ಭಾನುವಾರ, ಫೆಬ್ರವರಿ 26, 2017

ಅರಸೀಕೆರೆ ದೊಡ್ಡಕೆರೆಯ ಒಡಲು ಬರಿದಾಗಲು ಕ್ಷಣಗಣನೆ

ಅರಸೀಕೆರೆ ದೊಡ್ಡಕೆರೆಯ ಒಡಲು ಬರಿದಾಗಲು ಕ್ಷಣಗಣನೆ


ಈಗಿನ್ನೂ ಫೆಬ್ರವರಿ ತಿಂಗಳು, ನಮ್ಮ ಅರಸೀಕೆರೆ ದೊಡ್ಡಕೆರೆಯಲ್ಲಿದ್ದ ಅಲ್ಪಸ್ವಲ್ಪ ನೀರು ಬಿಸಿಲಿನ ಝಳಕ್ಕೆ ದಿನದಿಂದ ದಿನಕ್ಕೆ ಒಣಗುತ್ತಿದೆ.  ಬಹುಶಃ ಇನ್ನೊಂದು ಹದಿನೈದು ದಿನಗಳಲ್ಲಿ ನಮ್ಮ ಕೆರೆಯಲ್ಲಿರುವ ನೀರು ಖಾಲಿಯಾಗಿ, ಕೆರೆಯ ಒಡಲು ಸಂಪೂರ್ಣ ಬರಿದಾಗಲಿದೆ.  ಶಿವರಾತ್ರಿಯಿಂದ ನಿಜವಾದ ಬೇಸಿಗೆ ಶುರುವಾಗುತ್ತದೆ, ಅಂದರೆ ಮುಂದಿನ ದಿನಗಳು ಹೇಗಿರುತ್ತೆಂದು ಊಹಿಸಬಹುದು.

ಕೇವಲ ಹದಿನೈದು ದಿನಗಳ ಅಂತರದಲ್ಲಿ ನಮ್ಮೂರ ಕೆರೆಯ ನೀರು ಇಂಗಿಹೋದ ಹಂತಗಳನ್ನು ಮತ್ತು ಕೆರೆಯ ಭೂಮಿಯು ಬಾಯ್ತೆರೆದಿರುವುದನ್ನು ಈ ಚಿತ್ರಗಳಲ್ಲಿ ನೋಡಬಹುದು.

ಇಂತಹ ಸಂದರ್ಭದಲ್ಲೂ, ನಮ್ಮ ಅರಸೀಕೆರೆ ಪಟ್ಟಣದ ಮನೆಮನೆಗಳಿಗೆ ಹೇಮಾವತಿಯ ಶುದ್ಧ ಕುಡಿಯುವ ನೀರು ಸಾಕಷ್ಟು ಪ್ರಮಾಣದಲ್ಲಿ ಸರಬರಾಜಾಗುತ್ತಿದೆ,  ಒಂದೊಂದು ಹನಿ ನೀರನ್ನೂ ಉಳಿಸುವುದು ನಮ್ಮಗಳ ಕರ್ತವ್ಯ.  ದಯವಿಟ್ಟು ನೀರನ್ನು ಪೋಲು ಮಾಡಬೇಡಿ.

Share:

ಶುಕ್ರವಾರ, ಫೆಬ್ರವರಿ 24, 2017

ಮಹಾಶಿವರಾತ್ರಿ

ಅರಸೀಕೆರೆಯ ವಿವಿಧ ಶಿವ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶಿವಲಿಂಗಕ್ಕೆ ಮಹಾಭಿಷೇಕ, ಮಹಾಮಂಗಳಾರತಿ, ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ಭಕ್ತಾದಿಗಳು  ಹೆಚ್ಚಿನ ಸಂಖ್ಯೆಯಲ್ಲಿ  ಆಗಮಿಸಿದ್ದರು.
ಶಿವಾಲಯದಲ್ಲಿ ಶ್ರೀ ಚಂದ್ರಮೌಳೇಶ್ವನ ದರ್ಶನಕ್ಕೆ ಸಾಲಾಗಿ ನಿಂತ ಭಕ್ತರು
ಶಿವಾಲಯದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ
ರೀಡಿಂಗ್ ರೂಂ ರಸ್ತೆಯಲ್ಲಿರುವ ಶ್ರೀ ಭವಾನಿಶಂಕರ ಸ್ವಾಮಿ
ಮಲ್ಲೇಶ್ವರ ಬೆಟ್ಟದಲ್ಲಿರುವ ಶ್ರೀ ಮಳೆಮಲ್ಲೇಶ್ವರ ಸ್ವಾಮಿಯವರಿಗೆ ಕ್ಷೀರಾಭಿಷೇಕ
Share:

