ಶುಕ್ರವಾರ, ಮಾರ್ಚ್ 31, 2017

ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪರಿಷ್ಕೃತ ದರ

ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯ ಹಾಸನ,  ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಪಟ್ಟಣಗಳಲ್ಲಿ ಮಾರಾಟ ಮಾಡುತ್ತಿರುವ ವಿವಿಧ ರೀತಿಯ ನಂದಿನಿ ಹಾಲು/ಉತ್ಪನ್ನಗಳ ಮಾರಾಟದ ದರವನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಪರಿಷ್ಕೃತಗೊಳಿಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಟೋನ್ಡ್ ಹಾಲು 250 ಮಿ.ಲೀ.ರೂ 10,
ಟೋನ್ಡ್ ಹಾಲು 500 ಮಿ.ಲೀ.ರೂ 18,
ಟೋನ್ಡ್ ಹಾಲು 1000 ಮಿ.ಲೀ.ರೂ 35,
ಸ್ಟ್ಯಾಂಡರ್ಡೈಸ್ಡ್ ಹೋಮೋಜಿನೈಸ್ಟ್ ಹಾಲು 500 ಮಿ.ಲಿ. ರೂ.21,
ಸ್ಟ್ಯಾಂಡರ್ಡೈಸ್ಡ್ ಹೋಮೋಜಿನೈಸ್ಟ್ ಹಾಲು 1000 ಮಿ.ಲಿ. ರೂ.42,
ನಂದಿನ ಮೊಸರು 200 ಗ್ರಾಂ ರೂ.10,
ನಂದಿನಿ ಮೊಸರು 500 ಗ್ರಾಂ  ರೂ.21 ಮತ್ತು
ನಂದಿಸಿ ಮಸಾಲ ಮಜ್ಜಿಗೆ 200 ಮಿ.ಲಿ. ರೂ.6 ಆಗಿದೆ.

ಪ್ರಸ್ತುತ ಹಳೆಯ ಮಾರಾಟ ದರದಲ್ಲಿ ಮುದ್ರಿತವಾಗಿರುವ ಫಿಲಂ ದಾಸ್ತಾನು ಮುಗಿಯುವವರೆಗೆ ಸದರಿ ಫಿಲಂನಲ್ಲಿ ಪ್ಯಾಕ್ ಮಾಡಿ ಸರಬರಾಜು ಮಾಡುತ್ತಿದ್ದು ಗ್ರಾಹಕರು ಏಪ್ರಿಲ್ 1 ರಿಂದ ಪರಿಷ್ಕೃತ ದರದಲ್ಲಿ ಹಣ ಪಾವತಿಸಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸಲು ಮತ್ತು ಈ ಬಗ್ಗೆ ಎಂದಿನಂತೆ ಸಹಕರಿಸಲು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದಾರೆ.

(ಮಾಹಿತಿ : ವಾರ್ತಾಭವನ, ಹಾಸನ)
(ಚಿತ್ರಕೃಪೆ : ಇಂಟರ್‌ನೆಟ್)
Share:

ಗುರುವಾರ, ಮಾರ್ಚ್ 30, 2017

ಯುಗಾದಿ ಬಿದಿಗೆ ಚಂದ್ರನ ದರ್ಶನ

ಅರಸೀಕೆರೆ ಪಟ್ಟಣದ ಆಗಸದಲ್ಲಿ ಇಂದು ಸಂಜೆ ಕಂಡ ಬಿದಿಗೆ ಚಂದ್ರ.


ನೂತನ ಸಂವತ್ಸರದ ಎರಡನೇ ದಿನವಾದ ಬಿದಿಗೆಯಂದು ಸಂಜೆ ಗೋಚರಿಸುವ ಚಂದ್ರನ ದರ್ಶನ ಅತ್ಯಂತ ಪವಿತ್ರವಾದದ್ದೆಂದು ಭಾವಿಸಲಾಗುತ್ತದೆ.  ಅಲ್ಲದೇ, ಚಂದ್ರನ ಆಕೃತಿಯು ಕೃಷಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಆ ವರ್ಷದ ಮಳೆ-ಬೆಳೆ, ಧಾರಣೆಗಳ ಮುನ್ಸೂಚನೆ ನೀಡುವ ಭವಿಷ್ಯವಾಣಿ ಎಂದು ನಂಬಲಾಗುತ್ತದೆ.  ಬಿದಿಗೆ ಚಂದ್ರದರ್ಶನದ ನಂತರ  ತಂದೆ-ತಾಯಿ ಹಾಗೂ ಗುರು-ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವ ಸಂಪ್ರದಾಯ ನಡೆದುಬಂದಿದೆ.

ಅರಸೀಕೆರೆ ಪಟ್ಟಣದ ಆಗಸದಲ್ಲಿ ಇಂದು ಸಂಜೆ ಕಂಡ ಬಿದಿಗೆ ಚಂದ್ರ

ಅರಸೀಕೆರೆ ಪಟ್ಟಣದ ಆಗಸದಲ್ಲಿ ಇಂದು ಸಂಜೆ ಕಂಡ ಬಿದಿಗೆ ಚಂದ್ರ

ಅರಸೀಕೆರೆ ಪಟ್ಟಣದ ಆಗಸದಲ್ಲಿ ಇಂದು ಸಂಜೆ ಕಂಡ ಬಿದಿಗೆ ಚಂದ್ರ


Share:

ಬಾಣಾವರ ಬಳಿ ರಸ್ತೆ ಅಪಘಾತ – ಇಬ್ಬರ ಸಾವು

ಅರಸೀಕೆರೆ ತಾಲ್ಲೂಕು ಬಾಣಾವರ ಗ್ರಾಮದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಇಂದು ಮಧ್ಯಾನ್ಹ ಸುಮಾರು 3 ಗಂಟೆ ಸಮಯದಲ್ಲಿ ಮಾರುತಿ ಶಿಫ್ಟ್ ಡಿಜೈರ್ ಕಾರು ಮತ್ತು ಬೈಕ್ ನಡುವ ಜರುಗಿದ ರಸ್ತೆ ಅಪಘಾತದಲ್ಲಿ ಬೈಕಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.  KA13 N 7636 ನಂಬರಿನ ಶಿಫ್ಟ್ ಕಾರಿನ  ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡು, ಎದುರಿನಿಂದ KA13 5433  ನಂಬರಿನ ಬೈಕಿಗೆ ಡಿಕ್ಕಿ ಹೊಡೆದಿದ್ದರಿಂದ, ಬೈಕ್ ಸವಾರರಾದ ಲಿಂಗರಾಜು (55 ವರ್ಷ) ಹಾಗೂ ರವಿ (45 ವರ್ಷ) ಇಬ್ಬರೂ ತೀರ್ವವಾಗಿ ಗಾಯಗೊಂಡರು.  ಇಬ್ಬರಿಗೂ ಚಿಕಿತ್ಸೆಗಾಗಿ  ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದರು.  ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಚಿತ್ರ ಮತ್ತು ಮಾಹಿತಿ : ಪೊಲೀಸ್ ಇಲಾಖೆ)

ಅರಸೀಕೆರೆ ತಾಲ್ಲೂಕು ಬಾಣಾವರ ಬಳಿ ರಸ್ತೆ ಅಪಘಾತ – ಇಬ್ಬರ ಸಾವು

ಅರಸೀಕೆರೆ ತಾಲ್ಲೂಕು ಬಾಣಾವರ ಬಳಿ ರಸ್ತೆ ಅಪಘಾತ – ಇಬ್ಬರ ಸಾವು

ಅರಸೀಕೆರೆ ತಾಲ್ಲೂಕು ಬಾಣಾವರ ಬಳಿ ರಸ್ತೆ ಅಪಘಾತ – ಇಬ್ಬರ ಸಾವು

Share:

ಬುಧವಾರ, ಮಾರ್ಚ್ 29, 2017

ಚಾಂದ್ರಮಾನ ಯುಗಾದಿ

ತಮಗೂ ತಮ್ಮ ಕುಟುಂಬದವರಿಗೂ “ಚಾಂದ್ರಮಾನ ಯುಗಾದಿ” ಹಬ್ಬದ ಹಾಗೂ “ನೂತನ ಸಂವತ್ಸರ”ದ ಹಾರ್ದಿಕ ಶುಭಾಶಯಗಳು.  ಈ ವರ್ಷ ನಮ್ಮ ತಾಲ್ಲೂಕಿನಲ್ಲಿ ಉತ್ತಮವಾದ ಮಳೆ-ಬೆಳೆಯಾಗಲಿ, ಕೆರೆ-ಕಟ್ಟೆಗಳು ತುಂಬಿ ಹರಿಯಲಿ ಎಂದು ಪ್ರಾರ್ಥಿಸೋಣ.


Share:

ಮಂಗಳವಾರ, ಮಾರ್ಚ್ 28, 2017

ಅರಸೀಕೆರೆಯಲ್ಲಿ ಯುಗಾದಿ ಹಬ್ಬದ ಖರೀದಿ

ಬರಗಾಲ – ಬೆಲೆ ಏರಿಕೆ ನಡುವೆ ಅರಸೀಕೆರೆ ಪಟ್ಟಣದ ಮಾರುಕಟ್ಟೆಯಲ್ಲಿ ಯುಗಾದಿ ಹಬ್ಬದ ಖರೀದಿ ನೀರಸವಾಗಿತ್ತು.
ಅರಸೀಕೆರೆ ಪಟ್ಟಣದ ಮಾರುಕಟ್ಟೆಯಲ್ಲಿ ಯುಗಾದಿ ಹಬ್ಬಕ್ಕೆ ಮಾವು ಬೇವಿನ ಖರೀದಿ
ಅರಸೀಕೆರೆ ಪಟ್ಟಣದ ಮಾರುಕಟ್ಟೆಯಲ್ಲಿ ಯುಗಾದಿ ಹಬ್ಬಕ್ಕೆ ಹೂವಿನ ಖರೀದಿ
ಅರಸೀಕೆರೆ ಪಟ್ಟಣದ ಮಾರುಕಟ್ಟೆಯಲ್ಲಿ ಯುಗಾದಿಗೆ ಹೊಸ ಉಡುದಾರShare:

