ಶನಿವಾರ, ಮಾರ್ಚ್ 18, 2017

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನೆವದಲ್ಲಿ


ಅಂತರಾಷ್ಟ್ರೀಯ ಮಹಿಳಾ ದಿನದ  ಸಂಜೆ ಅಚಾನಕ್ಕಾಗಿ ಸಿಕ್ಕ ಬಹುಕಾಲದ ಮಿತ್ರರೂ ಕಾರ್ಮಿಕ ಮುಖಂಡರೂ ಆದ ಕಾಂ.ವಿಜಯಕುಮಾರ್ ಕೈಫಿ ಆಜ್ಮಿಯವರ  "ಔರತ್" ಕವಿತೆಯ ಕಚ್ಚಾ ಅನುವಾದವೊಂದನ್ನು ಬಹಳ ಮುತುವರ್ಜಿಯಲ್ಲಿ ತುಂಬ ಗಂಭೀರವಾಗಿ ಓದಿದರು. ಸಹಜವಾಗಿ ಕಮ್ಯುನಿಸ್ಟ್ ಸಿದ್ಧಾಂತಗಳನ್ನೊಪ್ಪುವವರಿಗೆ ಖಂಡಿತ ಕೈಫಿ ಆಜ್ಮಿ ಇಷ್ಟವಾಗುತ್ತಾರೆ ಮತ್ತು ಇಷ್ಟವಾಗಲೇಬೇಕು. ಅವರ ಕಚ್ಚಾ ಅನುವಾದದ ಮತ್ತೊಂದು ಪ್ರತಿ ತೆಗೆದು ಈ ಸರಿರಾತ್ರಿಯಲ್ಲಿ ಮತ್ತೆ ಮತ್ತೆ ಓದುತ್ತಾ ಸುಖಿಸುತ್ತಿರುವಾಗ ತಟ್ಟನೆ ಈ ಕವಿತೆ "ಸ್ತ್ರೀ" ಶೀರ್ಷಿಕೆಯಲ್ಲಿ ದಿ.ವಿಭಾ ತಿರಕಪಡಿ ಅನುವಾದಿಸಿದ್ದು ನೆನಪಾಗಿ ಕಾಡಿತು. ಲಡಾಯಿ ಬಸೂ ಪ್ರಕಟಿಸಿದ ಕೈಫಿ ಆಜ್ಮಿ ಕವಿತೆಗಳು ಪುಸ್ತಕ ಊರಲ್ಲಿರುವ ಕಾರಣ ಮತ್ತೆ ಅಂತರ್ಜಾಲ ತಡಕಾಡಿ ಅವಧಿ ಪ್ರಕಟಿಸಿದ್ದ ವಿಭಾ ಅನುವಾದಿಸಿದ್ದ ಅದೇ ಕವಿತೆ ಸಿಕ್ಕಿತು. ಮತ್ತಷ್ಟೇ ಹುರುಪಿನಿಂದ ಕಾಂ.ವಿಜಯಕುಮಾರರ ಅನುವಾದವನ್ನೂ ವಿಭಾ ಅನುವಾದವನ್ನೂ ಪರಿಶೀಲಿಸುತ್ತಿರುವಾಗ ಇದ್ದಕ್ಕಿದ್ದಂತೆ ರಾಷ್ಟ್ರಕವಿ ಸಮನ್ವಯ ಕವಿ ಡಾ.ಜಿ.ಎಸ್.ಎಸ್ ಅವರ "ಸ್ತ್ರೀ" ಕವಿತೆ ನೆನಪಾಯಿತು. ಕಮ್ಯುನಿಸ್ಟ್ ಸಿದ್ಧಾಂತದ ಕಿಚ್ಚಿಗೂ ನವೋದಯದ ಬೆರಗಿಗೂ ಇರುವ ಗಾಢ ವ್ಯತ್ಯಾಸವನ್ನು ನೆನೆಯುತ್ತಲೇ ಜಿ.ಎಸ್.ಎಸ್.ಅವರ ಪದ್ಯ ಮತ್ತು ಕೈಫಿ ಆಜ್ಮಿಯವರ ಅನುವಾದಿತ ಪದ್ಯಗಳ ಸಂಪೂರ್ಣ ಪಾಠ ನಿಮ್ಮ ಓದಿಗಾಗಿ;
ಸ್ತ್ರೀ - ಡಾ.ಜಿ.ಎಸ್.ಎಸ್.
ಆಕಾಶದ ನೀಲಿಯಲ್ಲಿ
ಚಂದ್ರ-ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ-
ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ-
ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿಗಿಲಕಿ ಹಿಡಿಸಿದಾಕೆ-
ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ-ಮಗುವ ತಬ್ಬಿದಾಕೆ-
ನಿನಗೆ ಬೇರೆ ಹೆಸರು ಬೇಕೆ
ಸ್ರೀ ಎಂದರೆ ಅಷ್ಟೆ ಸಾಕೆ ?
(ತೆರೆದ ದಾರಿ: 1966)
##############################
ಸ್ತ್ರೀ
ಮೂಲ- ಕೈಫೀ ಆಜ್ಮಿ      ಕನ್ನಡಕ್ಕೆ- ವಿಭಾ ತಿರಕಪಡಿ
ಬಯಲ ಹೃದಯದಲ್ಲಿ ಕ್ರಾಂತಿಯ ಕಿಡಿಗಳಿವೆ ಇಂದು
ಬದುಕು – ಸಮಯದ ಬಣ್ಣ ಎರಡೂ ಒಂದೇ ಇಂದು
ಸಾರಾಯಿಯ ಸೀಸೆಗಳಲ್ಲಿ ಬಯಕೆಗಳು ಕಲ್ಲಾಗಿವೆ ಇಂದು
ಸೌಂದರ್ಯ – ಪ್ರೀತಿಗಳಿಗೆ ಒಂದೇ ಸ್ವರ – ಒಂದೇ ಲಯಗಳಿಂದು
ನಾನು ಉರಿಯುತ್ತಿರುವ ಬೆಂಕಿಯಲ್ಲಿ ನೀನೂ ಉರಿಯಬೇಕಿದೆ ಇಂದು.
ಏಳು ಗೆಳತಿ, ಜೊತೆಯಲ್ಲಿಯೇ ಮುಂದೆ ಸಾಗು
ಬದುಕಿಂದು ಯುದ್ಧದಲ್ಲಿದೆ ಹೊರತು ಸಹನೆಯ ವಶದಲ್ಲಲ್ಲ.
ಸ್ವತಂತ್ರ ಹಾರಾಟದಲ್ಲಿದೆ ಪರಿಮಳ, ಗುಂಗುರು ಕೂದಲಲ್ಲಲ್ಲ
ಇನ್ನೊಂದು ಸ್ವರ್ಗವೂ ಇದೆ ಬರೀ ಪುರುಷನ ಬಾಹುಗಳಲ್ಲಲ್ಲ
ಅದರ ಮುಕ್ತ ಲಯದೊಂದಿಗೆ ನೀ ಕುಣಿಯಬೇಕಿದೆ ಖುಷಿಯಲ್ಲಿ
ಎದ್ದೇಳು ಗೆಲತಿ ನನ್ನ ಜೊತೆಜೊತೆಗೆ ಹೆಜ್ಜೆ ಹಾಕು.
ಮೂಲೆ-ಮೂಲೆಗೂ ಉರಿಯುತ್ತಿವೆ ಚಿತೆಗಳು ನಿನಗಾಗಿ
ಕರ್ತವ್ಯದ ತನ್ನ ವೇಷ ಬದಲಿಸುತ್ತಿದೆ ಸಾವು ನಿನಗಾಗಿ
ಪ್ರತಿ ನಾಜೂಕು ನಡೆಯೂ ವಿನಾಶಕ್ಕೆ ಆಹ್ವಾನ ನಿನಗಾಗಿ
ಜಗತ್ತಿನ ಗಾಳಿ ಬರೀ ವಿಷವೇ ಆಗಿದೆ ನಿನಗಾಗಿ
ಋತುಗಳನ್ನೇ ಬದಲಿಸಿಬಿಡು ನೀ ಅರಳಬೇಕೆಂದರೆ
ಎದ್ದೇಳು ಗೆಳತಿ – ನನ್ನ ಜೊತೆಜೊತೆಗೆ ಹೆಜ್ಜೆ ಹಾಕು.
