ಸೋಮವಾರ, ಫೆಬ್ರವರಿ 19, 2018

ಶ್ರವಣಬೆಳಗೊಳದಲ್ಲಿ ಪ್ರಧಾನಿ ಮೋದಿ

ಶ್ರವಣಬೆಳಗೊಳದಲ್ಲಿ ಪ್ರಧಾನಿ ಮೋದಿ

ಮಹಾಮಸ್ತಕಾಭಿಷೇಕದ ಅಂಗವಾಗಿ ಶ್ರವಣಬೆಳಗೊಳದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿರವರು ಪಾಲ್ಗೊಂಡಿದ್ದರು.  ಇಂದು ಮಧ್ಯಾನ್ಹ 1.50ಕ್ಕೆ ಚಾವುಂಡರಾಯ ವೇದಿಕೆಗೆ ಆಗಮಿಸಿದ ಪ್ರಧಾನಿಗಳು ಮೊದಲಿಗೆ ವೇದಿಕೆಯ ಎಡಭಾಗದಲ್ಲಿದ್ದ ಮುನಿಗಳಿಗೆ, ಆಚಾರ್ಯರಿಗೆ ಹಾಗೂ ಬಲಭಾಗದಲ್ಲಿದ್ದ ಮಾತಾಜಿಗಳಿಗೆ ನಮಸ್ಕರಿಸಿ ನಂತರ ಸಭಿಕರಿಗೆ ನಮಸ್ಕರಿಸಿದರು. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎ.ಮಂಜು ರವರು ಸ್ವಾಗತಭಾಷಣ ಮಾಡಿದರು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಆಶೀರ್ವಚನ ನೀಡಿದರು. ನಂತರ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟಕ್ಕೆ ನೂತನವಾಗಿ ನಿರ್ಮಿಸಿರುವ 630 ಮೆಟ್ಟಿಲುಗಳನ್ನು ಹಾಗೂ ಬಾಹುಬಲಿ ಜನರಲ್ ಆಸ್ಪತ್ರೆಯನ್ನು ಶ್ರೀ ನರೇಂದ್ರ ಮೋದಿ ರವರು ಲೋಕಾರ್ಪಣೆ ಮಾಡಿದರು.  ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಪ್ರಧಾನಿಗಳನ್ನು ಸನ್ಮಾನಿಸಿದರು. ನಂತರ ಸಭೆಯನ್ನುದೇಶಿಸಿ ಪ್ರಧಾನಿಗಳು ಮಾತನಾಡಿದರು. 2.40ಕ್ಕೆ ಕಾರ್ಯಕ್ರಮ ಮುಕ್ತಾಯಗೊಂಡಿತು. ವೇದಿಕೆಯಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ವಜುಭಾಯಿವಾಲ, ಕೇಂದ್ರ ಸಚಿವರುಗಳಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಮಹೇಶ್ ಶರ್ಮ ಸೇರಿದಂತೆ ಗಣ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಇವತ್ತು ಚಾವುಂಡರಾಯ ವೇದಿಕೆಯ ಸುತ್ತಮುತ್ತ ಎಸ್.ಪಿ.ಜಿ ಕಮಾಂಡೋಗಳ ಸರ್ಪಗಾವಲು ಮಾಡಲಾಗಿತ್ತು.  ಕಾರ್ಯಕ್ರಮದ ಜಾಗಕ್ಕೆ ಬ್ಯಾಗುಗಳು, ನೀರಿನ ಬಾಟಲ್ ಸೇರಿದಂತೆ ಅನೇಕ ರೀತಿಯ ವಸ್ತುಗಳನ್ನು ತರದಂತೆ ನಿರ್ಬಂಧ ಮಾಡಲಾಗಿತ್ತು.  ಪ್ರತಿಯೊಬ್ಬರನ್ನು ಸಂಪೂರ್ಣವಾಗಿ ಪರಿಶೀಲಿಸಿ ಒಳಕ್ಕೆ ಕಳಿಸಲಾಗುತ್ತಿತ್ತು.

