ಶುಕ್ರವಾರ, ಜೂನ್ 30, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವದ ಮೂರನೆಯ ದಿನದ ಕಾರ್ಯಕ್ರಮಗಳು

Arsikere


ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಮೂರನೆಯ ದಿನವಾದ ಇಂದು (ಆಷಾಢ ಶುದ್ಧ ಸಪ್ತಮಿ, 30-06-17 ಶುಕ್ರವಾರದಂದು) ಬೆಳಿಗ್ಗೆ  ಶ್ರೀಯವರಿಗೆ ಹಗಲು ನಿತ್ಯೋತ್ಸವ ಹಾಗೂ ರಾತ್ರಿ ಹಂಸವಾಹನೋತ್ಸವ ಸೇವೆಗಳು ಜರುಗಿದವು.  ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.


ಚಿತ್ರಗಳು : ತಿರುಪತಿ ರಾಜ (ರಾಜಾಹುಲಿ)

Share:

ಗುರುವಾರ, ಜೂನ್ 29, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವದ ಎರಡನೆಯ ದಿನದ ಕಾರ್ಯಕ್ರಮಗಳು

Arsikere


ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಎರಡನೆಯ ದಿನವಾದ ಇಂದು (ಆಷಾಢ ಶುದ್ಧ ಷಷ್ಠಿ, 29-06-17 ಗುರುವಾರದಂದು) ಬೆಳಿಗ್ಗೆ ಅರಸೀಕೆರೆ ಪಟ್ಟಣದ ತಾಲ್ಲೂಕು ಕಚೇರಿಯ ಖಜಾನೆಯಿಂದ ಶ್ರೀಯವರ ರತ್ನಖಚಿತ ಆಭರಣಗಳು ಹಾಗೂ ಬೆಳ್ಳಿ ಬಂಗಾರದ ಪೂಜಾ ಸಾಮಗ್ರಿಗಳನ್ನು ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ, ಸಾಂಪ್ರದಾಯಕ ರೀತಿಯಲ್ಲಿ ಎತ್ತಿನಗಾಡಿಯಲ್ಲಿಟ್ಟು ಮಂಗಳ ವಾದ್ಯಗಳೊಡನೆ ತಿರುಪತಿ ದೇವಾಲಯಕ್ಕೆ ತರಲಾಯಿತು. ತಾಲ್ಲೂಕು ಆಡಳಿತದ ಹಿರಿಯ ಅಧಿಕಾರಿಗಳು, ಮುಜರಾಯಿ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಕಚೇರಿಯ ಸಿಬ್ಬಂದಿಗಳು, ದೇವಸ್ಥಾನದ ಆಗಮಿಕರು, ಅರ್ಚಕರು, ರಥೋತ್ಸವ ಮಂಡಲಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹಾಜರಿದ್ದರು.

ಈ ದಿನ ಸಂಜೆ ಶ್ರೀಯವರ ದೇವಾಲಯದಲ್ಲಿ ರಕ್ಷಾಬಂಧನ, ಭೇರಿತಾಡನ ದಿಗ್ಬಲಿ, ಧ್ವಜಾರೋಹಣ ಮತ್ತು ದೇವತಾ ಆಹ್ವಾನ ಸೇವೆಗಳು ಜರುಗಿದವು.  ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.


ಚಿತ್ರಗಳು : ತಿರುಪತಿ ರಾಜ (ರಾಜಾಹುಲಿ)Share:

ಬುಧವಾರ, ಜೂನ್ 28, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

Arsikere

ಇಂದಿನಿಂದ ಹದಿನೈದು ದಿನಗಳ ಕಾಲ ಜರುಗಲಿರುವ ಇತಿಹಾಸ ಪ್ರಸಿದ್ಧ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ವೈಭವದ ಜಾತ್ರಾ ಮಹೋತ್ಸವಕ್ಕೆ ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಅರಸೀಕೆರೆ ನಗರಸಭೆ ಉಪಾಧ್ಯಕ್ಷ ಪಾರ್ಥಸಾರಥಿ, ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಟಿ.ಆರ್.ನಾಗರಾಜ್, ಸಮಿತಿಯ ಸದಸ್ಯರುಗಳು, ತಿರುಪತಿ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಪಾಲ್ಗೊಂಡಿದ್ದರು.


ರಥಗಣಪತಿ ಪೂಜೆಯೊಂದಿಗೆ ಜಾತ್ರಾ ಮಹೋತ್ಸವವು ನಿರ್ವಿಘ್ನವಾಗಿ ಜರುಗಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ನೆರವೇರಿಸಲಾಯಿತು.
ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

Share:

ಮಂಗಳವಾರ, ಜೂನ್ 20, 2017

ಆಹಾರ ಪದ್ಧತಿ ಮತ್ತು ಆರೋಗ್ಯ

ಈ ವರೆಗೂ ಪ್ರಕಟಿಸಿದ್ದ ಲೇಖನಗಳಲ್ಲಿ ಬಹುತೇಕ ಸಾಹಿತ್ಯ, ಸಂಸ್ಕೃತಿ ಮತ್ತು ಈ ನೆಲದ ಪೂರ್ವ ಸೂರಿಗಳ ಕೃತಿಗಳ ಬಗ್ಗೆ ಚರ್ಚಿಸಿರುವುದೇ ಹೆಚ್ಚು. ಇವುಗಳ ಜೊತೆಗೇ ಸಂತೃಪ್ತ ಜೀವನ ನಿರ್ವಹಣೆಗೆ ನಮ್ಮ ಆಹಾರ ಪದ್ಧತಿಯ ನ್ಯೂನತೆಗಳನ್ನು ಸರಿಪಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅವಶ್ಯಕತೆಯೂ ಹೆಚ್ಚಿನದೇ ಆಗಿದೆ. ಸಾಲು ಸಾಲು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳೂ, ಹತ್ತಾರು ವೈದ್ಯರು, ಕೊನೆ ಮೊದಲಿಲ್ಲದ ತಪಾಸಣೆಗಳೂ ಸಾವಿನ ದಿನವನ್ನು ಮುಂದೂಡುತ್ತಿವೆಯೇ ವಿನಾ ಮನುಷ್ಯನಿಗೆ ನೆಮ್ಮದಿಯ ಜೀವನ ಕೊಡಲು ಅಸಮರ್ಥವಾಗಿವೆ. ನಮ್ಮ ಹಿರಿಯರಿಗಿದ್ದ ಜೀವನ ನಿರ್ವಹಣೆಯ ಛಲವಾಗಲೀ ಅವರಿಗಿದ್ದ ದೀರ್ಘ ಆಯುಷ್ಯವನ್ನಾಗಲೀ ಅಥವ ಅವರಷ್ಟು ಉತ್ತಮ ಆರೋಗ್ಯವನ್ನಾಗಲೀ ಪಡೆಯದ ಈ ಕಾಲದ ನಾವು ಒಂದಲ್ಲ ಒಂದು ಆರೋಗ್ಯ ಸಂಬಂಧೀ ಸಮಸ್ಯೆಗಳಿಂದ ನರಳುತ್ತಲೇ ಇದ್ದೇವೆ.

ಇದನ್ನು ಮುಂದುವರೆಸುವ ಮೊದಲು ಸ್ಪಷ್ಟಪಡಿಸಬೇಕಾದ ಮಾತೆಂದರೆ ಇದು ಕೇವಲ ಸದ್ಯದ ಜನ ಜೀವನ ಕ್ರಮವನ್ನು ಅಭ್ಯಸಿಸಿ ಮತ್ತು ಸ್ವಂತ ಅನುಭವಗಳನ್ನು ಆಧರಿಸಿ ಬರೆಯುತ್ತಿರುವ ಲೇಖನವೇ ವಿನಾ ಯಾವುದೇ ವೈದ್ಯಕೀಯ ಪದ್ಧತಿಯನ್ನು ನಿರಾಕರಿಸುವ ಅಥವ  ಅದನ್ನು ಸಮರ್ಥಿಸುವ ಉದ್ದೇಶದಿಂದ ಕೂಡಿಲ್ಲ.