ಗುರುವಾರ, ಫೆಬ್ರವರಿ 23, 2017

ಮಹಾಶಿವರಾತ್ರಿ ಪ್ರಯುಕ್ತ ಶಿವಾಲಯಕ್ಕೆ ದೀಪಾಲಂಕಾರ

"ಮಹಾಶಿವರಾತ್ರಿ"


ಅರಸೀಕೆರೆ ಪಟ್ಟಣದಲ್ಲಿರುವ ಹೊಯ್ಸಳ ನಿರ್ಮಿತ ಶಿವಾಲಯಕ್ಕೆ ದಿನಾಂಕ 24-02-2017, ಶುಕ್ರವಾರದಂದು ಜರುಗಲಿರುವ "ಮಹಾಶಿವರಾತ್ರಿ" ಪ್ರಯುಕ್ತ ವಿಶೇಷ ವಿದ್ಯುತ್ ದೀಪಾಲಂಕಾರ.  ದೇವಾಲಯದಲ್ಲಿ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯವರಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ವಿಶೇಷ ಅಲಂಕಾರ ಏರ್ಪಡಿಸಲಾಗುವುದು.

Share:

ಭಾನುವಾರ, ಫೆಬ್ರವರಿ 19, 2017

ಅರಸೀಕೆರೆ ತಾಲ್ಲೂಕಿನಲ್ಲಿರುವ ಸರ್ಕಾರದ ಗೋಶಾಲೆಗಳು

ತಾಲ್ಲೂಕಿನಾದ್ಯಂತ ಮಳೆ-ಬೆಳೆ ಇಲ್ಲದೇ ಭೀಕರ ಬರದಿಂದಾಗಿ, ಗ್ರಾಮಾಂತರ ಪ್ರದೇಶದ ಜನರಿಗೆ ಕುಡಿಯುವ ನೀರಿಗೇ ಕಷ್ಟವಾಗಿರುವಂತಹ ಪರಿಸ್ಥಿತಿಯಲ್ಲಿ, ಜಾನುವಾರುಗಳನ್ನು ನಿರ್ವಹಣೆ ಮಾಡುವುದು ಅತ್ಯಂತ ತ್ರಾಸದಾಯಕವಾಗಿದೆ. ರಾಸುಗಳಿಗೆ ನೀರು, ಮೇವು ಒದಗಿಸಲು ಸಾಧ್ಯವಾಗದೇ ರೈತರು ತಮ್ಮ ಒಡನಾಡಿ ದನಕರುಗಳನ್ನು ಅನಿವಾರ್ಯವಾಗಿ ಮಾರಾಟಮಾಡುವಂತಹ ಸ್ಥಿತಿ ಉಂಟಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ರೈತರ ಸಹಾಯಕ್ಕಾಗಿ, ಸರ್ಕಾರದ ವತಿಯಿಂದ ಅರಸೀಕೆರೆ ತಾಲ್ಲೂಕಿನಲ್ಲಿ ಹೋಬಳಿಗೆ ಒಂದರಂತೆ ಒಟ್ಟು ಐದು ಗೋಶಾಲೆಗಳನ್ನು ತೆರೆಯಲಾಗಿದೆ. ಅರಸೀಕೆರೆ ಕಸಬಾ ವ್ಯಾಪ್ತಿಯ ಬೋರನಕೊಪ್ಪಲು, ಬಾಣಾವರ, ಕಣಕಟ್ಟೆ ಹೋಬಳಿಯ ರಾಂಪುರ, ಗಂಡಸಿ ಹ್ಯಾಂಡ್ ಪೋಸ್ಟ್ ಮತ್ತು ಜಾವಗಲ್ ನಲ್ಲಿ ಒಂದೊಂದು ಗೋಶಾಲೆ ತೆರೆಯಲಾಗಿದೆ. ಇಲ್ಲಿ ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಪ್ರತಿ ರಾಸುಗಳಿಗೆ ದಿನವೊಂದಕ್ಕೆ ಉಚಿತವಾಗಿ ಐದು ಕೆಜಿಯಷ್ಟು ಮೇವು (ಭತ್ತದ ಹುಲ್ಲು, ಜೋಳದ ಹುಲ್ಲು ಇತ್ಯಾದಿ) ಒದಗಿಸಲಾಗುತ್ತಿದೆ. ಅನೇಕ ರೈತರುಗಳು ತಮ್ಮ ರಾಸುಗಳಿಗೆ ತಾತ್ಕಾಲಿಕ ಶೆಡ್ಡುಗಳನ್ನು ನಿರ್ಮಿಸಿ, ಅವರುಗಳೂ ರಾಸುಗಳ ಜೊತೆಯಲ್ಲೇ ಗೋಶಾಲೆಯಲ್ಲಿ ಉಳಿದುಕೊಂಡಿದ್ದಾರೆ. ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪಶುವೈದ್ಯಕೀಯ ಇಲಾಖೆಯ ವೈದ್ಯರುಗಳ ತಂಡ ಪ್ರತಿಯೊಂದು ರಾಸುಗಳ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ.