ಭಾನುವಾರ, ಮಾರ್ಚ್ 26, 2017

ತೆಂಗಿಗೆ ಬೆಂಕಿ ರೋಗ – ರೈತರಿಗೆ ಗಾಯದ ಮೇಲೆ ಬರೆ

ಸದಾ ಒಂದಲ್ಲಾ ಒಂದು ಸಂಕಷ್ಟಕ್ಕೆ ಸಿಲುಕುವ ಅರಸೀಕೆರೆ ತಾಲ್ಲೂಕಿನ ರೈತರು, ಕಳೆದ ಕೆಲವು ವರ್ಷಗಳಿಂದ ಅನಾವೃಷ್ಠಿಯಿಂದಾಗಿ ತೀವ್ರವಾದ ತೊಂದರೆ ಅನುಭವಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.  ಸತತ ಮೂರು ವರ್ಷಗಳು ಸರಿಯಾದ ಮಳೆಯಾಗದಿದ್ದರಿಂದ, ಹತ್ತಾರು ವರ್ಷಗಳಿಂದ ಫಸಲು ನೀಡುತ್ತಿದ್ದ, ಬಯಲುಸೀಮೆ ರೈತರ ಜೀವನಾಡಿಯಾಗಿದ್ದ ತೆಂಗಿನ ಮರಗಳು ನೀರಿಲ್ಲದೇ ಸುಳಿಬಿದ್ದು ಒಣಗಿ ಹೋಗಿತ್ತು.  ಕೊಳವೆ ಬಾವಿಯ ಸಂಪರ್ಕ ಹೊಂದಿದ್ದ ಕೆಲವು ರೈತರು ಹೇಗೋ ತಮ್ಮ ತೆಂಗಿನ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿತ್ತು.  ಇದೀಗ ಕೊಳವೆ ಬಾವಿಗಳಲ್ಲೂ ನೀರಿನ ಕೊರತೆ ಉಂಟಾಗಿ ಕೃಷಿ ಕಾರ್ಯಕ್ಕೆ ನೀರಿಲ್ಲದಂತಾಗಿದೆ.  ಈ ನಡುವೆ ಅರಸೀಕೆರೆ ತಾಲ್ಲೂಕಿನ ಜಾಜೂರು, ನಾಗತಿಹಳ್ಳಿ, ಬೆಂಡೇಕೆರೆ, ಎಮ್ ಹೊಸಹಳ್ಳಿ, ಹಿರಿಯೂರು ಸೇರಿದಂತೆ ಕೆಲವು ಹಳ್ಳಿಗಳಲ್ಲಿ ತೆಂಗಿನ ಮರಗಳಿಗೆ ಸಾಂಕ್ರಾಮಿಕ ರೋಗವಾದ ಬೆಂಕಿ ರೋಗ ಕಾಣಿಸಿಕೊಂಡಿದ್ದು ಗಾಯದ ಮೇಲೆ ಬರೆ ಬಿದ್ದಂತಾಗಿ, ರೈತರು ತಮ್ಮ ಮುಂದಿನ ಭವಿಷ್ಯವೇನು ಎಂದು ಯೋಚಿಸುವಂತೆ ಮಾಡಿದೆ.

ರೋಗದ ಲಕ್ಷಣ :

ಬೆಂಕಿರೋಗಕ್ಕೆ ಕಾರಣ ಕಪ್ಪುತಲೆ ಹುಳು (Black headed caterpillar) ಇದು ತೆಂಗಿನ ಗರಿಗಳ ಹಿಂಭಾಗದಲ್ಲಿ ಕುಳಿತು ಎಲೆಯ ಹಿಂಭಾವನ್ನು ತಿನ್ನುತ್ತದೆ. ಇದರಿಂದಾಗಿ ಹಸಿರಾಗಿದ್ದ ಎಲೆಗಳು ಬಣ್ಣ ಕಳೆದುಕೊಂಡು ಸುಟ್ಟುಹೋದಂತೆ ಕಾಣುತ್ತವೆ.  ಇದರಿಂದಾಗಿ ತೆಂಗಿನ ಬೆಳೆಯ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುತ್ತದೆ.   ಈ ರೋಗ ನಿಯಂತ್ರಣ ಮಾಡಲು ತೋಟಗಾರಿಕಾ ಇಲಾಖೆಯವರು ಪರೋಪಜೀವಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.  ಇಲಾಖೆಯ ತಜ್ಞರ ಸಲಹೆಯನ್ನು ಪಾಲಿಸಿದಲ್ಲಿ ಒಂದೆರಡು ವರ್ಷಗಳಲ್ಲಿ ಮರ ಮತ್ತೆ ಮೊದಲಿನಂತಾಗುತ್ತದೆ ಎಂದು ತೋಟಗಾರಿಕಾ ಇಲಾಖೆಯ ಶಿವಕುಮಾರ್ ರವರು ತಿಳಿಸಿದರು.  ಈ ರೋಗವು ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಒಂದು ಉತ್ತಮವಾದ ಗುಡುಗು ಸಿಡಿಲಿನ ಮಳೆಯಾದಲ್ಲಿ, ಎಲೆಯ ಮೇಲಿರುವ ಕಪ್ಪುತಲೆ ಲಾರ್ವಾಗಳು ಮಳೆ ನೀರಿನಲ್ಲಿ ಕೊಚ್ಚಿಹೋಗಿ ರೋಗದ ಪ್ರಮಾಣ ಕಡಿಮೆಯಾಗುತ್ತದೆ ಎಂದರು. 


ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

Share:

ಗುರುವಾರ, ಮಾರ್ಚ್ 23, 2017

ಗೋಡೆಗಳ ನಡುವೆ......