ನಾವೆಲ್ಲ ಸಣ್ಣವರಿದ್ದಾಗ ಶಾಲೆಯಲ್ಲಿ ತರಗತಿಗಳಲ್ಲಿ ಕಲಿತದ್ದಕ್ಕಿಂತ ಹೊರಗಣ ಪರಿಸರದಿಂದ ಸುತ್ತಣ ಸಮಾಜದಿಂದ ಕಲಿತ ಪಾಠಗಳೇ ಹೆಚ್ಚು. ಪರೀಕ್ಷೆಗಳೆಂದರೆ ಯಾವ ಅಂಜಿಕೆ ಹೆಚ್ಚಿನ ಪ್ರಯತ್ನಗಳಿಲ್ಲದೇ ಡಿಗ್ರಿಗೊಂದು ದಾರಿಯಾಗಿದ್ದವೇ ವಿನಾ ಅವೇ ಜೀವನದ ಪರಮ ಗುರಿಯಾಗಿರಲಿಲ್ಲ. ನಮ್ಮ ಪೋಷಕರು ನಮ್ಮ ಪರೀಕ್ಷೆಗಳ ವೇಳಾಪಟ್ಟಿ ಫಲಿತಾಂಶ ಮುಂದಿನ ಓದು ಯಾವುದರ ಬಗೆಗೂ ಈಗಿನ ಪೋಷಕರಷ್ಟು ಆತಂಕವನ್ನಾಗಲೀ ಭಯವನ್ನಾಗಲೀ ನಮ್ಮೊಳಗೆ ಹುಟ್ಟಿಸುತ್ತಲೇ ಇರಲಿಲ್ಲ. ಪಾಸಾದರೆ ಒಳ್ಳೆಯದು ಫೇಲಾದರೆ ಸಣ್ಣ ಅಂಗಡಿಯೋ ವ್ಯವಸಾಯವೋ ಬದುಕು ಕಟ್ಟಿಕೊಳ್ಳಲು ಸಾಕು ಎಂದೇ ಭಾವಿಸಿದ್ದರು ಮತ್ತು ಅರವತ್ತರ ದಶಕದಲ್ಲಿ ಹುಟ್ಟಿದ ಹೆಚ್ಚಿನವರು ಕಲಿತದ್ದು ಕನ್ನಡ ಮಾಧ್ಯಮದ ಸರಕಾರೀ ಶಾಲೆಗಳಲ್ಲೇ ಅನ್ನುವುದನ್ನೂ ಮರೆಯಬಾರದು. ಆಮೇಲಾಮೇಲೆ ಈ ಇಂಗ್ಲಿಷ್ ಮಾಧ್ಯಮ, ಖಾಸಗೀ ಕಾಲೇಜು, ಇಂಜಿನಿಯರಿಂಗ್ ವೈದ್ಯಕೀಯ ಬಿಟ್ಟು ಬೇರೇನೂ ಬದುಕಿಗೆ ಇಲ್ಲವೇ ಇಲ್ಲ ಅನ್ನುವಷ್ಟು ಬದಲಾವಣೆಯನ್ನು ಹೆಚ್ಚಿನ ಜನ ಅದರಲ್ಲೂ ಮೇಲ್ಮಧ್ಯಮ ವರ್ಗದ ಉನ್ನತ ಜಾತಿಗಳಲ್ಲಿ ಸಾಮಾನ್ಯ ಖಾಯಿಲೆಯಾಗಿ ಬಿಟ್ಟಿತು.
ಆಟವಾಡಲು ಹೊರಗೆ ಹೋದಾಗ ಸಿಕ್ಕ ನೀರನ್ನು ಕುಡಿದು, ಕಂಡದ್ದನ್ನೆಲ್ಲ ತಿಂದು ಜೀರ್ಣಿಸಿಕೊಂಡ ನಮಗೂ ಕುಡಿಯುವುದಕ್ಕೆ ಆರ್ವೊ ನೀರು, ತಿನ್ನಲು ಸಂಸ್ಕರಿಸಿದ ಆಹಾರವನ್ನಷ್ಟೇ ಬಳಸುತ್ತಿರುವ ಈ ಕಾಲದ ಹೊಸ ತಲೆಮಾರಿಗೂ ಜೀವನ ನಿರ್ವಹಣೆ ಮತ್ತು ಬದುಕಿನ ರೀತಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದೇ ಇವೆ.

ಮೊದಲೆಲ್ಲ ಶುಗರ್ ಕಂಪ್ಲೇಂಟ್ ಬರುತ್ತಿದ್ದದ್ದು ದೊಡ್ಡ ಶ್ರೀಮಂತರಿಗೆ, ಹಾರ್ಟ್ ಅಟ್ಯಾಕ್ ಆಗುತ್ತಿದ್ದದ್ದು ತಿಂದೂ ತಿಂದೂ ಉಬ್ಬಿಕೊಂಡಿದ್ದವರಿಗೆ ಮಾತ್ರ ಎಂಬ ತಿಳುವಳಿಕೆ ಇತ್ತು. ಹೊಲ ಉಳುತ್ತಲೇ ಸಾವು ಕಂಡವರಿಗೆ ನೆಲ ಪಟ್ಟು ಹೊಡೆಯಿತೆಂದೋ, ದಿನದಿಂದ ದಿನಕ್ಕೆ ಕೃಷವಾಗುತ್ತ ದುರ್ಬಲರಾಗುತ್ತ ಕಡೆಗೊಂದು ದಿನ ಸಾಯುಜ್ಯ ಕಂಡವರಿಗೆ ಪಾಪದ ಫಲ ಉಂಡವರೆಂದೂ ಕರೆಯಲಾಗುತ್ತಿತ್ತು. ಪಾಪ ಆಗಲೂ ಅವರ ಸಾವಿಗೆ ಹೃದಯ ಸ್ಥಂಭನ ಅಥವಾ  ಮಧುಮೇಹ ಕಾರಣವಾಗಿರುತ್ತಿತ್ತು. ಈಗಿನಷ್ಟು ವೈದ್ಯ ವಿಜ್ಞಾನ ಪ್ರಖರವಾಗದ ಕಾರಣ ಮತ್ತು ಲ್ಯಾಬುಗಳಿರದ ಕಾಲದಲ್ಲಿ ಉಳ್ಳವರೂ ಸರಿಯಾದ ಚಿಕಿತ್ಸೆ ಸಿಗದೇ ಸಾಯುತ್ತಿದ್ದ ಕಾಲದಲ್ಲಿ ಬಡವನ ಸಾವಿಗೆ ಸೌದೆಗೂ ಗತಿಯಿಲ್ಲವೆಂದು ಹಾಡುತ್ತಿದ್ದ ಕಾಲವದು. ಆದರೂ ನಮಗೆ ಹಿಂದಿನವರ ಆರೋಗ್ಯ, ಅವರ ಆಯುಷ್ಯ, ಅವರ ಜೀವನ ಪದ್ಧತಿಯ ಬಗ್ಗೆ ಕುರುಡು ನಿಷ್ಠೆ.

ಇನ್ನು ಮಾತುಮಾತಿಗೆ ಈಹೊತ್ತು ಸಿಕ್ಕುತ್ತಿರುವ ಆಹಾರ ಪದಾರ್ಥಗಳಲ್ಲಿ ಮೊದಲಿದ್ದಷ್ಟು ಸತ್ವವಿಲ್ಲ ಎಂಬ ಒಗ್ಗರಣೆ ಇದ್ದೇ ಇರುತ್ತದೆ. ಆದರೆ ಇಷ್ಟೊಂದು ಜನಸಂಖ್ಯೆಗೆ ಬೇಕಾಗುವಷ್ಟು ಪದಾರ್ಥಗಳನ್ನು  ರಾಸಾಯನಿಕಗಳನ್ನು ಬಳಸದೇ ಬೆಳೆಯುವುದು ಅಸಾಧ್ಯದ ಕೆಲಸ. ಹಸಿರು  ಕ್ರಾಂತಿ ಯೋಜನೆ ಬರದಿದ್ದಿದ್ದರೆ ನಾವೆಲ್ಲ ಉಪವಾಸ ಇರಬೇಕಿತ್ತು ಎಂಬ ತಿಳುವಳಿಕೆ ಇಲ್ಲದ ಮಂದಿ ಆಧುನಿಕ ವ್ಯವಸಾಯ ಪದ್ಧತಿಯನ್ನು ವಿರೋಧಿಸುತ್ತಾರೆ. ಆದರೆ ಭೀಕರ ಕ್ಷಾಮದಿಂದ  ತತ್ತರಿಸಿದ್ದ ದೇಶವೊಂದು ಇವತ್ತು ಆಹಾರ ಉತ್ಪಾದನೆಯಲ್ಲಿ ಇತರ ದೇಶಗಳ ಹಂಗಿಲ್ಲದ ಸ್ಥಿತಿಗೆ ಬೆಳೆದಿದೆಯೆಂದರೆ ಅದು ಹೆಮ್ಮೆ ಪಡಬಹುದಾದ ಸಂಗತಿ. ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಕಂಡುಹಿಡಿಯಲಾದ ಪೆನ್ಸಿಲಿನ್ ಎಂಬ ರೋಗ ನಿರೋಧಕ ಚುಚ್ಚುಮದ್ದು ಮನುಕುಲದ ಭವಿಷ್ಯವನ್ನೇ ಬದಲಿಸಿದ್ದು ಈಗ ಇತಿಹಾಸ. ನಂತರ ಕಂಡಿಹಿಡಿದ ಅದೆಷ್ಟೋ ಆಂಟಿ ಬಯೋಟಿಕ್ ಗಳಿಲ್ಲದಿದ್ದರೆ ಲಸಿಕೆಗಳಿಲ್ಲದಿದ್ದರೆ ಸಾಂಕ್ರಾಮಿಕ ರೋಗಗಳ ಕಾರಣ ಮನುಕುಲವೇ ಅಂತ್ಯವಾಗಿರುತ್ತಿತ್ತು. ಆದರೆ ಈ ಪ್ರಾಥಮಿಕ ಜ್ಞಾನ ಇಲ್ಲದಿರುವವರು ಆಧುನಿಕ ಪ್ರಪಂಚದ ಎಲ್ಲ ಸವಲತ್ತುಗಳನ್ನು ಬಳಸಿಕೊಂಡೂ ವ್ಯವಸ್ಥೆಯ ಬಗ್ಗೆ ಕಿಡಿ ಕಾರುವುದು ಸೋಜಿಗದ ಸಂಗತಿ.