ಈ ಮಧ್ಯೆ, ಕೆಲವು ಜಾನುವಾರುಗಳಿಗೆ ಸಾಂಕ್ರಾಮಿಕ ರೋಗವಾದ ಕಾಲುಬಾಯಿ ಜ್ವರ ಬಂದಿದೆ ಎಂಬ ಆತಂಕಕಾರಿ ಸುದ್ದಿ ಕೇಳಿಬಂತು. ಈಗಾಗಲೇ ಪಶುವೈದ್ಯರು ಈಕುರಿತು ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದಾರೆ, ಆದರೂ ಅವರ ಕೈಮೀರಿ ಕೆಲವು ದನಗಳಿಗೆ ಈ ರೋಗ ಹರಡಬಹುದಾದ ಸಂಭವವಿದೆ.Share:

ಶನಿವಾರ, ಫೆಬ್ರವರಿ 18, 2017

ಮುಖ್ಯಮಂತ್ರಿಗಳಿಂದ ಅರಸೀಕೆರೆ ತಾಲ್ಲೂಕಿನ ವಿವಿಧ ಕಾಮಗಾರಿಗಳ ಉದ್ಘಾಟನೆ

ಅರಸೀಕೆರೆ ತಾಲ್ಲೂಕಿನ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸಗಳನ್ನು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಸಿದ್ದರಾಮಯ್ಯನವರು ಇಂದು ನೆರವೇರಿಸಿದರು.

ಮಾಜಿ ಪ್ರಧಾನ ಮಂತ್ರಿಗಳು ಹಾಲಿ ಹಾಸನ ಲೋಕಸಭಾ ಸದಸ್ಯರಾದ ಶ್ರೀ. ಹೆಚ್.ಡಿ.ದೇವೇಗೌಡರು, ಪಶುಸಂಗೋಪನೆ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಎ.ಮಂಜುರವರು, ಅರಸೀಕೆರೆ ಕ್ಷೇತ್ರದ ಶಾಸಕರಾದ ಶ್ರೀ. ಕೆ.ಎಂ.ಶಿವಲಿಂಗೇಗೌಡರು, ಮಾಜಿ ಸಚಿವರಾದ ಶ್ರೀ.ಹೆಚ್.ಡಿ. ರೇವಣ್ಣನವರು, ಬೇಲೂರು ಶಾಸಕರಾದ ಶ್ರೀ.ವೈ.ಎನ್. ರುದ್ರೇಶಗೌಡರು, ಶ್ರವಣಬೆಳಗೊಳ ಶಾಸಕರಾದ ಶ್ರೀ.ಬಾಲಕೃಷ್ಣರವರು, ವಿಧಾನ ಪರಿಷತ್ ಸದಸ್ಯರುಗಳು, ಅರಸೀಕೆರೆ ತಾಲ್ಲೂಕಿನ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.Share:

ಮಹಾತ್ಮಗಾಂಧಿ ಚಿತಾಭಸ್ಮ ಸಮಾಧಿಗೆ ಮುಖ್ಯಮಂತ್ರಿಗಳಿಂದ ಪುಷ್ಪನಮನ

ಮಹಾತ್ಮಗಾಂಧಿ ಚಿತಾಭಸ್ಮ ಸಮಾಧಿಗೆ ಮುಖ್ಯಮಂತ್ರಿಗಳಿಂದ ಪುಷ್ಪನಮನ
ಅರಸೀಕೆರೆ ತಾಲ್ಲೂಕಿನ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸಗಳ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಸಿದ್ದರಾಮಯ್ಯನವರು ಇಂದು ಬೆಳಿಗ್ಗೆ ಅರಸೀಕೆರೆ ಹೊರವಲಯದಲ್ಲಿರುವ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿಯವರ ಪವಿತ್ರ ಚಿತಾಭಸ್ಮ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.  ನಂತರ ಕಸ್ತೂರಬಾ ಆಶ್ರಮದ ವಸತಿಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಎ.ಮಂಜು, ಅರಸೀಕೆರೆ ಶಾಸಕರಾದ ಶ್ರೀ.ಕೆ.ಎಂ.ಶಿವಲಿಂಗೇಗೌಡ, ವಿಧಾನಪರಿಷತ್ ಸದಸ್ಯರಾದ ಶ್ರೀ.ಗೋಪಾಲಸ್ವಾಮಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.Share:

ಗುರುವಾರ, ಫೆಬ್ರವರಿ 16, 2017

ಅರಸೀಕೆರೆ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು

ಅರಸೀಕೆರೆ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು


ಅರಸೀಕೆರೆಯಿಂದ ಸುಮಾರು 65 ಕಿಲೋಮೀಟರ್ ದೂರದಲ್ಲಿರುವ ಚನ್ನರಾಯಪಟ್ಟಣ ತಾಲ್ಲೂಕಿನ ಘನ್ನಿಗಡದಲ್ಲಿ ಹರಿಯುವ ಹೇಮಾವತಿ ನಾಲೆಯಿಂದ ನೀರನ್ನು 250 HP ಸಾಮರ್ಥ್ಯದ 3 ಮೋಟರ್ ಪಂಪ್ ಗಳನ್ನು ಬಳಸಿ ಪೈಪ್ ಮೂಲಕ ಅರಸೀಕೆರೆ ತಾಲ್ಲೂಕು ಗಂಡಸಿ ಹ್ಯಾಂಡ್ ಪೋಸ್ಟ್ ಬಳಿ ನಿರ್ಮಿಸಿರುವ ಬೃಹತ್ ಟ್ಯಾಂಕಿಗೆ ತುಂಬಿಸಲಾಗುತ್ತದೆ, ಅಲ್ಲಿಂದ ಗುರುತ್ವಾಕರ್ಷಣೆಯ ಮೂಲಕ ಅರಸೀಕೆರೆ ಪಟ್ಟಣದ ಜೇನುಕಲ್ ನಗರದಲ್ಲಿ ನಿರ್ಮಿಸಿರುವ 150 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕಿಗೆ ನೀರು ಬರುತ್ತದೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನೀರನ್ನು ಪರಿಶುದ್ಧಗೊಳಿಸಿ ಮನೆಮನೆಗಳಿಗೆ ಸರಬರಾಜು ಮಾಡುವ ವಿಶಿಷ್ಠವಾದ ಯೋಜನೆ ಇದಾಗಿದೆ.

121 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಯಗತಗೊಳಿಸಿರುವ ಈ ಯೋಜನೆಯು ನಾಡಿದ್ದು (18-02-2016, ಶನಿವಾರದಂದು) ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ. ಸಿದ್ದರಾಮಯ್ಯನವರಿಂದ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.

ಮನೆಗಳಲ್ಲಿ ಬಳಸುವ ಅಕ್ವಾಗಾರ್ಡ್ ನೀರು ಎಷ್ಟು ಶುದ್ಧವಾಗಿರುತ್ತದೋ, ಅಷ್ಟೇ ಪರಿಶುದ್ಧವಾದ ನೀರು ಇಂದು ನಮ್ಮ ಮನೆಗಳಿಗೆ ಸರಬರಾಜಾಗುತ್ತಿದೆ. ಆದ್ದರಿಂದ, ಈ ಅಮೂಲ್ಯವಾದ ನೀರನ್ನು ಯಾವುದೇ ಕಾರಣಕ್ಕೂ ಪೋಲಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅರಸೀಕೆರೆ ನಾಗರೀಕರಾದ ನಮ್ಮಗಳ ಮೇಲಿದೆ.

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....