ಗೋಡೆ ಎಂಬುದು ಬಯಲೊಳಗೆ ಬದುಕು ಕಟ್ಟಿಕೊಳ್ಳುವುದರ ಸಂಕೇತವಾಗಿದೆ. ಸುತ್ತಲೂ ಎದ್ದ ಗೋಡೆಯೊಳಗೇ ಮನುಷ್ಯ ತನ್ನ ಖಾಸಗೀ ಬದುಕನ್ನು ಅರಿಯುತ್ತಾನೆ. ಸ್ವಂತಿಕೆಯ ಕುಡಿಯೊಡೆದು ಕವಲಾಗಿ ಬೆಳೆಯುತ್ತಾನೆ. ಬದುಕಿಗಾಗಿ ಹೊರಗಣ ತಿರುಗಾಟ ಬಳಲಿಸಿದಾಗ ಗೋಡೆಯ ನೆರವು ಅವನಿಗೆ ಅನಿವಾರ್ಯವಾಗುತ್ತದೆ. ನಾಲ್ಕು ಗೋಡೆಗಳ ನಡುವಣ ಪುಟ್ಟ ಗೂಡು ಮನುಷ್ಯನ ದೈಹಿಕ  ಮತ್ತು ಭಾವನಾತ್ಮಕ ಸಮಾಧಾನಗಳನ್ನು ಅವನಿಗೆ ಕರುಣಿಸುತ್ತದೆ. ಹೊರಗಿನ ದಾಳಿಗಳಿಂದ ತಪ್ಪಿಸಿಕೊಳ್ಳಲು ನಮ್ಮ ಪೂರ್ವಿಕರು ಗುಹೆಗಳನ್ನೇ ಮನೆಗಳನ್ನಾಗಿ ಆರಿಸಿಕೊಂಡ ಕಾರಣ ನಮಗರಿವಾದರೆ, ಗೋಡೆಯ ಅಗತ್ಯತೆ ನಮಗೆ ಮನದಟ್ಟಾಗುತ್ತದೆ.
ಆದಿ ಮಾನವನಿಂದ ಹಿಡಿದು ಆಧುನಿಕ ಮಾನವನವರೆಗೂ ಎಲ್ಲ ಮನುಷ್ಯರೂ ಗೋಡೆಗಳ ನಿರ್ಮಾಣಕ್ಕೆ ಕೈಹಾಕಿದವರೇ ಆಗಿದ್ದಾರೆ. ರಾಜ ಮಹಾರಾಜರಂತೂ ಕೋಟೆಗಳೆಂಬ ಬೃಹತ್ ಗೋಡೆಗಳನ್ನು ಕಟ್ಟಿಸಿದರೆ,ದೇಶದೇಶಗಳ ನಡುವೆ ಎದ್ದ ಗೋಡೆಗಳ ಇತಿಹಾಸವೂ ಇದೆ. ಚೀನಾದ ಮಹಾನ್ ಗೋಡೆಯಂತೂ ಗೋಡೆಯ ಕುರಿತ ಮಾನವನ ಅಪಾರ ನಂಬುಗೆಯ ಸಾಕ್ಷಿಯಾಗಿದೆ. ನಮ್ಮ ನಮ್ಮ ಸರಹದ್ದುಗಳನ್ನು ಸ್ಥಾಪಿಸಲು ಗೋಡೆಯೋ, ಬೇಲಿಯೋ ಅನಿವಾರ್ಯ ಸಂಗತಿಯೇ ಆಗಿದೆ. ಸರಿಯಾದ ಬೇಲಿಗಳು ಸರಿಯಾದ ನೆರೆಹೊರೆಯವರನ್ನು ಕೊಡಬಲ್ಲವು ಎಂಬ ರಾಬರ್ಟ್ ಫ್ರಾಸ್ಟ್ ಕವಿಯ ಮಾತು ಸಹಜವೆನ್ನಿಸುತ್ತದೆ.
ಮಣ್ಣು, ಇಟ್ಟಿಗೆ, ಕಲ್ಲು, ಸಿಮೆಂಟು ಮುಂತಾದುವುಗಳಿಂದ ನಿರ್ಮಿತವಾಗುವ ಭೌತಿಕ ಗೋಡೆಗಳ ಹಾಗೆಯೇ ಮನುಷ್ಯನ ಮನಸ್ಸಿನಲ್ಲೂ ಗೋಡೆಗಳೇಳುತ್ತವೆ. ಕೆಲವು ಬಾರಿ ಸರಿಸಬಹುದಾದ ಗೋಡೆಗಳೆದ್ದರೆ ಕೆಲವು ಬಾರಿ ಬಹುಕಾಲ ನಿಲ್ಲುವ ಯಾವ ಭಾವನೆಗಳನ್ನೂ ಅರ್ಥ ಮಾಡಿಕೊಳ್ಳಲಾರದ ಗೋಡೆಗಳೂ ಎದ್ದುಬಿಡುತ್ತವೆ. ಜಾತಿ, ಮತ, ಸಂಪ್ರದಾಯ, ನಂಬಿಕೆ, ಮೌಲ್ಯ, ಸಿದ್ಧಾಂತ ಮುಂತಾದ ಹೆಸರಿನಲ್ಲಿ ಕಟ್ಟಲ್ಪಡುವ ಈ ಗೋಡೆಗಳ ನಿರ್ಮಾಣಕ್ಕೆ ಬಳಸಿದ ಮನಸ್ಸುಗಳೆಂಬ ಇಟ್ಟಿಗೆಗಳು ಹೊರಗಿನ ದಾಳಿ, ಗಾಳಿಗಳಿಂದ ಉಳಿದು ನಿಲ್ಲುತ್ತವೆ. ಮನುಷ್ಯನ ಅಹಂಕಾರದ ಸಾಕ್ಷಿಗಳೇ ಆಗಿ ನಿಲ್ಲುತ್ತವೆ.
ಅಂದರೆ ಈ ಗೋಡೆಗಳು ಮನುಷ್ಯ ಮನುಷ್ಯರ ನಡುವಣ ದೂರವನ್ನು ಹೆಚ್ಚಿಸುತ್ತವೆ. ಅವನ ಬದುಕನ್ನೇ ಅಸಹನೀಯವಾಗಿಸುತ್ತವೆ. ವ್ಯಕ್ತಿಯ ನೆಲೆಯಲ್ಲಿ ಹುಟ್ಟಿಕೊಳ್ಳುವ ಈ ಗೋಡೆಗಳು ಸಮಷ್ಟಿಯ ನೆಮ್ಮದಿಯನ್ನು ಕೆಡಿಸಿ ಆತಂಕದ ಛಾಯೆಯನ್ನು ಆಕಾಶದುದ್ದಕ್ಕೂ ಎರಚಿಬಿಡುತ್ತವೆ. ಅಬೇಧ್ಯ ಗೋಡೆಗಳ ನಿರ್ಮಾಣದಲ್ಲಿ ಹಟಮಾರಿತನವೇ ಮುಖ್ಯ ಕಾರಣವಾಗಿರುತ್ತದೆ.
ಮನೆಗೆ ಗೋಡೆಗಳು ಬೇಕಾದರೂ ಗಾಳಿ ಬೆಳಕಿಗೆ ಕಿಟಕಿ ಬಾಗಿಲುಗಳ ಅನಿವಾರ್ಯತೆ ಇರುತ್ತದೆ. ಆದರೆ ನಮ್ಮ ನಡುವೆ ಏಳುವ ಗೋಡೆಗಳಿಗೆ  ಕಣ್ಣು ಮೂಗುಗಳಿಲ್ಲದಿದ್ದರೂ ಕಿವಿಗಳಂತೂ ಇದ್ದೇ ಇರುತ್ತವೆ. ಹಾಗಾಗಿಯೇ ಬರಿಯ ಮಾತಲ್ಲಿ ಮುಗಿಸಬಹುದಾದ್ದು ಹೊಡೆದಾಟಗಳಿಗೆ ಕಾರಣವಾಗುತ್ತವೆ. ಕಿಟಕಿ ಬಾಗಿಲುಗಳಿಲ್ಲದ ಗೋಡೆ ಮನೆಯಾಗದೇ ಜೈಲುಗಳನ್ನು ನಿರ್ಮಿಸುತ್ತದೆ. ನಾನಿರುವುದಷ್ಟೇ ಪ್ರಪಂಚವೆಂಬ ಕೂಪಮಂಡೂಕತನವೂ ಬೆಳೆಯುತ್ತದೆ. ಮುಕ್ತ ಮನಸ್ಕನಿಗೆ ಗೋಡೆ ಎಂಬುದು ಹಾರಲಾರದ ಏರಲಾರದ ಎವರೆಷ್ಟಾಗಿ ಬದಲಾಗುತ್ತದೆ. ಎಲ್ಲ ಮತ, ಧರ್ಮಗಳ ಗೋಡೆಯೊಡೆದು ಅಗಲ ಬಯಲೊಳಗೆ ನಿಲ್ಲಬೇಕೆಂಬುದು ಬಹುದೊಡ್ಡ ಆದರ್ಶ. ಎಲ್ಲಿಯೂ ನಿಲ್ಲದಿರು ಮನೆಯನೆಂದೂ ಕಟ್ಟದಿರು ಎನ್ನುವುದು ಎಂಬುದಂತೂ ಮೇರು ಮಟ್ಟದ ಆದರ್ಶ. 
ನಮ್ಮ ಸುತ್ತಲೂ ಭಾವನಾತ್ಮಕ ಗೋಡೆಗಳನ್ನು ಕಟ್ಟಿಕೊಳ್ಳುತ್ತ ಹೋಗುವುದರಿಂದ ನಮ್ಮ ಮನಸ್ಸುಗಳು ಸೂಕ್ಷ್ಮವಾಗುತ್ತ ಹೋಗುತ್ತವೆ. ಮನಸ್ಸು ವಿಕಾರಗೊಂಡರೆ ಸಕಾರವಿದ್ದುದೂ ವಿರೂಪವಾಗಿ ಕಾಣತೊಡಗುತ್ತದೆ. ಕುರುಕ್ಷೇತ್ರ ಯುದ್ಧಕ್ಕೆ ಧುರ್ಯೋಧನನ ಹಟಮಾರಿತನವೆಂಬ ಗೋಡೆ ಕಾರಣವಾದರೆ ರಾಮಾಯಣದ ಯುದ್ಧಕ್ಕೆ ರಾವಣನ ಮನಸ್ಸಿನಲ್ಲೆದ್ದ ಪರಸ್ತ್ರೀ ವ್ಯಾಮೋಹವೆಂಬ ಗೋಡೆ ಕಾರಣವಾಯಿತು. ಈ ಇಬ್ಬರೂ ಕಾವ್ಯನಾಯಕರು ತಮ್ಮ ಗೋಡೆಗಳಿಗೆ ವಿವೇಕದ ಕಿಟಕಿ ಹೊಂದಿಸಿದ್ದರೆ ಕಥೆಗಳ ಅಂತ್ಯ ಖಂಡಿತವಾಗಿ ಬದಲಾಗುತ್ತಿತ್ತು ಅಲ್ಲವೇ?
ಗೋಡೆಗಳಿಲ್ಲದಿದ್ದರೆ ಜೀವಕ್ಕೆ ರಕ್ಷಣೆ ಇರುವುದಿಲ್ಲ,. ಬಯಲೆಂಬುದು ಸುಲಭಕ್ಕೆ ಸಿಕ್ಕುವ ಸಾಧನವೂ ಅಲ್ಲ. ಹಾಗಾಗಿ ಗೋಡೆಗಳಿಗೆ ವಿವೇಕವೆಂಬ ಕಿಟಕಿಗಳನ್ನಿಟ್ಟುಕೊಂಡು ಹೊರಗಣ ಗಾಳಿಬೆಳಕುಗಳನ್ನು ಗಮನಿಸಿ ವಾತಾವರಣಕ್ಕೆ ತಕ್ಕಂತೆ ಬದುಕುವುದು ಅನಿವಾರ್ಯವಾಗಿದೆ.
ಆದರೆ ಇತ್ತೀಚೆಗೆ ನಮ್ಮ ಸ್ವಯಂ ಘೋಷಿತ ದೇವಮಾನವರು ತಮ್ಮ ಶಿಷ್ಯವರ್ಗವನ್ನು ದೊಡ್ಡ ಗೋಡೆಗಳ ನಡುವಿನ ಕಂದಕದಲ್ಲಿಟ್ಟ ಕಾರಣ ಜಗತ್ತೇ ಸೆರೆಮನೆಯಾಗಿ ಬದಲಾಗುತ್ತಿದೆ. ಅಕಾರಣ ವಿದ್ವೇಷ, ಧಾರ್ಮಿಕ ನಂಬುಗೆಗಳ ಕಾರಣ ತೊಟ್ಟ ವಿಧಿ ವಿಧಾನಗಳು ನಮ್ಮೊಳಗಿನ ಮನುಷ್ಯನನ್ನು ಇನ್ನಷ್ಟು ಮತ್ತಷ್ಟು ಕಂದಕಕ್ಕೆ ತಳ್ಳುತ್ತಿವೆ. ಕೂಪಮಂಡೂಕತ್ವಕ್ಕೆ ಇಂಬು ಕೊಡುತ್ತಿವೆ. ಗೋಡೆಯನ್ನು ನಿವಾರಿಸಿದ ಬಯಲ ಆಲಯ ನಮ್ಮ ಶರಣರ ಆದರ್ಶವಾಗಿದ್ದರೆ ಪ್ರಸ್ತುತ ಗೋಡೆಗಳೊಳಗೆ ನಡೆಯಬೇಕಾದ ಖಾಸಗೀ ಸಂಗತಿಗಳೂ ಮಾಧ್ಯಮದ ಅಬ್ಬರದ ಪ್ರಚಾರದಲ್ಲಿ ಬಯಲಾಗಿ ತತ್ವ ಆದರ್ಶ ನಿಷ್ಠೆಗಳೆಂಬ ಪದಗಳು ನಿಘಂಟಿನಿಂದ ಶಾಶ್ವತ ವಿಮುಕ್ತಿ ಪಡೆದಿರುವಂತೆ ಕಾಣುತ್ತಿದೆ.
ಆಧ್ಯಾತ್ಮದ ಅರ್ಥದಲ್ಲಿ ಗೋಡೆಗೂ ಬಯಲಿಗೂ ನಡುವೆ ಮೀರಬಹುದಾದ ತೆಳ್ಳನೆಯ ತೆರೆಯಿದ್ದರೆ ವಾಸ್ತವದ ಗೋಡೆಗೂ ಬಯಲಿಗೂ ನಡುವೆ ದೊಡ್ಡ  ಅಜಗಜಾಂತರ ವ್ಯತ್ಯಾಸವೇ ಇದೆ. ಹೇಳುವ ಸಂಗತಿಗೂ ಬಾಳುವ ರೀತಿಗೂ ಇದನ್ನೇ ವಿಸ್ತರಿಸಬಹುದು. ನಮ್ಮ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಈ ಗೋಡೆಗಳ ನಿರ್ಮಾತೃಗಳಾಗಿದ್ದಾರೆ. ತಾವು ಕಟ್ಟುವ ಕೋಟೆಗಳೊಳಗೆ ಮಾತ್ರ ಸುಖವಿದೆಯೆಂಬ ಸುಳ್ಳನ್ನು ಬಿತ್ತಿ ಅನ್ಯರ ಚಿಂತನೆಯನ್ನು ಒಪ್ಪದ ಮಾನಸಿಕ ಸ್ಥಿತಿಗೆ ನಮ್ಮನ್ನು ತಳ್ಳಿಬಿಡುತ್ತಾರೆ.
ರಾಜಕಾರಣ ಮತ್ತು ಧಾರ್ಮಿಕ ನಡವಳಿಕೆಗಳಿಲ್ಲದ ಬದುಕು ಕಲ್ಪಿಸಿಕೊಳ್ಳುವುದಕ್ಕೂ ಎದೆಗಾರಿಕೆ ಬೇಕು. ಅಂಥದೊಂದು ಗೋಡೆ ಕಟ್ಟಿಕೊಳ್ಳದಿದ್ದರೆ ಪ್ರಸ್ತುತ ವರ್ತಮಾನದ ದುರಂತಕ್ಕೆ ಸಾಕ್ಷಿಯಾಗಬೇಕಾದ ಅನಿವಾರ್ಯ ನಮ್ಮದಾಗುತ್ತದೆ.
Share:

ಶಹೀದ್ ದಿವಸ್

"ಭಗತ್ ಸಿಂಗ್"

ಆ ಹೆಸರು ಕೇಳಿದರೇ ಭಾರತೀಯರ ಮೈ ರೋಮಾಂಚನ ಗೊಳ್ಳುತ್ತದೆ. ಕೇವಲ 23 ವರ್ಷದ ಯುವಕ, ಬ್ರಿಟೀಷರನ್ನು ಭಾರತದಿಂದ ತೊಲಗಿಸಲು ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿ ಚಳುವಳಿ ಮೂಲಕ ಭಾರತೀಯರ ಮನೆ ಮನಗಳಲ್ಲಿ ವಿಶಿಷ್ಟ ಸ್ಥಾನ ಗಳಿಸಿದ ವ್ಯಕ್ತಿ.

ದಿನಾಂಕ 23-03-1931, ರಂದು ಸಂಜೆ 7.30ಕ್ಕೆ ಲಾಹೋರಿನ ಸೆಂಟ್ರಲ್ ಜೈಲ್ ನಲ್ಲಿ ಭಗತ್ ಸಿಂಗ್, ಶಿವರಾಜ ಹರಿ ರಾಜಗುರು ಮತ್ತು ಸುಖದೇವ್ ಥಾಪರ್ ಈ ಮೂವರನ್ನು ಬ್ರಿಟೀಷ್ ಅಧಿಕಾರಿಗಳು ಗಲ್ಲುಶಿಕ್ಷೆಗೆ ಒಳಪಡಿಸಿದರು.