ಒಂದು ಕಾಲದಲ್ಲಿ ಬಡವರ ಆಹಾರವೆನಿಸಿದ್ದ, ಹಕ್ಕಿಗಳು ತಿನ್ನುವ ಅಕ್ಕಿ ಎಂದೇ ಕರೆಯಲ್ಪಡುತ್ತಿದ್ದ ಕಿರುಧಾನ್ಯಗಳು ಈಗ 'ಸಿರಿಧಾನ್ಯ'ಗಳ ಹೆಸರಿನಲ್ಲಿ ಸಿರಿವಂತರಿಗೂ ಬೇಕಾದ ಆಹಾರ ಉತ್ಪನ್ನಗಳಾಗಿವೆ. ಕಳೆದ ಒಂದೆರಡು ವರ್ಷಗಳಿಂದೀಚೆಗೆ ಇದ್ದಕ್ಕಿದ್ದ ಹಾಗೆ ಇವುಗಳಿಗೆ ಡಿಮ್ಯಾಂಡ್‌ ಹೆಚ್ಚಿದ್ದು, ಅಷ್ಟು ಇಷ್ಟು ಬೆಳೆಯುತ್ತಿದ್ದ ರೈತರು ಬೇಡಿಕೆ ಹೆಚ್ಚಿದ್ದನ್ನು ಕಂಡು ಇವುಗಳನ್ನೇ ಮುಖ್ಯ ಬೆಳೆಯಾಗಿ ಬೆಳೆಯಬೇಕಾದ ಕಾಲ ಬಂತಲ್ಲಪ್ಪಾ ಎಂದು ಹೊಲದೆಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಮಳೆ ಕಡಿಮೆಯಾದಾಗ, ಬೇರೇನೂ ಬೆಳೆಯಲಿಕ್ಕೆ ಆಗದ ಪರಿಸ್ಥಿತಿ ನಿರ್ಮಾಣವಾದಾಗ ಬೆಳೆಯುತ್ತಿದ್ದ ಈ ಬೆಳೆಗಳ ಬಗ್ಗೆ ರೈತರಿಗೆ ಏನೋ ಒಂದು ರೀತಿಯ ಅಕ್ಕರೆ. ಹೀಗಾಗಿ ಕೇಳುವವರೇ ಇಲ್ಲದ ಕಾಲದಲ್ಲಿಯೂ ಅವುಗಳನ್ನು ಬೆಳೆಯುತ್ತಾ, ಇಂದಿಗೂ ಬೀಜವನ್ನು ಉಳಿಸಿಕೊಂಡು ಬಂದಿದ್ದಾರೆ. ಈಗ ರಾಜ್ಯದಲ್ಲಿ ಸುಮಾರು 18 ಲಕ್ಷ ಹೆಕ್ಟೇರ್‌ ಜಾಗದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ನಿಮಗೆ ಗೊತ್ತೇ, ನಲವತ್ತು ವರ್ಷಗಳ ಹಿಂದೆಯೂ ಇಷ್ಟೇ ಜಾಗದಲ್ಲಿ ಈ ಧಾನ್ಯಗಳ ಕೃಷಿ ನಡೆಯುತ್ತಿತ್ತಂತೆ!

ಬರಗಾಲದ ಈ ಬೆಳೆಗಳಿಗೆ ಈ ರೀತಿ ಬಂಗಾರದ ಬೆಲೆ ಬರಲು ಕಾರಣ, ನಗರಗಳ ಜನತೆಯ ಜೀವನ ಶೈಲಿ ಮತ್ತು ಆಹಾರಕ್ರಮ. 'ಫಾಸ್ಟ್‌ ಫುಡ್‌ ಜಮಾನ'ದಲ್ಲಿ ಏನೋ ದೋಷಗಳಿವೆ ಎಂದು ಗೊತ್ತಾಗುತ್ತಿದ್ದಂತೆಯೇ ಎಲ್ಲರೂ ಈಗ ಆಗ್ರ್ಯಾನಿಕ್‌ ಫುಡ್‌ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಹೀಗಾಗಿ ಸಹಜವಾಗಿಯೇ ಸಿರಿಧಾನ್ಯಗಳು ಆಕರ್ಷಣೆ ಹೆಚ್ಚಿಸಿಕೊಂಡಿವೆ. 'ಇದರಲ್ಲಿ ನಾರಿನಂಶ ಹೆಚ್ಚಿದೆಯಂತೆ, ಪೌಷ್ಟಿಕಾಂಶಗಳು ಹೇರಳವಾಗಿವೆಯಂತೆ, ಒಂದೊಂದು ಧಾನ್ಯ ಒಂದೊಂದು ಕಾಯಿಲೆಗೆ ಔಷಧಿಯಂತೆ' ಹೀಗೆ ಯಾವುದಾದರೂ ಒಂದು ಕಾರಣವನ್ನು ಮುಂದಿಟ್ಟುಕೊಂಡು, ರುಚಿರುಚಿಯಾದ ಈ ಧಾನ್ಯಗಳನ್ನು ತಮ್ಮ ದಿನನಿತ್ಯದ ಮೆನುವಿನಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಬೇಡಿಕೆ ಹೆಚ್ಚುತ್ತಿದ್ದಂತೆಯೇ ಮಾರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಎಲ್ಲ ಊರುಗಳಲ್ಲೂ  ಇಂದು ಸಿರಿಧಾನ್ಯಗಳನ್ನು ಮಾರುವ ಮಳಿಗೆಗಳಿವೆ.

ನವಣೆ ತಿಂದವರು ಬುದ್ಧಿವಂತರಾಗುವವರು, ಅರ್ಕ ತಿಂದವರು ಮಾರಕ ರೋಗಗಳಿಂದ ಮುಕ್ತರಾಗುವರು, ಸಾಮೆ ತಿಂದವರು ಆಮೆಯಂತೆ ದೀರ್ಘಾಯುಷಿಗಳಾಗುವರು, ಊದಲು ತಿನ್ನುವವರು ಉತ್ಸಾಹದಿಂದ ಕಹಳೆ ಊದುವರು, ಕೊರಲು ತಿಂದವರು ಹಕ್ಕಿಯಂತೆ ಹಾರುವರು, ರಾಗಿ ತಿಂದವರು ನಿರೋಗಿಯಾಗುವರು, ಜೋಳ ತಿಂದವರು ಗೂಳಿಯಂತೆ ಬಲಿಷ್ಠರಾಗುವರು, ಸಜ್ಜೆ ತಿಂದವರು ಸಜ್ಜನರಾಗುವರು, ಬರಗು ತಿಂದವರು ದೇಹಕಾಂತಿಯಿಂದ ಬೆಳಗುವರು, ಒಟ್ಟಾರೆ ಸಿರಿಧಾನ್ಯಗಳನ್ನು ತಿನ್ನುವರು ಆರೋಗ್ಯದಿಂದ ಸಿರಿವಂತರಾಗುವರು ಎಂಬುದು ನಮ್ಮ ಗ್ರಾಮೀಣ ಜನತೆಯ ನಂಬಿಕೆ. ಈ ನಂಬಿಕೆಯೇ ಈಗ ಶ್ರೇಷ್ಠತೆಯ ವ್ಯಸನಕ್ಕೆ ಸಿಕ್ಕ ನಗರದ ಜನತೆಯ ಜೀವನಶೈಲಿಗೆ ಹೊಸ ತಿರುವು ನೀಡುತ್ತಿದೆ.

ಹಸಿರುಕ್ರಾಂತಿಯ ದಿನಗಳಿಂದ ಕಿರುಧಾನ್ಯಗಳನ್ನೇ ಮರೆತಿದ್ದ ಸರಕಾರಗಳಿಗೂ ಈಗ ಹೆಜ್ಜೆ ತಪ್ಪಿದ ಅರಿವಾಗಿದೆ. 'ನಾರಿನಂಶಕ್ಕಾಗಿ ಓಟ್ಸ್‌ ಮೊರೆಹೋಗಬೇಡಿ, ಸಿರಿಧಾನ್ಯಗಳ ಸೇವಿಸಿ' ಎಂದು ಪ್ರಚಾರಕ್ಕೆ ಇಳಿದಿದೆ. ಮೊನ್ನೆ ಮೊನ್ನೆಯವರೆಗೂ ಸಾವಯವ ತರಕಾರಿ, ಆಹಾರ ಬೆಳೆಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದವರೆಲ್ಲಾ, ಈಗ ಸಿರಿಧಾನ್ಯಗಳ ಬಗ್ಗೆಯೇ ಹೇಳಲಾರಂಭಿಸಿದ್ದಾರೆ. ಸಿರಿಧಾನ್ಯಗಳನ್ನೇ ಬಳಸಿದ, ಹೊಸ ಹೊಸ ರುಚಿಯ ತಿನಿಸುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಬಾಯಲ್ಲಿ ನೀರಿಳಿದರೂ, ಶುಗರ್‌ ಮಟ್ಟ ನೆನಪಾಗಿ ಬಿಪಿ ಏರಿಸಿಕೊಳ್ಳುತ್ತಿದ್ದವರೆಲ್ಲಾ, ಸಿರಿಧಾನ್ಯಗಳ ಬಗೆ ಬಗೆಯ ತಿನಿಸುಗಳನ್ನು  ಸವಿಯುತ್ತಿದ್ದಾರೆ.

