ಆಯುಕ್ತರ/ ಅಧ್ಯಕ್ಷರ/ ಸಮಿತಿಯ ಶಿಫಾರಸೇನಲ್ಲ. ತನ್ನ ವೈಫಲ್ಯಗಳನ್ನು ಮುಚ್ಚಿಡುವ ಗೇಮ್ ಪ್ಲ್ಯಾನ್ ಇದಾಗಿದೆಯೆಂದು ಎಂಥವರಿಗೂ  ತಿಳಿದಿರುವ ಸಂಗತಿ. ಮೊದಲ ದಾಳದಲ್ಲಿ ಇವರ ಕೆಲಸ ಏನು? ಲಿಂಗಾಯತ ಎಂಬುದನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸುವಂತೆ ವಿವಿಧ ಸಂಘಟನೆಗಳು ಅರ್ಪಿಸಿದ ಮನವಿ ಪತ್ರವನ್ನು‌ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ತನ್ನ ಶಿಫಾರಸನ್ನೂ  ಆ ‌ಮನವಿ ಪತ್ರಕ್ಕೆ ಲಗತ್ತಿಸಿ   ಸಲ್ಲಿಸುವುದು ಮಾತ್ರ! ಒಮ್ಮೆ ಅದನ್ನು ಕೇಂದ್ರ ಸರಕಾರದ ಅಂಗಳಕ್ಕೆ ಒಗೆದ ಮೇಲೆ ಅದರಲ್ಲಿ ಇವರ ಜವಾಬ್ದಾರಿ ಏನೂ ಇಲ್ಲ! ಆಮೇಲೆ ಬೇಕಾದರೆ ಆ ಸಮಸ್ಯೆಯನ್ನು ಎದುರಿಟ್ಟುಕೊಂಡು ಕೇಂದ್ರ ತಲೆ ಚಚ್ಚಿಕೊಳ್ಳಬೇಕು! ಒಂದು ವೇಳೆ, ಕೇಂದ್ರ ಸರಕಾರ “ಸರಿ, ನಾವು ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸುತ್ತೇವೆ” ಎಂದು ಹೇಳಿದ್ದೇ ಆದರೆ ಅದರ ಸಂಪೂರ್ಣ ಕ್ರೆಡಿಟ್ ಅನ್ನು ಪಡೆಯಲು ಈ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಒಂದು ವೇಳೆ ಕೇಂದ್ರದ ಈಗಿನ ಸರ್ಕಾರ  ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಗುರುತಿಸಲು ವಿಳಂಬ ಮಾಡಿತೆಂದರೆ  ಅಥವಾ  ಇದೆಲ್ಲ ಆಗದು ಎಂದು ತಳ್ಳಿಹಾಕಿದರೆ ಆಗ ಕೇಂದ್ರ ಸರಕಾರವನ್ನು  ಮನುವಾದಿ ಸರಕಾರವೆಂದೋ  ಹಿಂದೂಪರ ಕೋಮುವಾದಿ ಸರಕಾರವೆಂದೋ  ಲಿಂಗಾಯತರ ವಿರುದ್ಧ ಇರುವ ಸರಕಾರ ಎಂದೆಲ್ಲ ಗುಲ್ಲೆಬ್ಬಿಸಿ ಎಲ್ಲಾ ಗೂಬೆಗಳನ್ನೂ ಕೇಂದ್ರದ ಮೇಲೆ, ಮೋದಿಯ ಮೇಲೆ ಕೂರಿಸುವುದಕ್ಕೂ ಇವರು  ಸಿದ್ಧರಾಗಿ ಕೂತಿದ್ದಾರೆ! ಈ ಇಡೀ ನಾಟಕದಲ್ಲಿ  ಕಳೆದುಕೊಳ್ಳುವಂಥಾದ್ದು ಏನೇನೂ ಇಲ್ಲ! ಆದರೆ ಕೇಂದ್ರ ಸರಕಾರ ಸಿಕ್ಸರ್ ಎತ್ತಿದರೂ ಬೌಲ್ಡ್ ಆದರೂ ಗೆಲ್ಲವುದು ಮಾತ್ರ ತಾನೇ ಎಂಬ ಆಲೋಚನೆಯಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಗೆ ಅಸ್ತ್ರವೊಂದನ್ನು ತಯಾರಿಸಿದೆ!