"ಭಾರತಾಂಬೆಯ ಈ ಮೂವರು ವೀರಪುತ್ರರಿಗೆ ನಮ್ಮ ನಮನಗಳನ್ನು ಸಲ್ಲಿಸೋಣ"


Share:

ಬುಧವಾರ, ಮಾರ್ಚ್ 22, 2017

ಅರಸೀಕೆರೆ.in - ಹೊಸ ಸಂವತ್ಸರಕ್ಕೆ ಹೊಸ ರೂಪ

ತಮ್ಮೆಲ್ಲರ ಪ್ರೋತ್ಸಾಹ, ಸಲಹೆ, ಸೂಚನೆಗಳಿಂದ ಅರಸೀಕೆರೆ.in ದಿನದಿಂದ ದಿನಕ್ಕೆ ತನ್ನ ಓದುಗರ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದೆ.  ಕೇವಲ ನಮ್ಮ ರಾಜ್ಯ ಹಾಗೂ ದೇಶದಿಂದಷ್ಟೇ ಅಲ್ಲ, ವಿದೇಶಗಳಿಂದಲೂ ನಮ್ಮ ವೆಬ್ ಸೈಟ್ ಗೆ ಪ್ರತಿದಿನ ಓದುಗರು ಭೇಟಿ ನೀಡುತ್ತಿದ್ದಾರೆ.  

"ಯುಗಾದಿ" ನಮಗೆ ಹೊಸ ವರ್ಷ. ಆ ದಿನದಿಂದ ಹೊಸ ಸಂವತ್ಸರದ ಪ್ರಾರಂಭವಾಗುತ್ತದೆ.   ಈ ಹೊಸ ವರ್ಷದ ಆಚರಣೆಗಾಗಿ ಅರಸೀಕೆರೆ.in ವೆಬ್ ಸೈಟಿನಲ್ಲಿ ಕೆಲವೊಂದು ನೂತನ ಅಂಕಣಗಳನ್ನು ಪ್ರಾರಂಭಿಸಲಿದ್ದೇವೆ.  

ನಮ್ಮೆಲ್ಲರಲ್ಲೂ ಒಂದೊಂದು ವಿಶೇಷವಾದ ಪ್ರತಿಭೆ, ಅಭಿರುಚಿ, ಹವ್ಯಾಸಗಳಿರುತ್ತವೆ.  ಆದರೆ ಅವುಗಳನ್ನು ಪ್ರಕಟಿಸಲು ಸೂಕ್ತ ವೇದಿಕೆ ದೊರೆಯದೇ ಎಲೆಮರೆ ಕಾಯಿಯಂತಾಗುತ್ತೇವೆ.  ಅರಸೀಕೆರೆ.in ಇಂತಹ ಪ್ರತಿಭೆಗಳಿಗೆ ವೇದಿಕೆಯಾಗಲಿದೆ.  ಇನ್ನು ಮುಂದೆ ನೀವೂ ಕೂಡ ನಿಮ್ಮ ಬರಹಗಳನ್ನು, ಚಿಂತನೆಗಳನ್ನು, ಕಥೆ, ಕಾವ್ಯಗಳನ್ನು, ಹೊಸ ರುಚಿ ಅಡುಗೆಗಳನ್ನು, ಚಲನಚಿತ್ರ ವಿಮರ್ಶೆ, ಅರಸೀಕೆರೆಗೆ ಸಂಬಂಧಿಸಿದ ಸಾರ್ವಜನಿಕ ಕುಂದು-ಕೊರತೆ, ನಮ್ಮ ತಾಲ್ಲೂಕಿನಲ್ಲಿ ಜರುಗುರುವ ಜಾತ್ರೆ, ಉತ್ಸವ, ಕಾರ್ಯಕ್ರಮಗಳ ಮಾಹಿತಿ ಹಾಗೂ ವಿಶೇಷವಾದ ಛಾಯಾಚಿತ್ರಗಳನ್ನು ಅರಸೀಕೆರೆ.in ನಲ್ಲಿ ಪ್ರಕಟಿಸಬಹುದು. 

ನಿಮ್ಮ ಲೇಖನ /ಚಿತ್ರಗಳನ್ನು arsikere.in@gmail.com ವಿಳಾಸಕ್ಕೆ ಈಮೇಲ್ ಮುಖಾಂತರ  ಕಳಿಸಬೇಕು.   ತಾವು ಕಳಿಸುವ ವಿಷಯಗಳು/ಚಿತ್ರಗಳು ಖಡ್ಡಾಯವಾಗಿ ಸ್ವಂತದ್ದಾಗಿರಬೇಕು. ಇಂಟರ್ನೆಟ್ಟಿನಲ್ಲಿ ದೊರೆಯುವ, ವ್ಯಾಟ್ಸಪ್, ಫೇಸ್ ಬುಕ್ಕಿನಲ್ಲಿ ಬೇರೆಯವರು ಶೇರ್ ಮಾಡಿರುವ ಮಾಹಿತಿಗಳನ್ನು, ಫೋಟೋಶಾಪ್ ತಂತ್ರಜ್ಞಾನ ಬಳಸಿ ತಿದ್ದುಪಡಿ ಮಾಡಿರುವ ಚಿತ್ರಗಳು ಹಾಗೂ ಕೃತಿಚೌರ್ಯದ ಲೇಖನಗಳನ್ನು ಪ್ರಕಟಿಸುವುದಿಲ್ಲ.  ಯಾವುದೇ ವಿವಾದಾತ್ಮಕವಾದ, ಪ್ರಕಟಿಸಲು ಯೋಗ್ಯವಿಲ್ಲದಂತಹ ವಿಷಯಗಳನ್ನು, ಚಿತ್ರಗಳನ್ನು ಸ್ವೀಕರಿಸುವುದಿಲ್ಲ.  ನೀವು ಕಳಿಸುವ ಮಾಹಿತಿಯನ್ನು ಪ್ರಕಟಿಸುವ ಅಥವಾ ತಿರಸ್ಕರಿಸುವ ಹಕ್ಕು ಅರಸೀಕೆರೆ.in ನದ್ದಾಗಿರುತ್ತದೆ.  ಲೇಖನಗಳು / ಚಿತ್ರಗಳು ತಮ್ಮ ಹೆಸರಿನಿಂದಲೇ ಪ್ರಕಟಿಸಲಾಗುತ್ತದೆ ಹಾಗೂ ಇದಕ್ಕೆ ಯಾವುದೇ ಸಂಭಾವನೆ ಇರುವುದಿಲ್ಲ.  ಚಿತ್ರಗಳ ಮೇಲೆ ಅರಸೀಕೆರೆ.in ಲೋಗೋ ಪ್ರಕಟಿಸಲಾಗುವುದು.

ಬನ್ನಿ, ನಮ್ಮ ಅರಸೀಕೆರೆಯ ಸುದ್ದಿ ಸಮಾಚಾರಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಲು ಕೈಜೋಡಿಸೋಣ.

ವಂದನೆಗಳು
ಅರಸೀಕೆರೆ.in
www.arsikere.inShare:

ಭಾನುವಾರ, ಮಾರ್ಚ್ 19, 2017

ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಅರಸೀಕೆರೆ ತಾಲ್ಲೂಕು ಬಂಡಿಹಳ್ಳಿ ಗ್ರಾಮದಲ್ಲಿ ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಮತ್ತು ಧರ್ಮಜಾಗೃತಿ ಸಮ್ಮೇಳನ ಜರುಗಿತು.

ಬಾಳೆಹೊನ್ನೂರು  ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು.  ಎಡೆಯೂರಿನ ರೇಣುಕ ಶಿವಾಚಾರ್ಯರು ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನೊಣವಿನಕೆರೆ ಕರಿವೃಷಭ ಶಿವಯೋಗೀಶ್ವರ ಸ್ವಾಮಿಗಳು ವಹಿಸಿದ್ದರು. ದೊಡ್ಡಗುಣಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹೊನ್ನವಳ್ಳಿ ಶಿವಪ್ರಕಾಶ ಶಿವಾಚಾರ್ಯರು, ಕುಪ್ಪೂರು ಡಾ|| ಯತೀಶ್ವರ ಶಿವಾಚಾರ್ಯರು, ತಿಪಟೂರಿನ ರುದ್ರಮುನಿಸ್ವಾಮಿಗಳು, ನುಗ್ಗೇಹಳ್ಳಿ ಮಹೇಶ್ವರ ಶಿವಾಚಾರ್ಯರು, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ದೊಡ್ಡಮೇಟಿಕುರ್ಕೆ ಶಶಿಧರ ದೇವರು, ಮಾಡಾಳು ಅಭಿನವ ಶಿವಲಿಂಗ ಸ್ವಾಮಿಗಳು ಮೊದಲಾದ ಮಠಾಧೀಶರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.  ಮಾಜಿ ಶಾಸಕರಾದ ಕೆ.ಪಿ..ಪ್ರಭುಕುಮಾರ, ಜಿ.ಎಸ್. ಪರಮೇಶ್ವರಪ್ಪ ಮತ್ತು ಜಿ.ಎಸ್. ಗುರುಸಿದ್ಧಪ್ಪ, ಎಂ. ಕಾಂತರಾಜು, ಜೆ.ಎಸ್. ಮುರುಗೇಂದ್ರಪ್ಪ, ಕೆ.ಪಿ. ಚಂದ್ರಶೇಖರ, ಜಿ.ಪಂ.ಅಧ್ಯಕ್ಷೆ ಶ್ವೇತ ದೇವರಾಜ್, ಸ್ಥ.ಯೋ.ಪ್ರಾ.ಅಧ್ಯಕ್ಷ ಜಿ.ಎಸ್.ಚಂದ್ರಶೇಖರ್, ನಿರ್ವಾಣಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

(ಚಿತ್ರ/ಮಾಹಿತಿ : ವಾರ್ತಾ ಸಂಯೋಜನಾಧಿಕಾರಿಗಳು, ರಂಭಾಪುರಿ ಪೀಠ)
(ಚಿತ್ರಗಳು : ಟಿ.ಎಸ್.ಚಂದ್ರಮೌಳಿ)
Share:

ಅರಸೀಕೆರೆಯ ಕೆರೆ : ಅಂದು-ಇಂದು

2010ನೇ ಇಸವಿ ಡಿಸೆಂಬರ್ ತಿಂಗಳಲ್ಲಿ ಅರಸೀಕೆರೆ ಕೆರೆ ಸಂಪೂರ್ಣ ಭರ್ತಿಯಾಗಿ, ಕೋಡಿ ಬಿದ್ದಿತ್ತು.  ಆದರೆ ನಂತರದ ವರ್ಷಗಳಲ್ಲಿ ಮಳೆಯ ಕೊರತೆಯಿಂದಾಗಿ ಇದೀಗ ಕೆರೆ ಸಂಪೂರ್ಣವಾಗಿ ಬತ್ತಿಹೋಗಿದೆ.  ಇನ್ನೇನು ಕೆಲವೇ ದಿನಗಳಲ್ಲಿ ಬರಲಿರುವ ಯುಗಾದಿ ಹಬ್ಬದಿಂದ ಹೊಸ ಸಂವತ್ಸರದ ಪ್ರಾರಂಭವಾಗಲಿದೆ.  ಈ ನೂತನ ಸಂವತ್ಸರದಲ್ಲಾದರೂ ನಮ್ಮೂರ ಹಾಗೂ ನಮ್ಮ ತಾಲ್ಲೂಕಿನ ಎಲ್ಲ ಕೆರೆಕಟ್ಟೆಗಳು ತುಂಬಿಹರಿಯಲಿ.