ಶಿಲಾಯುಗದ ಕಾಲದಿಂದಲೂ ಬಳಕೆಯಲ್ಲಿರುವ ಈ ಕಿರುಧಾನ್ಯಗಳಲ್ಲಿ ಸಾವಿರಾರು ವಿಧಗಳಿವೆ. ನಮ್ಮ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದ ಹತ್ತಾರು ದೇಶಗಳಲ್ಲಿ ಇವುಗಳನ್ನು (ಆಫ್ರಿಕಾಖಂಡದ ದೇಶಗಳಲ್ಲಿಯೇ ಹೆಚ್ಚು) ಬೆಳೆಯಲಾಗುತ್ತಿದೆ. ಆದರೆ ಎಲ್ಲೆಡೆಯೂ ಇದೇ ಕತೆ. 'ಹಿತ್ತಲ ಗಿಡ ಮದ್ದಲ್ಲ' ಎಂಬ ಮನೋಭಾವ. ನಮ್ಮ ರಾಜ್ಯದಂತೆಯೇ ಉತ್ತರಾಖಂಡ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪಂಜಾಬ್‌ಗಳಲ್ಲಿಯೂ ಸಿರಿಧಾನ್ಯದ ಹವಾ ಎದ್ದಿದೆ. ಕೆಲವೆಡೆ ಸರಕಾರವೇ ಮುಂದೆ ನಿಂತು ವ್ಯವಸ್ಥಿತವಾಗಿ ಪ್ರಚಾರ ನಡೆಸುತ್ತಿದೆ.

ಸಿರಿಧಾನ್ಯ ನಿಜವಾಗಿಯೂ ಐಸಿರಿ ತರುವಂತಹದ್ದು ಎನ್ನುತ್ತಾರೆ ಆಹಾರ ತಜ್ಞರು. ಇವುಗಳಲ್ಲಿ ಪ್ರೊಟೀನ್‌, ನಾರಿನಂಶ, ಫೋಲಿಕ್‌ ಆಮ್ಲ, ವಿಟಮಿನ್‌-ಇ, ಮೆಗ್ನೇಷಿಯಂ, ಕ್ಯಾಲ್ಸಿಯಂ, ಕಬ್ಬಿಣ, ಪೊಟಾಷಿಯಂ ಹೀಗೆ ದೇಹಕ್ಕೆ ಬೇಕಾದ ಪೋಷಕಾಂಶಗಳೆಲ್ಲಾ ಇವೆ. ಕೊಬ್ಬಿಲ್ಲ, ಕೊಲೆಸ್ಟ್ರಾಲ್‌ ಇಲ್ಲ, ನಾರಿನಂಶ ಹೆಚ್ಚಿದೆ, ಸ್ವಾದ ಸಾಕಷ್ಟಿದೆ. ಹೀಗಾಗಿ ಇವೇ ಉತ್ತಮ ಆಹಾರವಲ್ಲದೆ, ಮತ್ಯಾವುದು ಎಂದು ಪ್ರಶ್ನಿಸುತ್ತಾರೆ. ಕೊಬ್ಬೇ ದೇಶದ ಸಮಸ್ಯೆಯಾಗುತ್ತಿರುವ ಈ ಕಾಲದಲ್ಲಿ, ಕೊಬ್ಬಿಲ್ಲದ್ದು, ಕೊಬ್ಬದಿರುತ್ತದೆಯೇ?

ಬೆಳೆಯುವ ರೈತರಿಗೂ ಇದು ಸುಲಭದ ಕೃಷಿ. ನೀರು ಹೆಚ್ಚು ಬೇಕಾಗಿಯೇ ಇಲ್ಲ. (ಹೀಗಾಗಿಯೇ ಇವು ಬರಗಾಲದ ಬೆಳೆ ಎನಿಸಿಕೊಂಡಿವೆ) ಎಲ್ಲ ಹವಾಮಾನಗಳಿಗೂ ಒಗ್ಗಿಕೊಳ್ಳುತ್ತವೆ. ಒಂದೇ ಪ್ರದೇಶದಲ್ಲಿ, ಒಂದೇ ಕಾಲದಲ್ಲಿ ಆರರಿಂದ ಇಪ್ಪತ್ತು ಬೆಳೆಗಳನ್ನು ಬೆಳೆಯಬಹುದು. ವಿವಿಧ ರೋಗಗಳ ಭಯವಿಲ್ಲ, ಗೊಬ್ಬರ ಸುರಿಯಬೇಕಾಗಿಲ್ಲ. ಹೀಗಾಗಿ ಕೇಳುವವರಿರುವಾಗ, ಬೆಳೆಯಲು ಹಿಂದೇಟು ಹಾಕಿಯಾರೇ ನಮ್ಮ ಅನ್ನದಾತರು...

ಆದರೆ ಅದ್ಧೂರಿ ಪ್ರಚಾರದ ಈ ಬೆಳಕಿನಲ್ಲಿ ಕತ್ತಲೆಯ ಬಿಂಬಗಳೂ ಇವೆ. ಮನುಷ್ಯ ಆರೋಗ್ಯದಿಂದಿರಲು ಸಿರಿಧಾನ್ಯ ಸೇವಿಸಿದರಷ್ಟೇ ಸಾಲದು ಎಂಬುದನ್ನು ಮರೆಮಾಚಲಾಗುತ್ತಿದೆ. ಎಲ್ಲ ಧಾನ್ಯಗಳೂ ಎಲ್ಲರಿಗೂ ಒಗ್ಗುತ್ತವೆ, ಹಿಡಿಸುತ್ತವೆ ಎಂದೇನೂ ಇಲ್ಲ. ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ರೀತಿಯದು. ಏನೇ ಆಗಲಿ ತಪ್ಪಿದ ಆಹಾರ ಕ್ರಮಕ್ಕೆ ಮತ್ತೆ ಮರಳುವುದಕ್ಕೆ ಮನಸ್ಸು ಸಿದ್ಧವಾದರೆ ಸಾಲದು, ದೇಹವೂ ಸಿದ್ಧವಾಗಬೇಕು ತಾನೆ? ಏಕೆಂದರೆ ಮಧುಮೇಹಿ ರೋಗಿಗಳಿಗೆ ಗೋಧಿಯಿಂದ ಮಾಡಿದ ಚಪಾತಿ ಮತ್ತು ಅನ್ನಗಳನ್ನು ತಿನ್ನಲು ವೈದ್ಯರು ಹೇಳುವುದು ಸಾಮಾನ್ಯ. ಆದರೆ ಗೋಧಿಯನ್ನು ಹೆಚ್ಚಾಗಿ ಬಳಸುವ ಪಂಜಾಬಿನಲ್ಲಿ ಕರುಳು ಕ್ಯಾನ್ಸರಿನ ಸಮಸ್ಯೆ ಹೆಚ್ಚಾಗಿದೆ. ಅಲ್ಲಿಯೂ ಇಲ್ಲಿನಂತೆಯೇ ಮಧುಮೇಹಿಗಳು ಇದ್ದಾರೆ. ಅವರಿಗೆ ಗೋಧಿ ಬಿಟ್ಟು ಬೇರೆ ಇತರ ಅಹಾರ ಧಾನ್ಯಗಳನ್ನು ಶಿಫಾರಸು ಮಾಡಲಾಗುತ್ತಿದೆ. ಅಂದರೆ ಆಹಾರಕ್ಕೆಂದು ಬಳಸುವ ಧಾನ್ಯವನ್ನು ಬಿಟ್ಟು ಬೇರೆ ಧಾನ್ಯ ಬಳಸಲು ಪ್ರಾರಂಭಿಸಿದರೆ ತಿನ್ನುವ ಪ್ರಮಾಣ ಕಡಿಮೆಯಾಗಿ ಮಧುಮೇಹ ಹತೋಟಿಗೆ ಬರಬಹುದು ಎನ್ನುವ ಉದ್ದೇಶ. ಆದರೆ ಸಿಕ್ಕಿದ್ದೆಲ್ಲವನ್ನೂ ಉದರವೆಂಬ ಅಳತೆ ಮೀರಿದ ಚೀಲಕ್ಕೆ ಸುರಿಯುತ್ತಿರುವ ಕಾರಣ ಆಹಾರದ ಮಿತಿ ಇಲ್ಲದೇ ದೈಹಿಕ ಶ್ರಮವಿಲ್ಲದೇ ಮಧುಮೇಹ ಹತೋಟಿ ಮೀರುತ್ತಿದೆ.

ಜೊತೆಗೇ ಅತೀ ಸಂಸ್ಕರಿತ ಆಹಾರ ಪದಾರ್ಥಗಳು, ಜಂಕ್ ಫುಡ್, ಪ್ರಾದೇಶಿಕವಲ್ಲದ ಧಾನ್ಯ, ಹಣ್ಣುಗಳ ಬಳಕೆ ಕೂಡ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿವೆ. ನಮ್ಮ ಹಿರಿಯರು ಪ್ರಾದೇಶಿಕವಲ್ಲದ ಯಾವ ಆಹಾರವನ್ನೂ ಬಳಸುತ್ತಿರಲಿಲ್ಲ. ಅಂದರೆ ಆಯಾ ಹವಾಮಾನ ಮತ್ತು ಪ್ರದೇಶದಲ್ಲಿ ಲಭ್ಯವಾಗುವ ನೈಸರ್ಗಿಕ ಉತ್ಪನ್ನಗಳು ಆಯಾ ಪ್ರದೇಶದ ಜನಜೀವನಕ್ಕೆ ಪೂರಕವಾಗಿರುವುದು ಸಾಮಾನ್ಯ ಸಂಗತಿ. ಅಂದರೆ ನಾವು ವಾಸಿಸುವ ಪ್ರದೇಶದಲ್ಲಿ ಬೆಳೆಯದ್ದನ್ನು  ಹೊರಗಿನಿಂದ ಆಮದು ಮಾಡಿಕೊಂಡು ತಿನ್ನುತ್ತಿರುವುದೇ ಸಮಸ್ಯೆಯ ಮೂಲ.