ಇನ್ನು ಎರಡನೆಯ ಘನ ವಿಷಯ ಕನ್ನಡ ಬಾವುಟಕ್ಕೆ ಸಂಬಂಧಿಸಿದ್ದು. ಸದಾ ಕನ್ನಡಿಗರ ನಿರಭಿಮಾನವನ್ನೇ ತನ್ನ ರಕ್ಷಣೆಗೆ ಬಳಸಿಕೊಳ್ಳುವ ನಮ್ಮ ರಾಜಕಾರಣ ಈ ವಿಷಯದಲ್ಲೂ ಬಹಳ ಎಚ್ಚರಿಕೆಯ ಹೆಜ್ಜೆಯನ್ನೇ ಇಟ್ಟಿದೆ. ಸರ್ಕಾರ ಅಂದರೆ ಅದರ ಮುಖ್ಯ ಮಂತ್ರಿ‌ ನೀಡಿರುವ ಹೇಳಿಕೆಯಲ್ಲೇ ರಾಜಕೀಯವಿದೆ.  ಅಧಿಕೃತ ಬಾವುಟ ಬೇಕು ಅಂತ ಸರ್ಕಾರವೇನೂ ಈ ವಿಷಯ ಎತ್ತಿಲ್ಲ. ಕನ್ನಡದ ಕಟ್ಟಾಳು, ಹಿರಿಯ ಹೋರಾಟಗಾರರಾದ ಪಾಟೀಲ ಪುಟ್ಟಪ್ಪನವರು ಆ ಬೇಡಿಕೆ ಇಟ್ಟಿದ್ದರಲ್ಲ ಅದನ್ನು ಮಾನ್ಯ ಮಾಡಿ ಅವರ ಬೇಡಿಕೆಗೆ ಸ್ಪಂದಿಸುವ ಸಲುವಾಗಿ ಒಂದು ಕಮಿಟಿ ಮಾಡಿದೆ ಅಷ್ಟೆ. ಕಮಿಟಿ ಕೊಡೋ ತೀರ್ಮಾನಕ್ಕೆ ತಮ್ಮ ಸರಕಾರ ಬದ್ಧವಾಗಿರುತ್ತದೆ – ಎಂದಿದೆ. ಆದರೆ, ಇಲ್ಲೂ ಕೂಡ ಕೇಂದ್ರ ಸರ್ಕಾರಕ್ಕೇ ಗುರಿ ಇಡಲಾಗಿದೆ  ಎಂಬುದನ್ನು ಪ್ರಜ್ಞಾವಂತ ಕನ್ನಡಿಗರು ಅರ್ಥ ಮಾಡಿಕೊಳ್ಳಲೇ ಬೇಕು.ಕನ್ನಡದ ಬಾವುಟಕ್ಕೆ ಅಧಿಕೃತ ಸ್ಥಾನಮಾನ ಕೊಡುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ! ಅದು ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥನಾಗಿರುವ ಕೇಂದ್ರ ಸರ್ಕಾರದ ಕೆಲಸ. ಹಾಗಾಗಿ ಇಲ್ಲಿನ ಅಂದರೆ ರಾಜ್ಯ ಸರ್ಕಾರ ಇರುವ ವ್ಯವಸ್ಥೆಯನ್ನು ಅನುಲಕ್ಷಿಸಿ ಮತ್ತು ತನ್ನ ಮೇಲಿರುವ ಹಕ್ಕೊತ್ತಾಯವನ್ನು ಗಮನಿಸಿ  ಇಲ್ಲಿನ ಜನರ ಅಭಿಪ್ರಾಯದಂತೆ ಹೀಗೆ ಹೀಗೆ ಮಾಡ್ಬೇಕು ಅಂತ ಇದ್ದೇವೆ. ಇದಕ್ಕೆ ಮಾನ್ಯತೆ ಕೊಡಿ – ಅಂತ ಕೇಂದ್ರ ಸರಕಾರಕ್ಕೆ ಒಂದು ಮನವಿಪತ್ರ ಸಲ್ಲಿಸಬಹುದು ಅಷ್ಟೆ. ರಾಜ್ಯ ಕೊಟ್ಟ ಮನವಿ ಸಂವಿಧಾನಾತ್ಮಕವಾಗಿದೆಯೇ? ಅಥವಾ ರಾಷ್ಟ್ರದ ಅಖಂಡತೆಗೆ ಧಕ್ಕೆ ಬರುವಂತಿದೆಯೇ? ಎಂಬುದನ್ನೆಲ್ಲ ನೋಡಿ, ಪರಾಮರ್ಶಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳುವ ಹಕ್ಕು ಮತ್ತು ಜವಾಬ್ದಾರಿ ಎರಡೂ ಇರುವುದು ಕೇಂದ್ರ ಸರಕಾರದ ಮೇಲೆ. ಅದು ಕೇಂದ್ರ ಸರ್ಕಾರದ ಗೃಹ ಇಲಾಖೆ, ಕಾನೂನು ಇಲಾಖೆ ಮತ್ತು ಮಾನವ ಸಂಪನ್ಮೂಲ ಇಲಾಖೆಗಳು ಹಲವು ಸುತ್ತಿನ ಸಭೆ ನಡಾವಳಿಗಳಿಂದ ಆಗಬೇಕಿರುವ ಕೆಲಸ. ಹಾಗಾದರೆ ಇಲ್ಲಿ ನಮ್ಮ ಮುಖ್ಯಮಂತ್ರಿಗಳ ಕೆಲಸ ಏನು? ಈಗಾಗಲೇ ನಾವೆಲ್ಲ ಬಳಸುತ್ತಿರುವ ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ಕೊಡಿ ಎಂಬ ಅರ್ಜಿಯನ್ನು ಈಗ ಹೊಸದಾಗಿ ನೇಮಿಸಿರುವ ಸಮಿತಿಯ ಶಿಫಾರಸಿಗೆ ತನ್ನ ಮುದ್ರೆ ಒತ್ತಿ ಕೇಂದ್ರಕ್ಕೆ ಸಲ್ಲಿಸುವುದು, ಅಷ್ಟೆ! ಕೇಂದ್ರ ಇವರ ಅರ್ಜಿಯನ್ನು ಪುರಸ್ಕರಿಸಿದರೆ ಅದರ ಪೂರ್ತಿ ಕೀರ್ತಿಯನ್ನು ತನ್ನ ಕಿರೀಟಕ್ಕೆ ಇಟ್ಟುಕೊಳ್ಳುವುದು ನಮ್ಮ ರಾಜ್ಯ ಸರ್ಕಾರದ ಉದ್ದೇಶ. ಒಂದು ವೇಳೆ ಕೇಂದ್ರ ಸರ್ಕಾರ  ಈ ಬೇಡಿಕೆ ಅಸಾಂವಿಧಾನಿಕವೆಂದು  ರಾಷ್ಟ್ರಕ್ಕೆ ಒಂದು ಧ್ವಜ ಇರೋವಾಗ ಮತ್ತೊಂದು ಧ್ವಜಕ್ಕೆ ದೇಶದೊಳಗೆ ಮಾನ್ಯತೆ ಕೊಡಲು ಸಾಧ್ಯವಿಲ್ಲ – ಎಂದು ಖಡಕ್ಕಾಗಿ ಹೇಳಿದರೆ ಆಗಲೂ ಲಾಭ ನಮ್ಮ ರಾಜ್ಯ ಸರ್ಕಾರಕ್ಕೇ!  