Share:

ಶನಿವಾರ, ಫೆಬ್ರವರಿ 17, 2018

ವೈರಾಗ್ಯ ಮೂರ್ತಿಗೆ 88ನೇ ಮಹಾಮಸ್ತಕಾಭಿಷೇಕ

ವೈರಾಗ್ಯ ಮೂರ್ತಿಗೆ 88ನೇ ಮಹಾಮಸ್ತಕಾಭಿಷೇಕ

ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಶನಿವಾರ ಸಂಭ್ರಮ ಮನೆಮಾಡಿತ್ತು. ಜಗತ್ತಿನ ಅತಿದೊಡ್ಡ ಏಕಶಿಲಾ ಮುರ್ತಿ ಭಗವಾನ್ ಬಾಹುಬಲಿ ಸ್ವಾಮಿಯ ವಿಗ್ರಹಕ್ಕೆ ಹನ್ನೆರಡು ವರ್ಷಗಳ ನಂತರ ನಡೆಯುವ ಮಹಾ ಮಜ್ಜನಕ್ಕೆ ಜಗತ್ತಿನ ಮೂಲೆ ಮೂಲೆಗಳಿಂದ ಜನಸಾಗರ ಹರಿದುಬಂದಿತ್ತು. ಜರ್ಮನ್ ತಂತ್ರಜ್ಞಾನದಿಂದ ನಿರ್ಮಿಸಿದ್ದ ಅಟ್ಟಣಿಗೆಯ ಮೇಲೆ ಕುಳಿತಿದ್ದ ಐದು ಸಾವಿರಕ್ಕೂ ಅಧಿಕ ಜನ ಪ್ರಥಮ ಕಳಶದಲ್ಲಿ ಬಾಹುಬಲಿಯ ಮಸ್ತಕದ ಮೇಲೆ ಬೀಳುವ ಪವಿತ್ರ ಜಲವನ್ನು ನೋಡುವ ಕುತೂಹಲದಲ್ಲಿದ್ದರು.
ಬೆಳಿಗ್ಗೆಯಿಂದಲೇ ವಿಂಧ್ಯಗಿರಿ ಬೆಟ್ಟದ ಮೇಲೆ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಿದ್ದವು. ಬಾಹುಬಲಿಯ ಮೂರ್ತಿಯ ಮುಂಭಾಗದಲ್ಲಿ ನಿರ್ಮಿಸಿದ್ದ ಮಂಡಲದಲ್ಲಿ 108 ಕಳಶಗಳನ್ನು ಸ್ಥಾಪಿಸಲಾಗಿತ್ತು. ಪ್ರಥಮ ಕಳಸವನ್ನು 11.60 ಕೋಟಿ ರೂಪಾಯಿಗಳಿಗೆ ರಾಜಸ್ಥಾನದ ಅಶೋಕ್ ಪಾಟ್ನಿ ಕುಟುಂಬದವರು ಖರೀದಿಸಿದ್ದರು. ಈ ಹಣದಲ್ಲಿ ಶ್ರವಣಬೆಳಗೊಳದಲ್ಲಿ 200 ಹಾಸಿಗೆ ಉಳ್ಳ ಸುಸಜ್ಜಿತ ಆಸ್ಪತ್ರೆಯನ್ನು ಕಟ್ಟಲಾಗುವುದೆಂದು ಭಟ್ಟಾರಕ ಸ್ವಾಮಿಗಳು ತಿಳಿಸಿದರು.