ಇತಿಹಾಸ ನಿನಗಿನ್ನೂ ಗೌರವಿಸುವುದ ಕಲಿತಿಲ್ಲ
ಉರಿವ ಕಿಡಿಗಳೂ ಇವೆ ನಿನ್ನಲ್ಲಿ ಬರೀ ಕಣ್ಣೀರಲ್ಲ
ನೀನು ಮನರಂಜಿಸುವ ಕತೆಯಲ್ಲ – ವಾಸ್ತವ ಕೂಡಾ ಹೌದು
ನಿನ್ನ ಅಸ್ತಿತ್ವಕ್ಕೊಂದು ಬೆಲೆಯಿದೆ ಬರೀ ತಾರುಣ್ಯಕ್ಕಲ್ಲ
ನಿನ್ನ ಇತಿಹಾಸದ ಶೀರ್ಷಿಕೆಯನ್ನು ಬದಲಿಸಬೇಕಿದೆ ನೀನಿಂದು.
ಎದ್ದೇಳು ಗೆಳತಿ – ನನ್ನ ಜೊತೆಜೊತೆಗೆ ಹೆಜ್ಜೆ ಹಾಕು
ಪದ್ಧತಿಗಳ ಬಂಧನ ಮುರಿದುಬಿಡು, ಸಂಪ್ರದಾಯದ ಜೇಲಿನಿಂದ ಪಾರಾಗು
ಸಂಪತ್ತಿನ ದೌರ್ಬಲ್ಯದಿಂದ ಹೊರ ಬಾ ಕೋಮಲತೆಯ ಭ್ರಮೆ ಬಿಡು
ನೀನೇ ಸೃಷ್ಟಿಸಿಕೊಂಡ ವ್ರತ-ನಿಷ್ಠೆಗಳ ಮಹೋನ್ನತಿಯ ಭ್ರಮೆಯಿಂದ ಹೊರಬಾ
ಪ್ರೀತಿಯೂ ಒಂದು ಬಂಧನ, ಈ ಬಂಧನದಿಂದ ಮುಕ್ತಳಾಗು
ಹಾದಿಯ ಮುಳ್ಳಷ್ಟೇ ಅಲ್ಲ – ಮೋಹ ಹುಟ್ಟಿಸುವ ಹೂಗಳನ್ನೂ ಕೊಚ್ಚಿ ಹಾಕಬೇಕಿದೆ ನೀನು
ಎದ್ದೇಳು ಗೆಳತಿ – ನನ್ನ ಜೊತೆಜೊತೆಗೆ ಹೆಜ್ಜೆ ಹಾಕು.
ಸಂದೇಹಗಳ ತೊರೆ, ಸರಿ ತಪ್ಪುಗಳ ದ್ವಂದ್ವದಿಂದ ಪಾರಾಗು
ನಿನಗೆ ಬಂಧನವಾಗುವ ಪ್ರಮಾಣ – ಭಾಷೆಗಳ ದಾಟಿ ಬಾ
ಈ ಮುತ್ತು ರತ್ನಗಳದೂ ಒಂದು ದಾಸ್ಯ – ಈ ಕೊರಳಹಾರವನ್ನು ಹರಿದುಬಿಡು
ಪುರುಷರಚಿತ ಮಾನದಂಡಗಳನು ಮುರಿದುಹಾಕು
ಬಿರುಗಾಳಿಯಾಗಿ ನೀ ಆರ್ಭಟಿಸಬೇಕು, ಕುದಿಯಬೇಕು.
ಎದ್ದೇಳು ಗೆಳತಿ – ನನ್ನ ಜೊತೆಜೊತೆಗೆ ಹೆಜ್ಜೆ ಹಾಕು.

ನೀನೇ ಅರಿಸ್ಟಟಲನ ತತ್ವಜ್ಞಾನ, ನೀನು ಸೌಂದರ್ಯದ ನಿದರ್ಶನ
ಆಕಾಶ ನಿನ್ನ ಮುಷ್ಠಿಯಲ್ಲಿದೆ- ಈ ಭುವಿ ನಿನ್ನ ಪದತಲದಲ್ಲಿ
ದೈವದ ಪಾದದಲ್ಲಿಟ್ಟಿರುವ ನಿನ್ನ ಹಣೆಯನ್ನು ಮೇಲೆತ್ತು
ನಾನೂ ನಿಲ್ಲುವವನಲ್ಲ, ಸಮಯ ಯಾರಿಗೂ ಕಾಯುವುದಿಲ್ಲ
ಎಲ್ಲಿಯವರೆಗೆ ಎಡವುತ್ತಿ, ನೀ ಗಟ್ಟಿ ಹೆಜ್ಜೆಯೂರು.
ಎದ್ದೇಳು ಗೆಳತಿ – ನನ್ನ ಜೊತೆಜೊತೆಗೆ ಹೆಜ್ಜೆ ಹಾಕು.
Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....