ಆಗ ಕೇಂದ್ರ ಸರ್ಕಾರವನ್ನು  ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಸರಕಾರವೆಂದು ಬಯ್ಯುತ್ತ ತಿರುಗಬಹುದು. ಕೇಂದ್ರ ದಕ್ಷಿಣ ಭಾರತವನ್ನು ತುಳೀತಿದೆ. ಇಂಥ ರಾಷ್ಟ್ರೀಯ ಪಕ್ಷಕ್ಕೆ ಯಾರೂ ಬೆಂಬಲ ಕೊಡಬೇಡಿ ಎನ್ನುತ್ತ ಚುನಾವಣೆ ಸಂದರ್ಭದಲ್ಲಿ ಆಡಬೇಕಿರುವ ಮಾತುಗಳನ್ನು ಹೋಲ್‍ಸೇಲ್ ಆಗಿ ಈಗಾಗಲೇ ಬಾಯಿ ಪಾಠ ಮಾಡಿಕೊಂಡಿದೆ ನಮ್ಮ ರಾಜ್ಯ ಸರ್ಕಾರದ ಮಂತ್ರಿಮಂಡಲ. ಒಟ್ಟಾರೆ, ಈ ವಿಷಯದಲ್ಲೂ ಇವರು ಕಳೆದುಕೊಳ್ಳುವುದು ಏನೂ ಇಲ್ಲ; ಗಳಿಸುವುದೇ ಎಲ್ಲಾ!!

ಇನ್ನು ಮೊನ್ನೆ ಬೆಂಗಳೂರಿನಲ್ಲಿ ನಡೆದ ಅಂಬೇಡ್ಕರ್ ಹೆಸರಿನಲ್ಲಿ ನಡೆದ ಸಮಾವೇಶಕ್ಕೆ ವೆಚ್ಚವಾದ ಹಣ, ಅದನ್ನು ಸಂಘಟಿಸಿದವರ ಹಿನ್ನೆಲೆ, ಅದರಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದವರ ವಿವರ, ಅಲ್ಲಿ ಮಂಡಿತವಾದ ವಿಚಾರ ಧಾರೆ, ಎಲ್ಲವನ್ನೂ ಸರಿಯಾಗಿ ಗಮನಿಸಿದರೆ ಅದು ಕೂಡ ಮುಂಬರುವ ಚುನಾವಣೆಯನ್ನೇ ದೃಷ್ಟಿಯಲ್ಲಿರಿಸಿಕೊಂಡು ಮಾಡಿದ ಆದರೆ ಎಲ್ಲೂ ಪ್ರಕಟವಾಗದ ಚುನಾವಣ ಮ್ಯಾನಿಫೆಶ್ಟೋ. ನಿಜಕ್ಕೂ ಅಂಬೇಡ್ಕರ್ ಚಿಂತನೆಗಳ ಸರಿಯಾದ ಓದು ಮತ್ತು ಅದರ ಪ್ರಭಾವದಿಂದ ಹುಟ್ಟ ಬಹುದಾದ ಹೊಸ ಸಂವೇದನೆ ಇಂಥ ಸಮಾವೇಶಗಳಿಂದ ಸಾಧ್ಯವಿದೆಯಾ ಎಂದು ಆಲೋಚಿಸಬೇಕಿದೆ. ಎಡ ಅಥವ ಬಲ ಒಲವಿನ ಯಾರೇ ರಾಜಕಾರಣಿ ಈಗಾಗಲೇ ಆಗಿ ಹೋದ ನಾಯಕನನ್ನು ತನ್ನ ಲಾಭದ ದೃಷ್ಟಿಯಿಂದ ಅಳೆಯುತ್ತಾನೆಯೇ ವಿನಾ ಆ ನಾಯಕ ತನ್ನ ಕಾಲಕ್ಕೆ ನೀಡಿದ್ದ ಸಂದೇಶವನ್ನು ಈ ಕಾಲಕ್ಕೆ ತಕ್ಕಂತೆ ಮಾರ್ಪಡಿಸುವುದರಲ್ಲಿ ಬೇಕೆಂತಲೇ ಹಿಂದೆ ಬೀಳುತ್ತಾನೆ ಅನ್ನುವುದೂ ಈ ಸಮಾವೇಶದಲ್ಲಿ ಮಾತನಾಡಿದ ಹಲವು ಭಾಷಣಕಾರರ ಮಾತುಗಳಿಂದ ಶೃತವಾಗಿದೆ. ಮತ್ತು ಇದು ಮುಂದುವರೆದ ಅಹಿಂದ ಸಮ್ಮೇಳನದ ಮತ್ತೊಂದು ಸ್ವರೂಪವಾಗಿದೆ.

ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನೂ ಹಣ್ಣುಗಳನ್ನೂ ಹೊಡೆದುರುಳಿಸುವ ಕಲೆ ರಾಜಕಾರಣಿಗಳಿಗಳ ಕರಗತ ವಿದ್ಯೆ. ಅದನ್ನರಿಯದ ಸಾಮಾನ್ಯರು ಅವರನ್ನಾಳುವ ನಾಯಕರನ್ನು ನಂಬುತ್ತ ಅವರು ಹೇಳಿದ್ದನ್ನೇ ನಂಬುತ್ತಾ ತಮ್ಮ ಅಸ್ಮಿತೆಯನ್ನೂ ಮರೆತುಬಿಡುತ್ತಾರೆ ಅನ್ನುವುದು ಸದ್ಯ ನಮ್ಮ ಮುಂದಿರುವ ಈ ಮೂರೂ ವಿಚಾರಗಳಿಂದ ಮತ್ತೊಮ್ಮೆ ಸಾಬೀತಾಗಿದೆ. ಮತ್ತೊಮ್ಮೆ ಈ ಮೂರೂ ವಿಚಾರಗಳನ್ನು ತೂಕ ಹಾಕಿದರೆ;

ಲಿಂಗಾಯತರೊಳಗೇ ಈಗ (1) ನಾವು ಲಿಂಗಾಯತ ಆದರೆ ವೀರಶೈವ ಅಲ್ಲ; (2) ವೀರಶೈವ ಹೌದು ಲಿಂಗಾಯತ ಅಲ್ಲ; (3) ವೀರಶೈವ ಲಿಂಗಾಯತ ಎರಡೂ ಒಂದೇ ಮತ್ತು (4) ವೀರಶೈವ ಅಥವಾ ಲಿಂಗಾಯತ ಏನೇ ಆಗಿರಲಿ, ನಾವು ಹಿಂದೂಗಳು – ಎಂದು ಹೇಳುವ ಒಟ್ಟು ನಾಲ್ಕು ಗುಂಪುಗಳು ಸಿಡಿದೆದ್ದಿವೆ. ಸರ್ಕಾರ ಹಾಕಿದ ಬಾಂಬು ಸರಿಯಾದ ಸಮಯಕ್ಕೆ ಸರಿಯಾದ ಸ್ಥಳಕ್ಕೆ ಬಿದ್ದು, ಅದೆಣಿಸಿದಂತೆ ಲಿಂಗಾಯತ ಎಂಬ ಸಮುದಾಯ ಈಗ ಛಪ್ಪನ್ನಾರು ಚೂರಾಗಿ ಬಿದ್ದಿದೆ! ಅದನ್ನು ಮತ್ತೆ ಒಟ್ಟುಸೇರಿಸುವ ಕೆಲಸಕ್ಕೆ ಆ ಸಮೂಹದ ತಥಾಕತಿಥ ನಾಯಕ ಕೂತುಬಿಟ್ಟರೆ ಮತ್ತು ಅದರಲ್ಲೇ ಕಳೆದುಹೋಗುವಂತಾದರೆ ಚುನಾವಣೆ ಸಮಯಕ್ಕೆ ತನ್ನ ಬೇಳೆ ಸರಿಯಾಗಿ ಬೆಂದಿರುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ!