ಮಧ್ಯಾನ್ಹ 2.30 ರ ಸಮಯಕ್ಕೆ ಗೊಮ್ಮಟನ ಹಿಂಭಾಗದ ಅಟ್ಟಣಿಗೆಗೆ ಆಗಮಿಸಿದ ಪಾಟ್ನಿ ಕುಟುಂಬದವರು, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳ ಮಾರ್ಗದರ್ಶನದಂತೆ ಬಾಹುಬಲಿಗೆ ಪವಿತ್ರ ಜಲದಿಂದ ಅಭಿಷೇಕ ನೆರವೇರಿಸಿದರು. ಇದಾದ ನಂತರ, ಉಳಿದ ಕಳಸಗಳನ್ನು ಖರೀದಿಸಿದವರು ಒಬ್ಬರನಂತರ ಒಬ್ಬರಂತೆ ಪವಿತ್ರ ಜಲಾಭಿಷೇಕ ನೆರವೇರಿಸಿದರು.
ಬಾಹುಬಲಿಗೆ ಜಲಾಭಿಷೇಕವನ್ನು ಮಾಡಲು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರಿಗಾಗಿ ನಿರ್ಮಿಸಿದ್ದ ವಿಶೇಷ ಡೋಲಿ ವ್ಯವಸ್ಥೆಯನ್ನು ನಿರಾಕರಿಸಿ 630 ಮೆಟ್ಟಿಲುಗಳ ಬೆಟ್ಟವನ್ನು ಹತ್ತಿ ಬಂದರು. ಅಟ್ಟಣಿಗೆಯನ್ನೇರಿದ ಮುಖ್ಯಮಂತ್ರಿಗಳು ಬಾಹುಬಲಿಗೆ ಜಲಾಭಿಷೇಕ ಮಾಡಿದರು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು, ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಸಚಿವೆ ಉಮಾಶ್ರೀ ಸೇರಿದಂತೆ ಅನೇಕ ಗಣ್ಯರು ಮುಖಮಂತ್ರಿಗಳ ಜೊತೆ ಇದ್ದರು.

ಜಲಾಭಿಷೇಕಗಳು ಮುಕ್ತಾಯಗೊಂಡ ನಂತರ ಬಾಹುಬಲಿಗೆ ಎಳೆನೀರು, ಕಬ್ಬಿನಹಾಲು, ಹಾಲು, ಶ್ವೇತ ಕಲ್ಕಚೂರ್ಣ, ಅರಿಶಿಣ, ಗಿಡಮೂಲಿಕೆಗಳ ಕಷಾಯ, ಚತುಷ್ಕೋನ ಕಳಶಗಳು, ಶ್ರೀಗಂಧ, ಚಂದನ, ಅಷ್ಟಗಂಧ, ಕೇಸರ ಗಳಿಂದ ಅಭಿಷೇಕ ಮಾಡಲಾಯಿತು, ರಜತ, ಸುವರ್ಣ ವೃಷ್ಟಿ, ಪುಷ್ಪವೃಷ್ಟಿಗಳನ್ನು ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು.

ಚಿತ್ರಗಳು : ಶ್ರೀರಾಮ ಜಮದಗ್ನಿ
ಅವಿಸ್ಮರಣೀಯ ಕ್ಷಣ

ಹನ್ನೆರಡು ವರ್ಷಗಳಿಂದ ಜಗತ್ತಿನಾದ್ಯಂತ ಅನೇಕ ಭಕ್ತರು, ಸಾರ್ವಜನಿಕರು ಕಾಯುತ್ತಿದ್ದ ಆ ಅದ್ಭುತ ಗಳಿಗೆ....
ಪ್ರಥಮ ಕಳಶದ ನೀರು ಭಗವಾನ್ ಬಾಹುಬಲಿ ಮೂರ್ತಿಯ ಮಸ್ತಕದ ಮೇಲೆ ಬಿದ್ದ ಕ್ಷಣ
ಜಿಲ್ಲಾ ಉಸ್ತುವಾರಿ ಸಚಿವರಿಂದ ಜಲಾಭಿಷೇಕ

ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪಶುಸಂಗೋಪನಾ ಸಚಿವರಾದ ಶ್ರೀ ಎ.ಮಂಜುರವರು ತಮ್ಮ ಧರ್ಮಪತ್ನಿಯೊಡನೆ ಬಾಹುಬಲಿಗೆ ಜಲಾಭಿಷೇಕ ನೆರವೇರಿಸಿದರು.
ರಾಜರ್ಷಿಯಿಂದ ಜಲಾಭಿಷೇಕ

ಮಾತನಾಡುವ ಮಂಜುನಾಥ.... ರಾಜರ್ಷಿ ಪದ್ಮವಿಭೂಷಣ ಪರಮಪೂಜ್ಯ ಶ್ರೀ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಬಾಹುಬಲಿಗೆ ಪವಿತ್ರ ಜಲಾಭಿಷೇಕ
ಮನ್ಮಥನ ಮಸ್ತಕದಿಂದ ಚಿಮ್ಮಿದ ಪವಿತ್ರ ಜಲಧಾರೆ

ಬಾಹುಬಲಿ ಮಹಾಮಸ್ತಕಾಭಿಷೇಕವನ್ನು ಚಂದ್ರಗಿರಿ ಬೆಟ್ಟದಿಂದ ನೋಡುತ್ತಿರುವ ಭಕ್ತರು

ಮುಖ್ಯ ಮಂತ್ರಿಗಳಿಂದ ಜಲಾಭಿಷೇಕ

ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಂದ ಜಲಾಭಿಷೇಕ

ಮುಖ್ಯಮಂತ್ರಿಗಳಿಗೆ ಆಶೀರ್ವಾದ

ಬಾಹುಬಲಿಗೆ ಜಲಾಭಿಷೇಕ ನೆರವೇರಿಸಿದ ನಂತರ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರು ಮಹಾಮಸ್ತಕಾಭಿಷೇಕದ ಆಚಾರ್ಯತ್ವ ವಹಿಸಿರುವ ಪರಮಪೂಜ್ಯ ವರ್ಧಮಾನ ಸಾಗರ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು

ಪವಿತ್ರ ಜಲಾಭಿಷೇಕ
ಎಳನೀರಿನ ಅಭಿಷೇಕ

ಬಾಹುಬಲಿಗೆ ಎಳನೀರಿನ ಅಭಿಷೇಕ ನೆರವೇರಿಸುತ್ತಿರುವ ರಾಜರ್ಷಿ ಪದ್ಮವಿಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ವಿರಾಟ್ ವಿರಾಗಿಗೆ ಕ್ಷೀರಾಭಿಷೇಕ

ಹಾಲಿನ ಹೊಳೆಯಲ್ಲಿ ಮಿಂದ ಬಾಹುಬಲಿ
ಸಚಿವರ ಕುಟುಂಬ

ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎ.ಮಂಜು ರವರು ತಮ್ಮ ಧರ್ಮಪತ್ನಿ, ಮಗಳು, ಅಳಿಯ ಸೇರಿದಂತೆ ಕುಟುಂಬ ಸಮೇತ ಬಾಹುಬಲಿಯ ಪಾದದ ಬಳಿ ಕುಳಿತು ಮಹಾಮಸ್ತಕಾಭಿಷೇಕ ವೀಕ್ಷಿಸಿದರು

ಪರಮಪೂಜ್ಯ ರಾಜರ್ಷಿ ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆಯವರು

ಛಾಯಾಗ್ರಹಣವೆಂಬ ಹವ್ಯಾಸ

ಈ ಹವ್ಯಾಸಗಳೇ ಹೀಗೆ... ಬಿಡಲು ಆಗುವುದಿಲ್ಲ.