ಅಲ್ಲಿಗೆ ಈಗ ಚಾಲ್ತಿಯಲ್ಲಿರುವ ಕಿರು ಧಾನ್ಯಗಳು ಬರ ಪ್ರದೇಶಕ್ಕೂ, ಅಕ್ಕಿ ಮಲೆನಾಡಿಗೂ, ಜೋಳ ಬಿಸಿಲು ಪ್ರದೇಶಕ್ಕೂ, ರಾಗಿ ಹಳೇ ಮೈಸೂರು ಪ್ರಾಂತ್ಯಕ್ಕೂ ಸಹಜವಾಗಿ ಒಗ್ಗುತ್ತವೆ ಮತ್ತು ಆಯಾ ಪ್ರದೇಶದ ಹವಾಮಾನಕ್ಕೆ ತಕ್ಕಂತೆ ಜೀರ್ಣವಾಗುವ ಆಹಾರಗಳೂ ಆಗಿವೆ.

ಸಿರಿಧಾನ್ಯಗಳ ಈಗಿನ ಟ್ರೆಂಡ್‌ಗೆ ಸರಿಹೋಗುವಂತೆ ವಚನಕಾರ ಸಿದ್ಧರಾಮೇಶ್ವರ ಹೀಗೆ ಬರೆದಿದ್ದಾನೆ;

ನೀರಿಲ್ಲದ ಭೂಮಿಯಲ್ಲಿ ಮೂರು ಹೇರು ನವಣೆಯ ಬೆಳೆದುದ ಕಂಡೆ.

ಆ ನವಣೆ ಅಳೆದುಕೊಡುವಡೆ ಇಮ್ಮಡಿ ಮುಮ್ಮಡಿಯಾದುದ ಕಂಡೆ.

ಕೊಂಡವಂಗೆ ಜನ್ಮಜನ್ಮದಲ್ಲಿ ಭೋಗಿಸುವುದಕ್ಕೆ ಕಣಜಗಳಾದುದ ಕಂಡೆ.

ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.

ಕನಕದಾಸರ 'ರಾಮಧಾನ್ಯ ಚರಿತೆ' ಒಂದು ಅಣಕು ಕಾವ್ಯ. ಇದರ ಕತೆ ಧಾನ್ಯಗಳ ನಡುವಿನ ಶ್ರೇಷ್ಠತೆಗೆ ಸಂಬಂಧಿಸಿದ್ದು. ಅಕ್ಕಿ ಮತ್ತು ರಾಗಿಗಳನ್ನು ರೂಪಕಗಳಾಗಿ ಬಳಸಿಕೊಂಡು ಕನಕದಾಸರು ಮೇಲು-ಕೀಳು ತಾರತಮ್ಯಗಳನ್ನು ಲೇವಡಿ ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ಕರ್ನಾಟಕದ ಆಹಾರ ಪದ್ಧತಿಯನ್ನು ವಿಶ್ಲೇಷಿಸುವ ಕಾವ್ಯ ಕೂಡ ಹೌದು.

ಈ ಕಾವ್ಯದ ಸಾರಾಂಶವಿಷ್ಟು: ಶ್ರೀರಾಮನು ರಾವಣನ ಸಂಹಾರದ ನಂತರ ಅಯೋಧ್ಯೆಗೆ ಹಿಂತಿರುಗುವ ಮಾರ್ಗದಲ್ಲಿ ಗೌತಮ ಮುನಿಗಳ ಆಶ್ರಮಕ್ಕೆ ಬರುತ್ತಾನೆ. ಅಲ್ಲಿ ನವಧಾನ್ಯಗಳಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ಆರಂಭವಾಗಿರುತ್ತದೆ. ಅಕ್ಕಿ ಮತ್ತು ರಾಗಿಯ ನಡುವೆ ಜಗಳ ಶುರುವಾಗುತ್ತದೆ. ಗೌತಮ ಮುನಿಗಳು ರಾಗಿಯ ಶಕ್ತಿ ಸಾಮರ್ಥ್ಯ‌ಗಳನ್ನು ಹೊಗಳುತ್ತಾರೆ. ಆದರೆ ಅಕ್ಕಿ ಮತ್ತು ರಾಗಿಗಳು ಪರಸ್ಪರ ತಂತಮ್ಮ ಶಕ್ತಿ ಪ್ರಶಂಸೆ ಮಾಡಿಕೊಳ್ಳುತ್ತಾ ಜಗಳಕ್ಕಿಳಿಯುತ್ತವೆ. ಆಗ ಶ್ರೀರಾಮನು ಎರಡನ್ನು ಆರು ತಿಂಗಳ ಕಾಲ ಬಂಧನದಲ್ಲಿರಿಸಿ ಆಮೇಲೆ ಇವರಿಬ್ಬರಲ್ಲಿ ಯಾರು ಶ್ರೇಷ್ಠ ಎಂದು ತೀರ್ಮಾನಿಸುತ್ತೇನೆ ಎಂದು ಆಜ್ಞಾಪಿಸುತ್ತಾನೆ. ಅಂತೆಯೇ ಆರುತಿಂಗಳ ಸೆರೆವಾಸದ ನಂತರ ರಾಮನ ಮುಂದೆ ಎರಡೂ ಧಾನ್ಯಗಳನ್ನು ಹಾಜರುಪಡಿಸುತ್ತಾರೆ. ಆಗ ಅಕ್ಕಿಯು ಸೊರಗಿ ಮಾಸಲು ವಾಸನೆಯಿಂದ ನರಳುತ್ತಿರುತ್ತದೆ. ರಾಗಿ ಮಾತ್ರ ತನ್ನ ಕಾಂತಿಯನ್ನು ಸ್ವಲ್ಪವೂ ಕಳೆದುಕೊಳ್ಳದೆ ಆರೋಗ್ಯದಿಂದ ಇರುತ್ತದೆ. ರಾಮ ಇದನ್ನು ನೋಡಿ ರಾಗಿಯೇ ಶ್ರೇಷ್ಠವೆಂದು ಹೇಳಿ ತನ್ನ ಹೆಸರನ್ನೇ ರಾಗಿಗೆ ನೀಡುತ್ತಾನೆ. 'ರಾಘವ' ಎಂಬುದರ ಸಂಕ್ಷಿಪ್ತ ರೂಪವೇ ರಾಗಿ' ಎಂದಾಗಿದೆಯಂತೆ. ಇದು ಜನ ಪ್ರಿಯ ಕತೆ. ಆದರೆ ನಾವು ಸೂಕ್ಷ್ಮವಾಗಿ ಗಮನಿಸಬೇಕಾದದ್ದೆಂದರೆ ರಾಗಿ ತನ್ನ ಸಹಜ ರೂಪದಲ್ಲಿ ಉಳಿದ ಕಾರಣ ಕಾಂತಿ ಕಳೆದುಕೊಳ್ಳದೇ ಉಳಿದಿರುತ್ತೆ. ಆದರೆ ಅಕ್ಕಿ ತನ್ನ ಮೂಲ ಸ್ವರೂಪವಾದ ಬತ್ತದಿಂದ ಬೇರ್ಪಟ್ಟ ಕಾರಣ ಮುಗ್ಗಲಾಗಿರುತ್ತದೆ. ಒಂದು ವೇಳೆ ಶ್ರೀರಾಮ ಬತ್ತವನ್ನೇ ಸೆರೆಯಲ್ಲಿಟ್ಟಿದ್ದರೆ ಆಗ ಗೆಲ್ಲುತ್ತಿದ್ದದ್ದು ಯಾರು ಎಂದು ಆಲೋಚಿಸಬೇಕಿದೆ. ಅಂದರೆ ಸಂಸ್ಕರಿತ ಆಹಾರ ಧಾನ್ಯ ಹೆಚ್ಚು ಕಾಲ ಉಳಿಯುವುದಿಲ್ಲ. ಬತ್ತ ಮಾರುಕಟ್ಟೆಯಲ್ಲಿ ಸಿಗುವ ಅಕ್ಕಿಯಾಗುವ ಮೊದಲಿನ ಸ್ಥಿತಿಯಲ್ಲಿ ಅಂದರೆ ಪಾಲಿಷ್ ಆಗದ ರೂಪದಲ್ಲಿ ಇದ್ದಿದ್ದರೆ ಅದೂ ಕೂಡ ಜೀರ್ಣವಾಗಲು ಹೆಚ್ಚು ಸಮಯ ಬೇಡುತ್ತಿತ್ತು. ಈ ಸಹಜ ಪ್ರಕ್ರಿಯೆ ಅರಿಯದ ನಾವು ಮಧುಮೇಹಿಗಳು ಅಕ್ಕಿಯನ್ನು ತಿನ್ನಬಾರದೆಂಬ ಮೌಢ್ಯಕ್ಕೆ ಬಿದ್ದಿದ್ದೇವೆ.