Share:

ಶನಿವಾರ, ಮಾರ್ಚ್ 18, 2017

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನೆವದಲ್ಲಿ


ಅಂತರಾಷ್ಟ್ರೀಯ ಮಹಿಳಾ ದಿನದ  ಸಂಜೆ ಅಚಾನಕ್ಕಾಗಿ ಸಿಕ್ಕ ಬಹುಕಾಲದ ಮಿತ್ರರೂ ಕಾರ್ಮಿಕ ಮುಖಂಡರೂ ಆದ ಕಾಂ.ವಿಜಯಕುಮಾರ್ ಕೈಫಿ ಆಜ್ಮಿಯವರ  "ಔರತ್" ಕವಿತೆಯ ಕಚ್ಚಾ ಅನುವಾದವೊಂದನ್ನು ಬಹಳ ಮುತುವರ್ಜಿಯಲ್ಲಿ ತುಂಬ ಗಂಭೀರವಾಗಿ ಓದಿದರು. ಸಹಜವಾಗಿ ಕಮ್ಯುನಿಸ್ಟ್ ಸಿದ್ಧಾಂತಗಳನ್ನೊಪ್ಪುವವರಿಗೆ ಖಂಡಿತ ಕೈಫಿ ಆಜ್ಮಿ ಇಷ್ಟವಾಗುತ್ತಾರೆ ಮತ್ತು ಇಷ್ಟವಾಗಲೇಬೇಕು. ಅವರ ಕಚ್ಚಾ ಅನುವಾದದ ಮತ್ತೊಂದು ಪ್ರತಿ ತೆಗೆದು ಈ ಸರಿರಾತ್ರಿಯಲ್ಲಿ ಮತ್ತೆ ಮತ್ತೆ ಓದುತ್ತಾ ಸುಖಿಸುತ್ತಿರುವಾಗ ತಟ್ಟನೆ ಈ ಕವಿತೆ "ಸ್ತ್ರೀ" ಶೀರ್ಷಿಕೆಯಲ್ಲಿ ದಿ.ವಿಭಾ ತಿರಕಪಡಿ ಅನುವಾದಿಸಿದ್ದು ನೆನಪಾಗಿ ಕಾಡಿತು. ಲಡಾಯಿ ಬಸೂ ಪ್ರಕಟಿಸಿದ ಕೈಫಿ ಆಜ್ಮಿ ಕವಿತೆಗಳು ಪುಸ್ತಕ ಊರಲ್ಲಿರುವ ಕಾರಣ ಮತ್ತೆ ಅಂತರ್ಜಾಲ ತಡಕಾಡಿ ಅವಧಿ ಪ್ರಕಟಿಸಿದ್ದ ವಿಭಾ ಅನುವಾದಿಸಿದ್ದ ಅದೇ ಕವಿತೆ ಸಿಕ್ಕಿತು. ಮತ್ತಷ್ಟೇ ಹುರುಪಿನಿಂದ ಕಾಂ.ವಿಜಯಕುಮಾರರ ಅನುವಾದವನ್ನೂ ವಿಭಾ ಅನುವಾದವನ್ನೂ ಪರಿಶೀಲಿಸುತ್ತಿರುವಾಗ ಇದ್ದಕ್ಕಿದ್ದಂತೆ ರಾಷ್ಟ್ರಕವಿ ಸಮನ್ವಯ ಕವಿ ಡಾ.ಜಿ.ಎಸ್.ಎಸ್ ಅವರ "ಸ್ತ್ರೀ" ಕವಿತೆ ನೆನಪಾಯಿತು. ಕಮ್ಯುನಿಸ್ಟ್ ಸಿದ್ಧಾಂತದ ಕಿಚ್ಚಿಗೂ ನವೋದಯದ ಬೆರಗಿಗೂ ಇರುವ ಗಾಢ ವ್ಯತ್ಯಾಸವನ್ನು ನೆನೆಯುತ್ತಲೇ ಜಿ.ಎಸ್.ಎಸ್.ಅವರ ಪದ್ಯ ಮತ್ತು ಕೈಫಿ ಆಜ್ಮಿಯವರ ಅನುವಾದಿತ ಪದ್ಯಗಳ ಸಂಪೂರ್ಣ ಪಾಠ ನಿಮ್ಮ ಓದಿಗಾಗಿ;
ಸ್ತ್ರೀ - ಡಾ.ಜಿ.ಎಸ್.ಎಸ್.
ಆಕಾಶದ ನೀಲಿಯಲ್ಲಿ
ಚಂದ್ರ-ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ-
ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ-
ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿಗಿಲಕಿ ಹಿಡಿಸಿದಾಕೆ-
ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ-ಮಗುವ ತಬ್ಬಿದಾಕೆ-
ನಿನಗೆ ಬೇರೆ ಹೆಸರು ಬೇಕೆ
ಸ್ರೀ ಎಂದರೆ ಅಷ್ಟೆ ಸಾಕೆ ?
(ತೆರೆದ ದಾರಿ: 1966)
##############################
ಸ್ತ್ರೀ
ಮೂಲ- ಕೈಫೀ ಆಜ್ಮಿ      ಕನ್ನಡಕ್ಕೆ- ವಿಭಾ ತಿರಕಪಡಿ
ಬಯಲ ಹೃದಯದಲ್ಲಿ ಕ್ರಾಂತಿಯ ಕಿಡಿಗಳಿವೆ ಇಂದು
ಬದುಕು – ಸಮಯದ ಬಣ್ಣ ಎರಡೂ ಒಂದೇ ಇಂದು
ಸಾರಾಯಿಯ ಸೀಸೆಗಳಲ್ಲಿ ಬಯಕೆಗಳು ಕಲ್ಲಾಗಿವೆ ಇಂದು
ಸೌಂದರ್ಯ – ಪ್ರೀತಿಗಳಿಗೆ ಒಂದೇ ಸ್ವರ – ಒಂದೇ ಲಯಗಳಿಂದು
ನಾನು ಉರಿಯುತ್ತಿರುವ ಬೆಂಕಿಯಲ್ಲಿ ನೀನೂ ಉರಿಯಬೇಕಿದೆ ಇಂದು.
ಏಳು ಗೆಳತಿ, ಜೊತೆಯಲ್ಲಿಯೇ ಮುಂದೆ ಸಾಗು
ಬದುಕಿಂದು ಯುದ್ಧದಲ್ಲಿದೆ ಹೊರತು ಸಹನೆಯ ವಶದಲ್ಲಲ್ಲ.
ಸ್ವತಂತ್ರ ಹಾರಾಟದಲ್ಲಿದೆ ಪರಿಮಳ, ಗುಂಗುರು ಕೂದಲಲ್ಲಲ್ಲ
ಇನ್ನೊಂದು ಸ್ವರ್ಗವೂ ಇದೆ ಬರೀ ಪುರುಷನ ಬಾಹುಗಳಲ್ಲಲ್ಲ
ಅದರ ಮುಕ್ತ ಲಯದೊಂದಿಗೆ ನೀ ಕುಣಿಯಬೇಕಿದೆ ಖುಷಿಯಲ್ಲಿ
ಎದ್ದೇಳು ಗೆಲತಿ ನನ್ನ ಜೊತೆಜೊತೆಗೆ ಹೆಜ್ಜೆ ಹಾಕು.
ಮೂಲೆ-ಮೂಲೆಗೂ ಉರಿಯುತ್ತಿವೆ ಚಿತೆಗಳು ನಿನಗಾಗಿ
ಕರ್ತವ್ಯದ ತನ್ನ ವೇಷ ಬದಲಿಸುತ್ತಿದೆ ಸಾವು ನಿನಗಾಗಿ
ಪ್ರತಿ ನಾಜೂಕು ನಡೆಯೂ ವಿನಾಶಕ್ಕೆ ಆಹ್ವಾನ ನಿನಗಾಗಿ
ಜಗತ್ತಿನ ಗಾಳಿ ಬರೀ ವಿಷವೇ ಆಗಿದೆ ನಿನಗಾಗಿ
ಋತುಗಳನ್ನೇ ಬದಲಿಸಿಬಿಡು ನೀ ಅರಳಬೇಕೆಂದರೆ
ಎದ್ದೇಳು ಗೆಳತಿ – ನನ್ನ ಜೊತೆಜೊತೆಗೆ ಹೆಜ್ಜೆ ಹಾಕು.
ಇತಿಹಾಸ ನಿನಗಿನ್ನೂ ಗೌರವಿಸುವುದ ಕಲಿತಿಲ್ಲ
ಉರಿವ ಕಿಡಿಗಳೂ ಇವೆ ನಿನ್ನಲ್ಲಿ ಬರೀ ಕಣ್ಣೀರಲ್ಲ
ನೀನು ಮನರಂಜಿಸುವ ಕತೆಯಲ್ಲ – ವಾಸ್ತವ ಕೂಡಾ ಹೌದು
ನಿನ್ನ ಅಸ್ತಿತ್ವಕ್ಕೊಂದು ಬೆಲೆಯಿದೆ ಬರೀ ತಾರುಣ್ಯಕ್ಕಲ್ಲ
ನಿನ್ನ ಇತಿಹಾಸದ ಶೀರ್ಷಿಕೆಯನ್ನು ಬದಲಿಸಬೇಕಿದೆ ನೀನಿಂದು.
ಎದ್ದೇಳು ಗೆಳತಿ – ನನ್ನ ಜೊತೆಜೊತೆಗೆ ಹೆಜ್ಜೆ ಹಾಕು
ಪದ್ಧತಿಗಳ ಬಂಧನ ಮುರಿದುಬಿಡು, ಸಂಪ್ರದಾಯದ ಜೇಲಿನಿಂದ ಪಾರಾಗು
ಸಂಪತ್ತಿನ ದೌರ್ಬಲ್ಯದಿಂದ ಹೊರ ಬಾ ಕೋಮಲತೆಯ ಭ್ರಮೆ ಬಿಡು
ನೀನೇ ಸೃಷ್ಟಿಸಿಕೊಂಡ ವ್ರತ-ನಿಷ್ಠೆಗಳ ಮಹೋನ್ನತಿಯ ಭ್ರಮೆಯಿಂದ ಹೊರಬಾ
ಪ್ರೀತಿಯೂ ಒಂದು ಬಂಧನ, ಈ ಬಂಧನದಿಂದ ಮುಕ್ತಳಾಗು
ಹಾದಿಯ ಮುಳ್ಳಷ್ಟೇ ಅಲ್ಲ – ಮೋಹ ಹುಟ್ಟಿಸುವ ಹೂಗಳನ್ನೂ ಕೊಚ್ಚಿ ಹಾಕಬೇಕಿದೆ ನೀನು
ಎದ್ದೇಳು ಗೆಳತಿ – ನನ್ನ ಜೊತೆಜೊತೆಗೆ ಹೆಜ್ಜೆ ಹಾಕು.
ಸಂದೇಹಗಳ ತೊರೆ, ಸರಿ ತಪ್ಪುಗಳ ದ್ವಂದ್ವದಿಂದ ಪಾರಾಗು
ನಿನಗೆ ಬಂಧನವಾಗುವ ಪ್ರಮಾಣ – ಭಾಷೆಗಳ ದಾಟಿ ಬಾ
ಈ ಮುತ್ತು ರತ್ನಗಳದೂ ಒಂದು ದಾಸ್ಯ – ಈ ಕೊರಳಹಾರವನ್ನು ಹರಿದುಬಿಡು
ಪುರುಷರಚಿತ ಮಾನದಂಡಗಳನು ಮುರಿದುಹಾಕು
ಬಿರುಗಾಳಿಯಾಗಿ ನೀ ಆರ್ಭಟಿಸಬೇಕು, ಕುದಿಯಬೇಕು.
ಎದ್ದೇಳು ಗೆಳತಿ – ನನ್ನ ಜೊತೆಜೊತೆಗೆ ಹೆಜ್ಜೆ ಹಾಕು.

ನೀನೇ ಅರಿಸ್ಟಟಲನ ತತ್ವಜ್ಞಾನ, ನೀನು ಸೌಂದರ್ಯದ ನಿದರ್ಶನ
ಆಕಾಶ ನಿನ್ನ ಮುಷ್ಠಿಯಲ್ಲಿದೆ- ಈ ಭುವಿ ನಿನ್ನ ಪದತಲದಲ್ಲಿ
ದೈವದ ಪಾದದಲ್ಲಿಟ್ಟಿರುವ ನಿನ್ನ ಹಣೆಯನ್ನು ಮೇಲೆತ್ತು
ನಾನೂ ನಿಲ್ಲುವವನಲ್ಲ, ಸಮಯ ಯಾರಿಗೂ ಕಾಯುವುದಿಲ್ಲ
ಎಲ್ಲಿಯವರೆಗೆ ಎಡವುತ್ತಿ, ನೀ ಗಟ್ಟಿ ಹೆಜ್ಜೆಯೂರು.
ಎದ್ದೇಳು ಗೆಳತಿ – ನನ್ನ ಜೊತೆಜೊತೆಗೆ ಹೆಜ್ಜೆ ಹಾಕು.
Share:

ಚಾರಿತ್ರಿಕ ಸತ್ಯ V/S  ಸಾಹಿತ್ಯಕ ಸತ್ಯ.

ಚಾರಿತ್ರಿಕ ಸತ್ಯ V/S  ಸಾಹಿತ್ಯಕ ಸತ್ಯ.
ಚರಿತ್ರೆ ಮತ್ತು ಸಾಹಿತ್ಯ ಪರಂಪರೆ ಯಾವತ್ತೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುವ ಸತ್ಯಗಳು. ಚರಿತ್ರೆಯನ್ನು ಆಳುವ ವರ್ಗ ಬರೆಯಿಸುವ ಪ್ರಯತ್ನದಲ್ಲಿದ್ದರೆ ಸಾಹಿತಿಯೊಬ್ಬ ಆಯಾ ಕಾಲದ ಸತ್ಯಗಳನ್ನು ತನಗೆ ಹೊಂದುವ ಮಾಧ್ಯಮದಲ್ಲಿ ಪ್ರಕಟಿಸುತ್ತಾ ಸಾಹಿತ್ಯಕ ಸತ್ಯವೊಂದನ್ನು ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನದಲ್ಲಿರುತ್ತಾನೆ. ಚರಿತ್ರಕಾರ ಅರಸೊತ್ತಿಗೆಯ ಅಥವ ಆಳುವವರ ಹಂಗಿನಲ್ಲಿರುವುದರಿಂದ ಸತ್ಯಕ್ಕಿಂತಲೂ ಮುಖ್ಯವಾಗಿ ಆಳುವವರನ್ನು ಸಂಪ್ರೀತಗೊಳಿಸುವ ಉದ್ದೇಶದಿಂದ ವಿಷಯಾಂತರ ಮಾಡುತ್ತಲೇ ವೈಭವೀಕರಿಸಿದ ಸಂಗತಿಗಳಿಂದ ಇತಿಹಾಸದ ಪುಟಗಳನ್ನು ತುಂಬಿಸುತ್ತಿರುತ್ತಾನೆ. ಆದರೆ ನಿಷ್ಠಾವಂತ ಸಾಹಿತಿ ಮಾತ್ರ ಇದ್ದುದನ್ನು ಇದ್ದಂತೆಯೇ ವರ್ತಮಾನದ ಸತ್ಯವನ್ನು ಭವಿಷ್ಯದ ಉಪಯೋಗಕ್ಕಾಗಿ ದಾಖಲಿಸುವುದರಲ್ಲಿ ಮಗ್ನನಾಗಿರುತ್ತಾನೆ.
ಈ ಮಾತನ್ನು ಸಮರ್ಥಿಸಲು ಕೆಲವೊಂದು ಉದಾಹರಣೆಗಳನ್ನೀಗ ನೋಡೋಣ. ವಿಜಯನಗರದ ಅರಸರ ಕಾಲವೆಂದರೆ ಇತಿಹಾಸದ ಪ್ರಕಾರ ಭಾರೀ ವೈಭವದ ಸತ್ಯ ನ್ಯಾಯ ಮತ್ತು ಸಂಪಧ್ಭರಿತ ಕಾಲ. ಸರಿ ಸುಮಾರು ಇದೇ ಅವಧಿಯಲ್ಲಿ ಅಂದರೆ ೧೫ನೇ ಶತಮಾನದ ಅಂತ್ಯದಲ್ಲೇ ದಾಸ ಸಾಹಿತ್ಯ ಮುಂಚೂಣಿಯಲ್ಲಿದ್ದ ಕಾಲದಲ್ಲೇ ದಾಸ ಶ್ರೇಷ್ಠ ಪುರಂದರ ದಾಸರ ರಚನೆಯೊಂದು  "ಸತ್ಯವಂತರಿಗಿದು ಕಾಲವಲ್ಲ , ದುಷ್ಟ ಜನರಿಗಿದು ಸುಭಿಕ್ಷ ಕಾಲ" ಎಂದು ಆ ಕಾಲವನ್ನು ಬಣ್ಣಿಸುತ್ತದೆ. ನಮ್ಮ ಜನಪದರಂತೂ ರಾಮ ರಾಜ್ಯವಾಳಿದರೂ ರಾಗಿ ಬೀಸೋದು ತಪ್ಪುವುದಿಲ್ಲ ಎಂಬ ಅಪ್ಪಟ ಸತ್ಯವನ್ನು ನಂಬಿದವರು. ಹಾಗಾಗಿಯೇ ಸದ್ಯ ನಾವೆಲ್ಲರೂ ಮೇಲಿಂದ ಮೇಲೆ ಚರ್ಚಿಸುತ್ತಿರುವ ಟಿಪ್ಪು ಮತ್ತು ಭಗತ್ ಸಿಂಗರನ್ನು ಚರಿತ್ರೆ ಹೇಳಿದ ಸತ್ಯದಲ್ಲಿ ಅಳೆಯಬೇಕೋ ಅಥವ ಆ ಕಾಲದ ಸಾಹಿತ್ಯದಲ್ಲಿ ಒಡಮೂಡಿರುವ ಬೆಳಕಲ್ಲಿ ಅರಿಯಬೇಕೋ? ಸದ್ಯ ನಮ್ಮ ಮುಂದೆ ಹಲವು ಚರಿತ್ರೆಗಳಿವೆ. ಈಗಾಗಲೇ ಚರ್ಚಿಸಿದಂತೆ ಆಯಾ ಕಾಲದ ಚರಿತ್ರಕಾರರು ತಮಗೆ ಅನುಕೂಲ ಕಂಡ ಹಾಗೆ ಇತಿಹಾಸವನ್ನು ನಿರ್ಮಿಸಿರುವ ಕಾರಣ ಆಯಾ ಪಂಥ ಬದ್ಧತೆ ಮತ್ತು ಪ್ರಾಂತ್ಯಬದ್ಧಗಳಾಚೆಗೆ ಇವನ್ನು ನಂಬುವುದು ಅಥವ ಬಿಡುವುದು ಜನಮಾನಸಕ್ಕೆ ಬಿಟ್ಟ ಸಂಗತಿಗಳಾಗಿವೆ.
ಸ್ವಾತಂತ್ರೋತ್ತರ ಭಾರತದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕುರಿತಂತೆಯೇ ಹಲವು ಸತ್ಯಗಳು ನಮ್ಮಮುಂದಿವೆ. ಬ್ರಿಟಿಷರಿಂದ ಭಾರತವನ್ನು ಬಿಡಿಸಿಕೊಟ್ಟ ಮಹಾತ್ಮರ ಆತ್ಮ ಚರಿತ್ರೆಗೂ ಅವರ ಬದುಕಿನ ಮುಖ್ಯ ಘಟ್ಟಗಳನ್ನು ಕುರಿತಂತೆ ಇರುವ ಗಾಂಧಿ ವರ್ಸೆಸ್ ಗಾಂಧಿ ನಾಟಕದ ವಸ್ತುವಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ೧೯೭೫ರಿಂದ ೧೯೭೭ರವರೆಗಿನ ತುರ್ತುಪರಿಸ್ಥಿತಿಯ ಕಾಲವನ್ನು ಕುರಿತೂ ಹಲವು ಜಿಜ್ಞಾಸೆಗಳಿವೆ. ಇಂದಿರಾ ಅಂದರೆ ಇಂಡಿಯಾ ಇಂಡಿಯಾ ಅಂದರೆ ಇಂದಿರಾ ಅಂದ ಭಟ್ಟಂಗಿಗಳ ಹಾಗೆಯೇ ಆಕೆಯನ್ನು ದುರ್ಗೆಯೆಂದು ಚಿತ್ರಿಸಿದ ಕಲಾವಿದರೂ ಇದ್ದಾರೆ. ಅದುವರೆಗೂ ಭಾರತವನ್ನಾಳಿದ ಕಾಂಗ್ರೆಸ್ಸನ್ನು ಧೂಳೀಪಟ ಮಾಡಿದ ಕೀರ್ತಿ ಈ ತುರ್ತುಪರಿಸ್ಥಿತಿಯದೇ ಕೊಡುಗೆ ಅನ್ನುವದರಲ್ಲಿ ಯಾವ ಅನುಮಾನಗಳೂ ಇಲ್ಲದಿರುವಾಗ ಹೊಗಳುಭಟರ ಕಲಾವಿದರ ಅನ್ನಿಸಿಕೆಗಳು ವೈಯುಕ್ತಿಕ ಮಟ್ಟದವೋ ಇತಿಹಾಸಕ್ಕೆ ಸಂದ ಸತ್ಯಗಳೋ ಎನ್ನುವುದನ್ನು ಪರಿಶೀಲಿಸಬೇಕು.
ಇನ್ನು ಚರಿತ್ರೆಯ ಅಂಶವೊಂದನ್ನುಹಿನ್ನೆಲೆಯನ್ನಾಗಿ ಇಟ್ಟುಕೊಂಡು ರಚಿತವಾಗುವ ಸಾಹಿತ್ಯಕ ಕೃತಿಗಳು ಸಮಾಜದ ಮೇಲೆ ಬೀರುವ ಪರಿಣಾಮಗಳು ಯಾವತ್ತೂ ಅಪಾರವಾಗಿರುತ್ತವೆ. ಬಸವಣ್ಣನವರ ಕಲ್ಯಾಣ ಕ್ರಾಂತಿಯ ವಸ್ತುವನ್ನು ಹೊಂದಿದ್ದ ಲಂಕೇಶರ ಸಂಕ್ರಾಂತಿ, ಕಾರ್ನಾಡರ ತುಘಲಕ್ ಮತ್ತು ತಲೆದಂಡ, ಬೈರಪ್ಪನವರ ಆವರಣ ಮುಂತಾದವು ಇತಿಹಾಸವನ್ನು ವರ್ತಮಾನದ ಕಣ್ಣಲ್ಲಿ ಕಂಡ ಅಪರೂಪದ ಪ್ರಯೋಗಗಳು. ಇನ್ನು ಪುರಾಣ ರಾಮಾಯಣ ಮಹಾಭಾರತಗಳಂತೂ ಆಧುನಿಕ ಮನೋಭೂಮಿಕೆಯ ಮೇಲೆ ಇನ್ನಿಲ್ಲದ ಪರಿಣಾಮ ಬೀರುತ್ತಿರುವ ಕಾರಣ ಇಂದಿಗೂ ಆ ಮಹಾಕಾವ್ಯಗಳು ಹೊಸ ಹೊಸ ರೀತಿಯಲ್ಲಿ ಅನಾವರಣಗೊಳ್ಳುತ್ತಲೇ ಇವೆ.
ಮಹಾಭಾರತವನ್ನು ಪುನರ್ ರಚಿಸಿದ ಪರ್ವ,(ಬೈರಪ್ಪ) ಪುರಾಣ ಪ್ರಸಂಗವೊಂದನ್ನು ಆಧುನಿಕ ಜಿಜ್ಞಾಸೆಗೆ ದೂಡಿದ ಯಯಾತಿ, (ಕಾರ್ನಾಡ್) ಪರಮಾತ್ಮನನ್ನೇ ಪ್ರಶ್ನಿಸಿದ ಜಲಗಾರ (ಕುವೆಂಪು) ಹುಡುಕುತ್ತಾ ಹೋದರೆ ಇತಿಹಾಸವನ್ನು ಪ್ರಶ್ನಿಸಿದ  ಹಲವು ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಒಡಮೂಡಿರುವುದನ್ನು ಕಾಣಬಹುದು. ಇನ್ನು ಬ್ರಿಟಿಷ್ ಆಡಳಿತ ಕಟ್ಟಿಕೊಟ್ಟ ಮೆಕಾಲೆ ಪ್ರಣೀತ ನಮ್ಮ ವಿದ್ಯಾಭ್ಯಾಸದ ಕ್ರಮ ಸಮಷ್ಟಿಯ ಸುಖಕ್ಕಿಂತಲೂ ವೈಯುಕ್ತಿಕ ಲಾಭದ ಮೇಲೇ ದೃಷ್ಟಿ ಇಟ್ಟುಕೊಂಡಿರುವ ಕಾರಣ ವರ್ಗಾಧಾರಿತ ವರ್ಣಾಶ್ರಮ ಧರ್ಮವನ್ನು ಜಾತಿ ಸೂಚಕವನ್ನಾಗಿ ಬದಲಿಸಿತು. ಭಾರತವಷ್ಟೇ ಅಲ್ಲದೆ ಜಾಗತಿಕ ಸಾಹಿತ್ಯದ ಮೇರು ಕೃತಿಗಳಾದ ವೇದಗಳನ್ನು ಸ್ಮೃತಿಗಳನ್ನು ವಿವಿಧ ನ್ಯಾಯಗಳನ್ನು
ಅಲ್ಲಗಳೆದು ಅವೆಲ್ಲವನ್ನೂ ಸಂಕುಚಿತ ಮನೋಸ್ಥಿತಿಯಿಂದ ನೋಡುವಂತೆ ಮಾಡಿದ್ದೂ ಆಧುನಿಕ ವಿದ್ಯಾಭ್ಯಾಸದ ಕ್ರಮವೇ!
ಚರಿತ್ರೆಯು ಬರೆಸಲ್ಪಡುವ ಸರಕಾದರೆ ಸಾಹಿತ್ಯವು‌ ಸಮುದಾಯವೊಂದು ಕಣ್ಣಾರೆ ಕಂಡು ದಾಖಲಿಸಿದ ಅಪ್ಪಟ ಸಾಕ್ಷಿಯಾಗಿದೆ. ಹಾಗಾಗಿಯೇ ಚರಿತ್ರಕಾರರು ಸೃಷ್ಟಿಸುವ ಸುಳ್ಳಿಗಿಂತಲೂ ಸಾಹಿತ್ಯವು ಸೃಷ್ಟಿಸುವ ಸತ್ಯಗಳು ಜನಮಾನಸದಲ್ಲಿ‌ ಚಿರಕಾಲ ನಿಲ್ಲುತ್ತವೆ ಮತ್ತು ಚಿಂತನೆಗೆ ಹಚ್ಚುತ್ತವೆ.
Share:

ಶುಕ್ರವಾರ, ಮಾರ್ಚ್ 17, 2017

ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭ

 ಅರಸೀಕೆರೆ : ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭ


ಅರಸೀಕೆರೆ ನಗರ ಹಾಗೂ ಗ್ರಾಮಾತರ ವೃತ್ತದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪದೋನ್ನತಿ ಹೊಂದಿದ ಪೊಲೀಸ್ ಸಿಬ್ಬಂದಿಗಳಿಗೆ ಇಂದು ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ  ಅರಸೀಕೆರೆ ಪೊಲೀಸ್ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ. ಧಶರಥ ಮೂರ್ತಿ ರವರು, ಪೊಲೀಸ್ ಮುಖ್ಯಪೇದೆಯಿಂದ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿದವರಿಗೆ ಶಾಲು ಹೊದಿಸಿ ಸನ್ಮಾನಿಸಿದರು ಹಾಗೂ ಪೇದೆಯಿಂದ ಮುಖ್ಯಪೇದೆಯಾಗಿ ಪದೋನ್ನತಿ ಹೊಂದಿದವರ ಬಲಭುಜಕ್ಕೆ ಚೌರಿನ್ (ಮೂರು ಪಟ್ಟಿ ಉಳ್ಳ ಚಿನ್ಹೆ) ಅಳವಡಿಸಿ ಅಭಿನಂದಿಸಿದರು.

ಅರಸೀಕೆರೆ ನಗರ ಠಾಣೆ ಇನ್ಸ್ಪೆಕ್ಟರ್ ಶ್ರೀ.ನಿರಂಜನ್ ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ. ಸಿದ್ದರಾಮೇಶ್ವರ, ಸಬ್ ಇನ್ಪೆಕ್ಟರ್ ಗಳಾದ ಶ್ರೀ. ಗಂಗಾಧರನಾಯಕ್, ಪುರುಷೋತ್ತಮ್, ನಟರಾಜ್ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. (ಚಿತ್ರಗಳು : ಪೊಲೀಸ್ ಇಲಾಖೆ)
Share:

ಮುಂಜಾನೆ ಮಂಜಲ್ಲಿ... ಅರಸೀಕೆರೆ

ಅರಸೀಕೆರೆ ಪಟ್ಟಣದಲ್ಲಿ ಇಂದು ಮುಂಜಾನೆ ಮಂಜುಕವಿದ ವಾತಾವರಣವಿತ್ತು.

Share:

ಮಂಗಳವಾರ, ಮಾರ್ಚ್ 14, 2017

ಬಾಹುಬಲಿ ಮಹಾಮಸ್ತಕಾಭಿಷೇಕ 2018ರ ಲಾಂಛನ ಬಿಡುಗಡೆ

ಶ್ರವಣಬೆಳಗೊಳದಲ್ಲಿಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಎ.ಮಂಜು ರವರು 2018ನೇ ಇಸವಿಯಲ್ಲಿ ನಡೆಯಲಿರುವ ಭಗವಾನ್ ಬಾಹುಬಲಿ ಮಹಾಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿದರು.  ಶಾಸಕರಾದ ಬಾಲಕೃಷ್ಣ, ಗೋಪಾಲಕೃಷ್ಣ, ಜಿಲ್ಲಾಧಿಕಾರಿ ವಿ.ಚೈತ್ರ, ಎಸ್.ಪಿ. ರಾಹುಲ್ ಕುಮಾರ್ ಶಹಪೂರ್ವಾಡ್ ಹಾಗೂ ಇತರರು ಉಪಸ್ಥಿತರಿದ್ದರು.

2018 ರ ಮಸ್ತಕಾಭಿಷೇಕದ ಲಾಂಛನದ ಬಗ್ಗೆ :-
ಕ್ರಿಸ್ತಶಕ 981 ರಲ್ಲಿ ತಲಕಾಡಿನ ಗಂಗರ ಮಹಾ ಪ್ರಧಾನಿ, ದಂಡನಾಯಕ ಚಾವುಂಡರಾಯನು ತನ್ನ ತಾಯಿ ಕಾಳಲಾದೇವಿಯ ಇಚ್ಛೆಯನ್ನು ಪೂರೈಸಲು 58 ಅಡಿ ಎತ್ತರದ ಭಗವಾನ್ ಶ್ರೀ ಬಾಹುಬಲಿಯ ಬೃಹತ್ ಏಕಶಿಲಾ ಮೂರ್ತಿಯನ್ನು ನಿರ್ಮಾಣ ಮಾಡಿಸಿದನು.  ಮೂರ್ತಿ ಪ್ರತಿಷ್ಠಾಪನಾ ಮಹಾಮಸ್ತಕಾಭಿಷೇಕವು ಚಾವುಂಡರಾಯನಿಂದ ಏರ್ಪಟ್ಟಿತು.  ಆ ಮೂರ್ತಿಗೆ ಎಷ್ಟು ಹಾಲಿನ ಅಭಿಷೇಕ ಮಾಡಿದರೂ 1008 ಕಲಶಗಳ ನೀರು, ಹಾಲು, ಗಂಧ ಇತ್ಯಾದಿಗಳು ಮೂರ್ತಿಯ ಎದೆಯ ಭಾಗದಿಂದ ಕೆಳಕ್ಕೆ ಹರಿಯಲಿಲ್ಲವೆಂದು, ಅಭಿಷೇಕ ಅಪೂರ್ಣವಾಯಿತೆಂದು ಹೇಳಲಾಗುತ್ತದೆ.  ಇದಕ್ಕೆ ಕಾರಣವನ್ನು ಇಂತಹ ಸೌದರ್ಯದ, ಔನತ್ಯದ, ಅತಿಶಯದ ಮೂರ್ತಿಯನ್ನು “ನಾನು” ಮಾಡಿಸಿದೆ ಎಂಬ ಚಾವುಂಡರಾಯನ ಅಹಂಕಾರ ಕಾರಣವೆಂದು ಹೇಳಲಾಗುತ್ತದೆ.

ಅಭಿಷೇಕ ಅಪೂರ್ಣವಾಯಿತೆಂದು ಚಾವುಂಡರಾಯನು ಪರಿತಪಿಸುತ್ತಿದ್ದಾಗ, ಕ್ಷೇತ್ರದ ಅಧಿದೇವತೆ ಶ್ರೀ ಕೂಷ್ಮಾಂಡಿನಿ ದೇವಿಯು “ಅಜ್ಜಿ”ಯ ರೂಪದಲ್ಲಿ ಆಗಮಿಸಿ ತಾನು “ಗುಳ್ಳದಕಾಯಿ”ಯಷ್ಟು ಗಾತ್ರದ ಚಿಕ್ಕದಾದ ಬೆಳ್ಳಿಯ ಕಲಶದಲ್ಲಿ ತಂದಿದ್ದ ಹಾಲನ್ನು ಅಭಿಷೇಕ ಮಾಡಲು ಕೇಳಿದಳೆಂದೂ, ಚಾವುಂಡರಾಯನು ಅಭಿಷೇಕಕ್ಕೆ ಅನುಮತಿ ನೀಡಿದ ಕಾರಣ, ಅಜ್ಜಿಯು ಅಭಿಷೇಕ ಮಾಡಿದಾಗ ಹಾಲು ಅಕ್ಷಯವಾಗಿ ಧಾರೆಯಾಗಿ ಹರಿಯಿತೆಂದು, ಅಭಿಷೇಕ ಪೂರ್ಣವಾಗುವುದರ ಜೊತೆಗೆ ಇಡೀ ಬೆಟ್ಟದಿಂದ ಹಾಲು ಧಾರಾಕಾರವಾಗಿ ಹರಿದು ಎರಡು ಬೆಟ್ಟಗಳ ಮಧ್ಯೆ ಇರುವ ಕೊಳಕ್ಕೆ ಹರಿದು “ಬಿಳಿ ಕೊಳ”ವಾಯಿತೆಂದು ಹೇಳಲಾಗುತ್ತದೆ.  ಮುಂದೆ ಈ ಕೊಳವೇ ಊರಿಗೆ “ಬೆಳ್ಗೊಳ” ಎಂದು ಹೆಸರು ಬರಲು ಕಾರಣವಾಯಿತೆಂದು ಸ್ಥಳ ಪುರಾಣ ತಿಳಿಸುತ್ತದೆ.