ಇನ್ನು ಬಾವುಟದ ವಿಷಯದಲ್ಲೂ ಅಷ್ಟೇ. ಈ ಸರಕಾರ ಬರುವ ಮೊದಲೂ ಕನ್ನಡ ಬಾವುಟ ಇತ್ತು. ಮುಂದೆಯೂ ಇರುತ್ತದೆ. ಅದಕ್ಕೆ ಈ  ಸರಕಾರ ಕೊಟ್ಟ ಅಥವಾ ಕೊಡಲಿರುವ ಕೊಡುಗೆ ಏನೇನೂ ಇಲ್ಲ. ಇನ್ನು ಪಾಟೀಲ ಪುಟ್ಟಪ್ಪನವರು ಧ್ವಜಕ್ಕೆ ಅಧಿಕೃತ ಮಾನ್ಯತೆ ಬೇಕು ಎಂಬ ಬೇಡಿಕೆ ಸಲ್ಲಿಸಿದ್ದು 2015ರಲ್ಲಿಯೇ ಹೊರತು ನಿನ್ನೆ ಮೊನ್ನೆ ಅಲ್ಲ! ಸರಕಾರಕ್ಕೆ ನಿಜವಾಗಿಯೂ ಕನ್ನಡದ ಬಗ್ಗೆ ಕಾಳಜಿ ಇದ್ದರೆ ಆಗಲೇ ಆ ವಿಷಯವನ್ನು ಎತ್ತಿಕೊಳ್ಳಬಹುದಿತ್ತಲ್ಲ? ಯಾಕೆ ಅದು ಚುನಾವಣೆ ಸಮೀಪಿಸುವವರೆಗೆ ಕಾಯಬೇಕಿತ್ತು? ಈಗ, ರಾಜ್ಯವೊಂದು ಬೇರೆ ಧ್ವಜ ಹೊಂದುವುದಕ್ಕೆ ಸಂವಿಧಾನದ ಯಾವ ಮಾನ್ಯತೆಯೂ ಇಲ್ಲ ಎಂಬುದು ಅತ್ಯಂತ ಸ್ಪಷ್ಟವಾಗಿ ಗೊತ್ತಿದ್ದ ಮೇಲೂ ಯಾಕೆ ಅದು ಸಮಿತಿ ರಚನೆ ಮಾಡಿದೆ? ಕನ್ನಡ ಧ್ವಜ ಎಂದು ಗುರುತಿಸಿಕೊಂಡಿರುವ, ರಾಮಮೂರ್ತಿಯವರು ವಿನ್ಯಾಸಗೊಳಿಸಿದ ಹಳದಿ-ಕೆಂಪು ಧ್ವಜವನ್ನೇ ಆರಿಸುವುದಿದ್ದರೆ ಸರಕಾರ ಯಾಕೆ ಕಮಿಟಿ ರಚನೆ ಮಾಡಬೇಕಿತ್ತು? ಹಾಗಾದರೆ ಈಗ ಇರುವ ಧ್ವಜಕ್ಕಿಂತ ಬೇರೆಯದಾದ ಹೊಸ ಧ್ವಜ ವಿನ್ಯಾಸಗೊಳ್ಳುತ್ತದೆಯೇ? ಅದರಲ್ಲಿ ಕೆಂಪು, ಹಳದಿ ಜೊತೆ ಹಸಿರು ಬಣ್ಣವನ್ನೂ ಸೇರಿಸಲಾಗುವುದು ಎಂಬ ಗುಸುಗುಸು ಕೇಳಿಬರುತ್ತಿದೆ. ಈ ಸರಕಾರ ಏನು ಮಾಡಲು ಹೊರಟಿದೆ? ಇಷ್ಟೆಲ್ಲ ಕಸರತ್ತು ಮಾಡಿಯೂ ಆ ಬೇಡಿಕೆಯನ್ನು ಕೇಂದ್ರ ಸರಕಾರ ಅಸಾಂವಿಧಾನಿಕ ಎಂಬ ನೆಲೆಯಲ್ಲಿ ತಿರಸ್ಕರಿಸಿದ್ದೇ ಆದರೆ ಆಗ ಕರ್ನಾಟಕದಲ್ಲಿ ಭುಗಿಲೇಳಬಹುದಾದ ಗಲಭೆ-ಗಲಾಟೆಗಳಿಗೆ ಹೊಣೆ ಯಾರಾಗುತ್ತಾರೆ? ರಾಜಕಾರಣಿಗಳಿಗೇನೋ ಮುಂದಿನ ಅಸೆಂಬ್ಲಿ ಚುನಾವಣೆ ಮುಖ್ಯವಾಗಿರಬಹುದು. ಆದರೆ ಹಿಂಸಾಚಾರದ ದಳ್ಳುರಿಯಿಂದ ಕರ್ನಾಟಕವನ್ನು ಬಚಾವ್ ಮಾಡುವವರು ಯಾರು??

ಇನ್ನು ಮೂರನೆಯ ವಿಷಯದಲ್ಲಿ  ಸ್ಪಷ್ಟವಾದದ್ದೆಂದರೆ, ಕೇವಲ ಓಟ್ ಬ್ಯಾಂಕಾಗಿ ಬಳಸಲಾಗುತ್ತಿದ್ದ ದಲಿತೋದ್ಧಾರದ ಮಾತು ಅಲ್ಪಸಂಖ್ಯಾತ ಹಿಂದುಳಿದ ಮತ್ತು ದಲಿತವರ್ಗಕ್ಕೂ ವಿಸ್ತರಿಸಿದ ಮತ್ತು ಅದಕ್ಕೆಂದೇ ನಡೆಸಲಾದ  ಅಂಬೇಡ್ಕರ್ ಹೆಸರಿನ ಸಮಾವೇಶ.

ಚುನಾವಣೆ ಗೆಲ್ಲುವುದಕ್ಕಾಗಿ ಎಂಥ ಹೀನ ಕೆಲಸಕ್ಕೂ ಇಳಿಯಬಲ್ಲ ನಮ್ಮ ರಾಜಕಾರಣ ಸದ್ಯ ಹೂಡುತ್ತಿರುವ ಒಂದೊಂದು ಬಾಣವೂ ಮುಂದೆ ಕೇವಲ ವಿರೋಧ ಪಕ್ಷವನ್ನಲ್ಲ, ಈ ರಾಜ್ಯವನ್ನು, ಈ ರಾಜ್ಯದ ಅಮಾಯಕರನ್ನು ಅಪಾಯದ ಅಂಚಿಗೆ ತಂದುನಿಲ್ಲಿಸಲಿದೆ ಎಂಬುದನ್ನು ನಾವೆಲ್ಲರೂ ಅರಿಯದಿದ್ದರೆ ಮತ್ತು ಅದನ್ನು ಜನಸಮುದಾಯಕ್ಕೆ ತಲುಪಿಸದಿದ್ದರೆ ಮುಂದಿನ ಎಲ್ಲ ಅವಘಡಗಳಿಗೆ ಪುರಾವೆಯೊದಗಿಸುವ ಮತ್ತು ಸಾಕ್ಷಿಯಾಗಬೇಕಿರುವ ಕಾಲ ದೂರವಿಲ್ಲ ಎನ್ನಿಸುತ್ತಿದೆ.

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....