ಪೌಷ್ಟಿಕಾಂಶ ಮತ್ತು ನಾರಿನಂಶಗಳಿಂದ ಕೂಡಿದ ಸಿರಿಧಾನ್ಯಗಳ ಬಳಕೆ ಹೆಚ್ಚುತ್ತಿರುವುದು ಒಳ್ಳೆಯದೇ, ಆದರೆ ಇದು ಎಲ್ಲರಿಗೂ ಒಳ್ಳೆಯದು ಎಂದೇನೂ ಇಲ್ಲ. ಕೆಲವರ ದೇಹಪ್ರಕೃತಿಗೆ ಇದು ಒಗ್ಗದೇ ಇರಬಹುದು. ಅಲರ್ಜಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಇದು ತಮ್ಮ ದೇಹಪ್ರಕೃತಿಗೆ ಒಗ್ಗುತ್ತದೆಯೇ ಎಂದು ನೋಡಿಕೊಂಡು ಬಳಸುವುದು ಒಳ್ಳೆಯದು.

ಅದು ಬಿಟ್ಟು ನಗರ ಕೇಂದ್ರಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅಲ್ಲಿನ ಡಯಟಿಷಿಯನ್ ಹೇಳಿದ್ದನ್ನೇ ಕೇಳುವ ನಮಗೆ ಡಾ.ಖಾದರ್ ಹೇಳುವ ಸರಿಯಾದ ಆರೋಗ್ಯ ಸೂತ್ರ, ಡಾ.ಬಿ.ಎಂ.ಹೆಗಡೆ ಹೇಳುವ ಅಂತರ್ಗತ ದೈಹಿಕ  ಪ್ರಕ್ರಿಯೆಗಳ ಪರಮ ಸತ್ಯ ಅರ್ಥವಾಗದಿರುವುದೇ ಈ ಹೊತ್ತಿನ ಸಮಸ್ಯೆಗಳ ಕಾರಣ. ಜೊತೆಗೆ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಪದ್ಧತಿಗಳು ಅಲೋಪತಿಗಿಂತ ಉತ್ತಮವಾಗಿ ಹೆಚ್ಚಿನ ಸೈಡ್ ಎಫೆಕ್ಟುಗಳಿಲ್ಲದೇ ನಮ್ಮ ಖಾಯಿಲೆಯನ್ನು ಗುಣ ಮಾಡಬಲ್ಲವೆಂಬ ಅರಿವು ಮೂಡಿಸಲು ಸರ್ಕಾರದ ಪ್ರಯತ್ನವೂ ಬೇಕಿದೆ.

Share:

ಭಾನುವಾರ, ಜೂನ್ 18, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವ

Arsikere


ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೯೩೯ನೇ ಶ್ರೀ ಹೇವಿಳಂಬಿನಾಮ ಸಂವತ್ಸರದ ಆಶಾಢ ಶುಧ್ಧ ಪಂಚಮಿ ದಿನಾಂಕ 28-06-2017ನೇ ಬುಧವಾರದಿಂದ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವವು ಪ್ರಾರಂಭವಾಗಿ ಆಶಾಢ ಬಹುಳ ಪಂಚಮಿ ದಿನಾಂಕ 14-07-2017 ನೇ ಶುಕ್ರವಾರದ ವರೆಗೆ ಜರುಗಲಿದೆ.

ಆಶಾಢ ಶುದ್ಧ ದ್ವಾದಶಿ ದಿನಾಂಕ 05-07-2017ನೇ ಬುಧವಾರದಂದು ಸುರ್ಯೋದಯಾದಿ 11.00 ರಿಂದ 12.30 ಗಂಟೆಯ ಒಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ, ವೈಖಾನಸಾಗಮ ರೀತ್ಯ, ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ "ಮಹಾ ರಥೋತ್ಸವ"  ಹಾಗೂ ವಿವಿಧ ಸೇವೆಗಳನ್ನು ನಡೆಸಲು ಶ್ರೀಯವರ ಕೃಪೆಯಿಂದ ಸಂಕಲ್ಪಿಸಿರುತ್ತದೆ.

ಈ ಮಹೋತ್ಸವಗಳಿಗೆ ತಾವು ಕುಟುಂಬ ಸಮೇತರಾಗಿ ಬಂದು ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಸೇವೆ ಮಾಡಿ, ಮನೋಭೀಷ್ಠವನ್ನು ಪಡೆದು ಕೃತಾರ್ಥರಾಗಬೇಕೆಂದು ಕೋರಲಾಗಿದೆ.
ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವ

Share:

ಗುರುವಾರ, ಜೂನ್ 15, 2017

ಹೃದಯದ ಆಕಾರದಲ್ಲಿ ಕಾಣುವ ಅರಸೀಕೆರೆ ಯಾದಾಪುರ ಜೇನುಕಲ್ ಬೆಟ್ಟ

Arsikere


ತರ್ಕಕ್ಕೆ ನಿಲುಕದ ಅನೇಕ ವಿಸ್ಮಯಗಳನ್ನು ಪ್ರತಿನಿತ್ಯ ನಾವುಗಳು ನೋಡುತ್ತಿರುತ್ತೇವೆ.  ಅವುಗಳಲ್ಲಿ ಕೆಲವನ್ನು ನಂಬಲೂ ಅಸಾಧ್ಯವಾಗಿರುವಂತಿರುತ್ತವೆ.  ಅಂತಹುದೇ ವಿಸ್ಮಯವನ್ನು ನಮ್ಮ ಅರಸೀಕೆರೆ ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳವಾದ ಯಾದಾಪುರ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಪವಿತ್ರ ಬೆಟ್ಟದಲ್ಲಿ ಕಾಣಬಹುದು.

ಟಚ್ ಸ್ಕ್ರೀನ್ ಉಳ್ಳ ಮೊಬೈಲ್ ಫೋನಿನಲ್ಲಿರುವ ಗೂಗಲ್ ಮ್ಯಾಪ್ ಮೂಲಕ ಅಥವಾ ಕಂಪ್ಯೂಟರಿನಲ್ಲಿ ಗೂಗಲ್ ಅರ್ಥ್ ಮೂಲಕ ಯಾದಾಪುರ ಬೆಟ್ಟವನ್ನು ಒಂದು ಭಾಗದಿಂದ ನೋಡಿದರೆ ಹೃದಯದ ಆಕೃತಿಯಂತೆ ಕಾಣುತ್ತದೆ, ಮತ್ತೊಂದು ಭಾಗದಿಂದ ಜೇನುಗೂಡಿನಂತೆಯೂ ಕಾಣುತ್ತದೆ.

ಲಕ್ಷಾಂತರ ಭಕ್ತರ ಹೃದಯಲ್ಲಿ ನೆಲಸಿರುವ ಆರಾಧ್ಯದೈವ ಶ್ರೀ ಜೇನುಕಲ್ಲು ಸಿದ್ದೇಶ್ವರ ಸಾಮಿಯ ಬೆಟ್ಟವು ಹೃದಯದ ಆಕಾರದಲ್ಲೇ ಕಾಣುವುದು ಒಂದು ವಿಸ್ಮಯವೇ ಸರಿ.

ನಿಮ್ಮ ಮೊಬೈಲಿನಲ್ಲಿರುವ ಗೂಗಲ್ ಮ್ಯಾಪ್ ನಿಂದ ನೀವೂ ಒಮ್ಮೆ ನೋಡಿ.


Share:

ನೀರಿಗಾಗಿ ಅರಣ್ಯ - ಬೀಜ ಪ್ರಸರಣ ಕಾರ್ಯಕ್ರಮ

Arsikere


ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ನಾಳೆ (ದಿನಾಂಕ 16-06-2017, ಶುಕ್ರವಾರದಂದು) ಬೆಳಿಗ್ಗೆ 9 ಗಂಟೆಗೆ, ಅರಸೀಕೆರೆ ತಾಲ್ಲೂಕು ರಾಮೇನಹಳ್ಳಿಯ ಒಬಲಾಯನ ಕೆರೆ ಆವರಣದಲ್ಲಿ  ಬೆಂಗಳೂರಿನ ನೇಯೋಟ್ ಸಂಸ್ಥೆ ಹಾಗೂ ಅರಸೀಕೆರೆ ತಾಲ್ಲೂಕು ಅರಣ್ಯ ಇಲಾಖೆಯ ಸಹಯೋಗದಲ್ಲಿ  ಜಲ ಸಂರಕ್ಷಣೆಗಾಗಿ ಬೀಜ ಪ್ರಸರಣ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಜಿ.ವಿ. ಆನಂದ ಮೂರ್ತಿ, ಕಥೆಗಾರರು ತುಮಕೂರು ಇವರು ನೆರವೇರಿಸಲಿದ್ದಾರೆ.  ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ. ಎಂ.ಎಲ್.ಮಂಜುನಾಥ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಚನ್ನರಾಯಪಟ್ಟಣ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ.ಡಿ. ತಮ್ಮಯ್ಯನವರು, ಸಾಮಾಜಿಕ ಅರಣ್ಯ ಉಪವಿಭಾಗ ಅರಸೀಕೆರೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ. ವಿಲಿಯಂ ಪ್ರಾನ್ಸಿಸ್ ಹಾಗೂ ಅರಸೀಕೆರೆ ಪಟ್ಟಣದ ಆಫೀಸರ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ. ಎನ್.ವೆಂಕಟೇಶ್ ರವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