ಭಕ್ತಿಯ ಪ್ರತೀಕವಾದ ಗುಳ್ಳಕಾಯಜ್ಜಿಯ ಅಭಿಷೇಕದ ದೃಶ್ಯವನ್ನು ಈಬಾರಿ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ 2018ರ ಲಾಂಛನವಾಗಿ ಶ್ರವಣಬೆಳಗೊಳ ಶ್ರೀಗಳ ಅಪೇಕ್ಷೆಯಂತೆ ನಿರ್ಣಯ ಮಾಡಲಾಗಿದೆ. 90 ರ ದಶಕದಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ತಮಿಳುನಾಡಿನ “ಮದರಾಸ್ ಮೇಲ್” ಸಂಜೆ ದಿನಪತ್ರಿಕೆಯು ಕಾರ್ಯಕ್ರಮದ ವರದಿಯನ್ನು ಪಾರಿವಾಳಗಳ ಮೂಲಕ ಶ್ರವಣಬೆಳಗೊಳದಿಂದ ಮದ್ರಾಸಿಗೆ ತರಿಸಿಕೊಂಡು, ಮರುದಿನವೇ ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಈ ಘಟನೆಯನ್ನು ಲಾಂಛನದಲ್ಲಿರುವ ಪಾರಿವಾಳ ಸೂಚಿಸುತ್ತದೆ.  ಚಕ್ರವರ್ತಿಯನ್ನು ಗೆದ್ದ ಸಂಕೇತವಾಗಿ ಚಕ್ರವು ಉಲ್ಲೇಖವಾಗಿದೆ.

ಬಾಹುಬಲಿ ಮೂರ್ತಿಯು ವಿಶ್ವದಲ್ಲಿಯೇ ಅತ್ಯಂತ ಎತ್ತರವಾದ ಏಕಶಿಲಾ ಮೂರ್ತಿಯಾಗಿದ್ದು, ಈ ಲಾಂಛನದಲ್ಲಿ ಕಲಶಗಳ ಮೇಲೆ ಜಗತ್ತಿನ ಆರು ಖಂಡಗಳ ನಕ್ಷೆ ಮತ್ತು ಭಾರತ, ಕರ್ನಾಟಕ ರಾಜ್ಯ ಮತ್ತು ಹಾಸನ ಜಿಲ್ಲೆಗಳ ನಕ್ಷೆಯನ್ನು ಅಳವಡಿಸಲಾಗಿದೆ.

(ಚಿತ್ರ ಹಾಗೂ ಮಾಹಿತಿ : ವಾರ್ತಾಭವನ, ಹಾಸನ)


Share:

ಭಾನುವಾರ, ಮಾರ್ಚ್ 12, 2017

ಅರಸೀಕೆರೆ ಕೋಡಿಹಳ್ಳಿಬಳಿ ರಸ್ತೆ ಅಪಘಾತ

ಅರಸೀಕೆರೆ ಪಟ್ಟಣದ ಹೊರವಲಯದಲ್ಲಿರುವ ಕೋಡಿಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಭಾನುವಾರ ಸಂಜೆ 4.15 ರ ಸಮಯದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಮಾರುತಿ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ನಡೆದಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದ ಕುಣಿಗಲ್ ಡಿಪೋ ಬಸ್ಸು ಮತ್ತು ತಿಪಟೂರು ಕಡೆಯಿಂದ ಅರಸೀಕೆರೆಗೆ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ.

ತುಮಕೂರು ಜಿಲ್ಲೆ ಕಿಬ್ಬನಹಳ್ಳಿಕ್ರಾಸ್ ಬಳಿಯ ಬಿಳಿಗೆರೆ ವಾಸಿಯಾದ ಬಸವರಾಜ (50 ವರ್ಷ) ಮೃತಪಟ್ಟವರು. ಇವರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಿವಣ್ಣ (50 ವರ್ಷ) ಮತ್ತು ಲಿಂಗರಾಜು (35 ವರ್ಷ) ಇವರುಗಳಿಗೆ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕಳಿಸಿಕೊಡಲಾಗಿದೆ. ಇವರಪೈಕಿ ಶಿವಣ್ಣನವರ ಪರಿಸ್ಥಿತಿ ಗಂಭೀರವಾಗಿದೆ.

ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share:

ಅರಸೀಕೆರೆಯಲ್ಲಿ ಹೋಳಿ ಹುಣ್ಣಿಮೆ

ಹೋಳಿ ಹುಣ್ಣಿಮೆ ಪ್ರಯಕ್ತ ಇಂದು ಬೆಳಿಗ್ಗೆ ಅರಸೀಕೆರೆ ಪಟ್ಟಣದ ಬಸವೇಶ್ವರ ನಗರದಲ್ಲಿ ಚಿಣ್ಣರು ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಸಂಭ್ರಮದಿಂದ ಆಚರಿಸಿದರು.
Share:

ಶನಿವಾರ, ಮಾರ್ಚ್ 11, 2017

ಶುಕ್ರವಾರ, ಮಾರ್ಚ್ 10, 2017

ಅರಸೀಕೆರೆಯಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ

ಅರಸೀಕೆರೆ ನಗರಸಭೆ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಇಲಾಖೆಯ ಎಸ್.ಸಿ.ಪಿ ಯೋಜನೆಯಡಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದರು, ನಗರಸಭಾ ಅಧ್ಯಕ್ಷ ಸಮಿಉಲ್ಲಾ, ಉಪಾಧ್ಯಕ್ಷ ಪಾರ್ಥಸಾರಥಿ, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಸದಸ್ಯರಾದ ಗೀತಾ, ನಾಮನಿರ್ದೇಶಿತ ಸದಸ್ಯ ಉಮಾಶಂಕರ್ ಇತರರು ಹಾಜರಿದ್ದರು.
1. ಈಡಿಗರ ಕಾಲೋನಿ-4.5 ಲಕ್ಷ.
2. ಬಿ.ಜಿ.ಹಟ್ಟಿ- 6.7ಲಕ್ಷ.
3. ಸುಭಾಷ ನಗರ17.75 ಲಕ್ಷ
4. ಅರಸೀಕೆರೆ ನಗರದ ಇಂದಿರಾನಗರಕ್ಕೆ 25ಲಕ್ಷ ಮತ್ತು ಬಾಬಾ ಸಾಬ್ ಕಾಲೋನಿಗೆ 25 ಲಕ್ಷ ವೆಚ್ಚದಲ್ಲಿ ಕೋಳಗೇರಿ ಮಂಡಳಿಯ ಮೂಲಭೂತ ಸೌಕರ್ಯವಾದ ಕಾಂಕ್ರೀಟು ರಸ್ತೆ ಮತ್ತು ಚರಂಡಿ ನಿರ್ಮಾಣ

Share:

ಗುರುವಾರ, ಮಾರ್ಚ್ 9, 2017

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ

ವಿದ್ಯಾರ್ಥಿ ಜೀವನದ ಎರಡನೇ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆಗಳು ಇಂದಿನಿಂದ ಪ್ರಾರಂಭಗೊಂಡಿತು.  ಅರಸೀಕೆರೆ ಪಟ್ಟಣದಲ್ಲಿ 5 ಹಾಗೂ ಜಾವಗಲ್ ಗ್ರಾಮದಲ್ಲಿ ಒಂದು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಇಂದು ಪರೀಕ್ಷೆಯನ್ನು ಬರೆದರು. ಈ ಶೈಕ್ಷಣಿಕ ವರ್ಷದಲ್ಲಿ ಅರಸೀಕೆರೆ ತಾಲ್ಲೂಕಿನ ಒಟ್ಟು 2656 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಎದುರಿಸಲಿದ್ದಾರೆ.

ಕಳೆದ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಉಂಟಾದ ರಾದ್ಧಾಂತಗಳನ್ನು ಗಣನೆಗೆ ತೆಗೆದುಕೊಂಡು, ಈ ವರ್ಷ ಪರೀಕ್ಷಾ ಕೇಂದ್ರಗಳಲ್ಲಿ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದಾರೆ.  ಎಲ್ಲ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದಾರೆ.

ಚಿತ್ರ : ಅರಸೀಕೆರೆ ಪಟ್ಟಣದ ಕೋಡಿಮಠ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.Share:

ಅಪರಿಚಿತ ವಾಹನಕ್ಕೆ ಬಲಿಯಾದ ಜಿಂಕೆ

ಅರಸೀಕೆರೆ ತಾಲ್ಲೂಕಿನ ಜಾಜೂರು ಸಸ್ಯಕ್ಷೇತ್ರದ ಬಳಿ ಗುರುವಾರ ಮುಂಜಾನೆ ಮೇವು ಅರಸುತ್ತಾ ಬಂದಿದ್ದ ಜಿಂಕೆಯೊಂದು ರಾಷ್ಟ್ರೀಯ ಹೆದ್ದಾರಿ 206ನ್ನು ದಾಟುತ್ತಿದ್ದವೇಳೆ ಅಪರಿಚಿತ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿತ್ತು.  ರಸ್ತೆಬದಿಯಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ಜಿಂಕೆಯನ್ನು ಕಂಡ ಸಮೀಪದ ಕೆಫೆ ಕಾಫಿ ಡೇ ಕಾರ್ಮಿಕರು ಆ ಜಿಂಕೆಗೆ ನೀರು ಕುಡಿಸಿ ಆರೈಕೆ ಮಾಡಿ, ತಕ್ಷಣವೇ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದರು.  ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆ ಮೃತಪಟ್ಟಿತ್ತು.  ಜಿಂಕೆಯ ಕಳೇಬರವನ್ನು ಜಾಜೂರು ಸಸ್ಯಕ್ಷೇತ್ರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಚಿತ್ರಕೃಪೆ : ಪೊಲೀಸ್ ಇಲಾಖೆ

Share:

ಅಂದು "ಸಂಗೊಳ್ಳಿ ರಾಯಣ್ಣ", ಇಂದು "ಹೆಬ್ಬುಲಿ"

ಸವಿಸವಿ ನೆನಪು.
ಅರಸೀಕೆರೆ ಸಾಧನಾ ಚಿತ್ರಮಂದಿರಲ್ಲಿ ಅಂದು-ಇಂದು.


Share:

ಬುಧವಾರ, ಮಾರ್ಚ್ 8, 2017

ಅರಸೀಕೆರೆಯಲ್ಲಿ ಕಿಚ್ಚ ಸುದೀಪ್

ಹೆಬ್ಬುಲಿ ಚಿತ್ರದ ಪ್ರಚಾರಕ್ಕಾಗಿ ಚಿತ್ರನಟ ಸುದೀಪ್ ರವರು ಇಂದು ಮಧ್ಯಾನ್ಹ ಅರಸೀಕೆರೆ ಪಟ್ಟಣಕ್ಕೆ ಆಗಮಿಸಿದ್ದರು.  ಪಟ್ಟಣದ ಸಾಧನಾ ಚಿತ್ರಮಂದಿರದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....