Share:

ಶನಿವಾರ, ಜೂನ್ 10, 2017

ಅರಸೀಕೆರೆ ತಾಲ್ಲೂಕಿನಲ್ಲಿ ವಸತಿಶಾಲೆ ಪ್ರಾರಂಭ

Arsikere


ಪ್ರಸಕ್ತ ವರ್ಷದಲ್ಲಿ ಅರಸೀಕೆರೆ ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಎರಡು ವಸತಿ ಶಿಕ್ಷಣ ಶಾಲೆಗಳನ್ನು ನಗರದ ಖಾಸಗಿ ಕಟ್ಟಡದಲ್ಲಿ ಪ್ರಾರಂಭ ಮಾಡಲಾಯಿತು, ಶಾಸಕ ಕೆ.ಎಂ.ಶಿವಲಿಂಗೇಗೌಡ ಉದ್ಘಾಟನೆ ಮಾಡಿದರು, ತಾ.ಪಂ.ಅದ್ಯಕ್ಷೆ ಮಂಜುಳಾಬಾಯಿ, ಜಿ.ಪಂ‌.ಮಾಜಿ ಉಪಾಧ್ಯಕ್ಷ ಬಿಳಿಚೌಡಯ್ಯ, ಮುಖಂಡರಾದ ಗೀಜಿಹಳ್ಳಿ ಧರ್ಮಶೇಕರ್, ಯಳವಾರೆ ಕೇಶವಣ್ಣ,ನಾಗಣ್ಣ ಇತರರು ಹಾಜರಿದ್ದರು, ಪ್ರಭಾರಿ ಪ್ರಾಂಶುಪಾಲ ಜಯಪ್ರಕಾಶ್ ಇದ್ದರು, ಡಾ.ಬಿ.ಆರ್.ಅಂಬೇಡ್ಕರ್ ವಸತಿ  ಶಾಲೆ, ಬಾಗೇಶಪುರ ಇದನ್ನು ಸೇವಲಾಲ್ ಭವನ ಅರಸೀಕೇರೆ ಮತ್ತು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ,ರಾಮೇನಹಳ್ಳಿ ಇದನ್ನು ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿದೆ           

ಚಿತ್ರ ಮಾಹಿತಿ : ಲಕ್ಷ್ಮೀಶ್ ಬಾಬು
ಅರಸೀಕೆರೆ ತಾಲ್ಲೂಕಿನಲ್ಲಿ ಅಂಬೇಡ್ಕರ್ ವಸತಿಶಾಲೆ ಪ್ರಾರಂಭ

ಅರಸೀಕೆರೆ ತಾಲ್ಲೂಕಿನಲ್ಲಿ ಅಂಬೇಡ್ಕರ್ ವಸತಿಶಾಲೆ ಪ್ರಾರಂಭ

ಅರಸೀಕೆರೆ ತಾಲ್ಲೂಕಿನಲ್ಲಿ ಅಂಬೇಡ್ಕರ್ ವಸತಿಶಾಲೆ ಪ್ರಾರಂಭ

ಅರಸೀಕೆರೆ ತಾಲ್ಲೂಕಿನಲ್ಲಿ ಅಂಬೇಡ್ಕರ್ ವಸತಿಶಾಲೆ ಪ್ರಾರಂಭ

Share:

ಸೋಮವಾರ, ಜೂನ್ 5, 2017

ಅರಸೀಕೆರೆಯ ವೃಕ್ಷಮಿತ್ರ : ಶ್ರೀ. ಕೆ.ಮಂಜುನಾಥ್

Arsikere

ಇಂದು ವಿಶ್ವ ಪರಿಸರ ದಿನಾಚರಣೆ, ಇದರ ನಿಮಿತ್ತ ಜಗತ್ತಿನಾದ್ಯಂತ ಅನೇಕ ಕಾರ್ಯಕ್ರಮಗಳು ಜರುಗುತ್ತವೆ. ಕೆಲವು ವ್ಯಕ್ತಿಗಳು ಇಂದು ಒಂದೋ ಎರಡೋ ಗಿಡ ನೆಟ್ಟು ಫೋಟೋ ತೆಗೆಸಿಕೊಂಡು ಫೇಸ್ ಬುಕ್, ವ್ಯಾಟ್ಸಪ್ ಗಳಲ್ಲಿ ಶೇರ್ ಮಾಡಿಕೊಂಡು ಕೇವಲ ಪ್ರಚಾರ ಪಡೆಯಲು ಹಾತೊರೆಯುತ್ತಾರೆ. ನಾಳೆಯಿಂದ ಅವರು ನೆಟ್ಟ ಗಿಡಕ್ಕೆ ಒಂದು ಬೊಗಸೆ ನೀರನ್ನೂ ಹಾಕದೇ ಜಾಣ ಮರೆವು ತೋರುತ್ತಾರೆ.  ಆದರೆ ಇನ್ನು ಕೆಲವು ವ್ಯಕ್ತಿಗಳು ಎಲೆಮರೆ ಕಾಯಿಯಂತೆ ಯಾವುದೇ ಪ್ರಚಾರದ ಹಂಗಿಲ್ಲದೆ ಪರಿಸರ ಸಂರಕ್ಷಣೆ ಹಾಗೂ ಗಿಡಮರ ಪೋಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಅರಸೀಕೆರೆ ಪಟ್ಟಣದಲ್ಲೂ ಎಲೆಮರೆ ಕಾಯಂತೆ, ಪರಿಸರ ಸಂರಕ್ಷಣೆಯನ್ನು ಮಾಡುತ್ತಿರುವ ವ್ಯಕ್ತಿಯೊಬ್ಬರಿದ್ದಾರೆ.  ಅವರೇ ಶ್ರೀ. ಕೆ.ಮಂಜುನಾಥ್, ಪಟ್ಟಣದ ಮಾರುತಿ ನಗರದ ನಿವಾಸಿಯಾಗಿರುವ ಮಂಜುನಾಥ್ ರವರು ಕಳೆದ ಐದಾರು ತಿಂಗಳಿಂದ ಕಂತೇನಹಳ್ಳಿ ಕೆರೆ ಪಾರ್ಕಿನ ನಿರ್ವಹಣೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಶಾಸಕ ಕೆ.ಎಂ.ಶಿವಲಿಂಗೇಗೌಡರ ಪ್ರಯತ್ನದ ಫಲವಾಗಿ ಕೆಲ ವರ್ಷಗಳ ಹಿಂದೆ ಅರಸೀಕೆರೆ ಕಂತೇನಹಳ್ಳಿ ಕೆರೆಯ ಬದಿಯಲ್ಲಿ ಉದ್ಯಾನವನವನ್ನು ನಿರ್ಮಾಣ ಮಾಡಲಾಯಿತು.  ಆದರೆ ಸೂಕ್ತ ನಿರ್ವಹಣೆ ಇಲ್ಲದೇ ಪಾರ್ಕಿನಲ್ಲಿ ಪುಂಡ ಪೋಕರಿಗಳು ಇಸ್ಪೀಟ್, ಮದ್ಯಪಾನ ಇತ್ಯಾದಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದರು.  ವಾಯುವಿಹಾರಕ್ಕಾಗಿ ಬರುವ ಸಾರ್ವಜನಿಕರುಗಳಿಗೆ ಇದರಿಂದ ಕಿರಿಕಿರಿಯಾಗುತ್ತಿದ್ದರೂ, ಸಹಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿತ್ತು.  ಪಾರ್ಕಿನ ಗಿಡ ಮರಗಳಿಗೆ ಸೂಕ್ತ ನಿರ್ವಹಣೆ ಇಲ್ಲದೇ ಕೆಲವು ಗಿಡಗಳು ಒಣಗಿಹೋಗಿದ್ದವು, ಪಾರ್ಥೇನಿಯಂ, ಲಾಂಟಾನ, ಬಳ್ಳಾರಿ ಜಾಲಿ ಗಿಡಗಳು ಎಲ್ಲಂದರಲ್ಲಿ ಬೆಳೆದು ಪಾರ್ಕಿನ ಗುಣಮಟ್ಟವನ್ನೇ ಹಾಳುಮಾಡಿತ್ತು.   ಇಂತಹ ಸಂದರ್ಭದಲ್ಲಿ ಅರಸೀಕೆರೆ ನಗರಸಭೆ ಆಡಳಿತಕ್ಕೆ ಒಳಪಟ್ಟಿರುವ, ಕಂತೇನಹಳ್ಳಿ ಪಾರ್ಕಿನ ಉಸ್ತುವಾರಿಯ ಹೊಣೆ ಹೊತ್ತ ಮಂಜುನಾಥ್ ರವರು, ತಮ್ಮ ಸಹಾಯಕರುಗಳಾದ ಶಿವಶಂಕರಪ್ಪ, ಪಾಪಣ್ಣ, ಮಲ್ಲಿಕಾರ್ಜುನ ಮತ್ತು ಲೋಕೇಶ್ ರವರುಗಳ ಜೊತೆ ಪ್ರತಿನಿತ್ಯ ಪಾರ್ಕಿನ ನಿರ್ವಹಣೆಯನ್ನು ಪ್ರಾರಂಭಿಸಿದರು.  ಮೊದಲಿಗೆ ಪಾರ್ಕಿನಲ್ಲಿರುವ ಸುಮಾರು 2 ಕಿ.ಮೀ ಉದ್ದದ ವಾಕಿಂಗ್ ಪಾಥ್ ನ ಎರಡೂ ಬದಿಗಳಲ್ಲಿ ಬೆಳೆದಿದ್ದ ಕಳೆಗಳನ್ನು ಕಿತ್ತುಹಾಕಿದರು. ಪಾರ್ಕಿನಲ್ಲಿ ಲಭ್ಯವಿದ್ದ ಸಲಕರಣೆಗಳ ಸಹಾಯದಿಂದ, ನಿರ್ವಹಣೆ ಇಲ್ಲದೇ ಸೊರಗಿದ್ದ ಗಿಡಗಳ ಪೋಷಣೆ ಪ್ರಾರಂಭಿಸಿದರು.  ದಿನದಿನ ಕಳೆದಂತೆ, ಪಾರ್ಕಿಗೆ ಕಳೆ ಬರುವಂತಾಯಿತು.

ಕಳೆದ ಒಂದು ವಾರದಲ್ಲಿ, ಕೆರೆ ಪಾರ್ಕಿನ ಆವರಣದಲ್ಲಿ ವಿವಿಧ ಜಾತಿಯ ಸುಮಾರು 700 ಗಿಡಗಳನ್ನು ನೆಡಲಾಗಿದೆ, ಹಾಗೂ ಮುಂಬರುವ ದಿನಗಳಲ್ಲಿ ಪಾರ್ಕಿನಲ್ಲಿ ಇನ್ನೂ 500 ಗಿಡಗಳನ್ನು ನೆಡುವ ಗುರಿಯನ್ನು ಮಂಜುನಾಥ್ ರವರು ಹೊಂದಿದ್ದಾರೆ.  ಇವರಿಂದಾಗಿ, ಪಾರ್ಕಿನಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳು ನಿಂತುಹೋಗಿವೆ.  ಇದೀಗ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಅರಸೀಕೆರೆ ನಗರ ಠಾಣೆ ಪೊಲೀಸರು ಪಾರ್ಕಿನಲ್ಲಿ ಬೀಟ್ ನಡೆಸುತ್ತಿದ್ದು, ಪಾರ್ಕಿನಲ್ಲಿ ಯಾವುದೇ ಪುಂಡ ಪೋಕರಿಗಳು ಸುಳಿಯದಂತಾಗಿರುವುದರಿಂದ, ವಾಯು ವಿಹಾರಿಗಳು ಅತ್ಯಂತ ಸಂತಸಗೊಂಡಿದ್ದಾರೆ.

ಪಾರ್ಕಿನಲ್ಲಿ, ಸಂಜೆಯ ವೇಳೆಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಇದ್ದರೂ, ಈಗ ಅವುಗಳಲ್ಲಿ ಕೆಲವು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.  ಈ ಕುರಿತು ನಗರಸಭೆಯ ಅಧಿಕಾರಿಗಳು ಗಮನ ಹರಿಸಿ, ಪಾರ್ಕಿನ ಎಲ್ಲ ದೀಪಗಳನ್ನು ದುರಸ್ತಿ ಮಾಡಿಸಿದರೆ ಪಾರ್ಕಿಗೆ ಮತ್ತಷ್ಟು ಕಳೆ ಕಟ್ಟುತ್ತದೆ. ಹಾಗೂ ಈಗ ನೆಟ್ಟಿರುವ ಗಿಡಗಳಿಗೆ ಹನಿ ನೀರಾವರಿ ಹಾಗೂ ಸ್ಪ್ರಿಂಕ್ಲರ್ ವ್ಯವಸ್ಥೆ ಕಲ್ಪಿಸಿದರೆ ಗಿಡಗಳಿಗೂ ಅನುಕೂಲವಾಗಲಿದೆ.

ವಿಶ್ವ ಪರಿಸರ ದಿನಾಚರಣೆಯ ಈ ದಿನದಂದು, ಅರಸೀಕೆರೆ ಕಂತೇನಹಳ್ಳಿ ಕೆರೆ ಪಾರ್ಕಿನ ಎಲ್ಲ ವಾಯುವಿಹಾರಿಗಳ ಪರವಾಗಿ ಶ್ರೀ.ಕೆ.ಮಂಜುನಾಥ್ ಮತ್ತು ತಂಡದವರಿಗೆ ಅಭಿನಂದನೆಗಳು.


ಅರಸೀಕೆರೆಯ ವೃಕ್ಷಮಿತ್ರ : ಶ್ರೀ. ಕೆ.ಮಂಜುನಾಥ್

ಅರಸೀಕೆರೆ ನಗರ ಠಾಣೆ ಪೊಲೀಸರು ಪಾರ್ಕಿನಲ್ಲಿ ಬೀಟ್ ನಡೆಸುತ್ತಿರುವುದು

ಹೊಸ ಗಿಡಗಳು

Share:

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ

Arsikere


ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ ಅರಸೀಕೆರೆ ಪಟ್ಟಣದ ಮಾರುತಿ ನಗರ ಬಡಾವಣೆಯಲ್ಲಿ ನಗರಸಭೆ ವತಿಯಿಂದ ಪರಿಸರ ಜಾಗೃತಿಯನ್ನು ಮೂಡಿಸಲು ಮನೆಮನೆ ಅಭಿಯಾನ ಆಯೋಜಿಸಲಾಗಿತ್ತು.  ಪೌರ ಕಾರ್ಮಿಕರುಗಳು ಪ್ರತಿ ಮನೆಗೆ ತೆರೆಳಿ, ತ್ಯಾಜ್ಯ ಕಸ ವಿಂಗಡನೆ ಮಾಡುವ ಕರಪತ್ರಗಳನ್ನು ವಿತರಿಸಿ, ಕಸವನ್ನು ಎಲ್ಲೆಂದರಲ್ಲಿ ಹಾಕದೇ, ಮನೆಮುಂದೆ ಬರುವ ತ್ಯಾಜ್ಯ ಸಂಗ್ರಹಣಾ ಆಟೋಗೆ ನೀಡಿ ಅರಸೀಕೆರೆಯನ್ನು ಮಾಲಿನ್ಯ ಮುಕ್ತ ನಗರವನ್ನಾಗಿಸುವಂತೆ ಸಾರ್ವಜನಿಕರುಗಳಿಗೆ ಮನವಿ ಮಾಡಿಕೊಂಡರು.


ಅರಸೀಕೆರೆ ಪಟ್ಟಣದ ರೋಟರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ, ಪರಿಸರ ಸಂರಕ್ಷಣೆಯ ಘೋಷಣೆಗಳನ್ನು ಕೂಗಿ, ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ


Share:

ಶುಕ್ರವಾರ, ಜೂನ್ 2, 2017

ಅರಸೀಕೆರೆ ತಾಲ್ಲೂಕಿನ 530 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಭೂಮಿಪೂಜೆ

Arsikere

  
ಅರಸೀಕೆರೆ ತಾಲೋಕಿನ ಒಟ್ಟು 530 ಹಳ್ಳಿಗಳಿಗೆ ರೂ.254 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಮೊದಲ ಹಂತವಾಗಿ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಾಣ ಕಾಮಗಾರಿಯ ಭೂಮಿಪೂಜೆಯನ್ನು, ಅರಸೀಕೆರೆ ಕಸಬಾ ಹೋಬಳಿ ಬೆಳಗುಂಬ ಗ್ರಾಮ ಪಂಚಾಯತಿ ಬಸವನಹಟ್ಟಿ ಗ್ರಾಮದ ಬಳಿ ಶಾಸಕ ಕೆ.ಎಂ.ಶಿವಲಿಂಗೇಗೌಡ ನೆರವೇರಿಸಿದರು. ಮುಖಂಡರಾದ ಗೀಜಿಹಳ್ಳಿ ಧರ್ಮಶೇಕರ,ಬೆಳಗುಂಬ ಬಾಬು,ಧರ್ಮಣ್ಣ, ಇನ್ನಿತರೆ ಮುಖಂಡರು ಮತ್ತು ಗ್ರಾಮಸ್ಥರು, ಹಾಗೂ ಕಾಮಗಾರಿಯ ಗುತ್ತಿಗೆ ಪಡೆದಿರುವ ಮೆಗಾ ಕಂಪನಿಯ ಪಾಟೀಲ್ ರವರು ಹಾಜರಿದ್ದರು.

ಈ ಯೋಜನೆಯಲ್ಲಿ ತಾಲ್ಲೋ‌ಕಿನಾದ್ಯಂತ ಸೂಕ್ತ ಸ್ಥಳಗಳಲ್ಲಿ ನೀರಿನ ಸಂಗ್ರಹಣಾ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಿ ಅವುಗಳ ಮುಖಾಂತರ ಎಲ್ಲಾ ಗ್ರಾಮಗಳಿಗೆ ಹೇಮಾವತಿ ನದಿ ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುವುದು


ಅರಸೀಕೆರೆ ತಾಲ್ಲೂಕಿನ 530 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಭೂಮಿಪೂಜೆ

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....