ಪರಮಪೂಜ್ಯ ರಾಜರ್ಷಿ ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಭಾರತದ ಅತ್ಯುತ್ತಮ ಛಾಯಾಗ್ರಾಹರಲ್ಲಿ ಒಬ್ಬರು

ಪೂಜ್ಯರು ಮಹಾಮಸ್ತಕಾಭಿಷೇಕದ ಫೋಟೋ ತೆಗೆಯುತ್ತಿರುವ ದೃಶ್ಯ

ಬೆಂಗಳೂರು ಡಿಸಿಪಿ ಶ್ರೀ. ಜಿನೇಂದ್ರ ಖಣಗಾವಿ, ಪೊಲೀಸ್ ದಕ್ಷಿಣ ವಲಯ, ಮೈಸೂರು ಐಜಿ ಸಾಹೇಬರಾದ ಶ್ರೀ ವಿಫುಲ್ ಕುಮಾರ್ ಮತ್ತು ಮಹಾಮಸ್ತಕಾಭಿಷೇಕ 2018 ರ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಮತಿ ಸರಿತಾ ಜೈನ್ ರವರು
ಶ್ವೇತಕಲ್ಕಚೂರ್ಣಾಭಿಷೇಕ

ಬಂಗಾರದ ಮೂರ್ತಿಯಂತೆ ಕಂಗೊಳಿಸಿದ ಬಾಹುಬಲಿ

ಮಹಾಮಸ್ತಕಾಭಿಷೇಕದ ಉದ್ಘಾಟನೆಯ ದಿನ, ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜರ್ಷಿ ಪದ್ಮವಿಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆಯವರು " ಬಾಹುಬಲಿ ವಿಗ್ರಹವನ್ನು ಚಾವುಂಡರಾಯ ಬಂಗಾರದಲ್ಲಿ ನಿರ್ಮಿಸಿದ್ದರೆ ಇಷ್ಟು ವರ್ಷ ಇರುತ್ತಿತ್ತೋ ಇಲ್ಲವೋ ತಿಳಿಯದು... ಆದರೆ ಆತ ಕಲ್ಲಿನಿಂದ ನಿರ್ಮಿಸಿ ಸಹಸ್ರಸಹಸ್ರ ವರ್ಷಗಳು ಇರುವಂತೆ ಮಾಡಿದ್ದಾನೆ" ಎಂದು ಹೇಳಿದ್ದರು...

ನೆನ್ನೆ ನಡೆದ ಅರಿಶಿಣದ ಅಭಿಷೇಕದ ಸಮಯದಲ್ಲಿ ಬಾಹುಬಲಿಯ ಮೂರ್ತಿ ಅಪ್ಪಟ ಬಂಗಾರದ ವಿಗ್ರಹದಂತೆ ಕಾಣುತ್ತಿತ್ತು.

ಗಿಡಮೂಲಿಕೆಗಳ ಕಷಾಯ

ಭಾರತದ ವಿವಿಧ ಭಾಗಗಳಲ್ಲಿ ದೊರಕುವ ಅಪರೂಪದ ಗಿಡಮೂಲಿಕೆಗಳಿಂದ ತಯಾರಿಸಿರುವ ಕಷಾಯದಿಂದ ಅಭಿಷೇಕ.

ಈ ಅಭಿಷೇಕ ನಡೆಯುವಾಗ ಗಿಡಮೂಲಿಕೆಗಳ ಘಮಘಮಿಸುವ ಸುವಾಸನೆ ಹೊರಬರುತ್ತಿತ್ತು.

ಗಿಡಮೂಲಿಕೆಗಳ ಕಷಾಯ

ಭಾರತದ ವಿವಿಧ ಭಾಗಗಳಲ್ಲಿ ದೊರಕುವ ಅಪರೂಪದ ಗಿಡಮೂಲಿಕೆಗಳಿಂದ ತಯಾರಿಸಿರುವ ಕಷಾಯದಿಂದ ಅಭಿಷೇಕ.

ಈ ಅಭಿಷೇಕ ನಡೆಯುವಾಗ ಗಿಡಮೂಲಿಕೆಗಳ ಘಮಘಮಿಸುವ ಸುವಾಸನೆ ಹೊರಬರುತ್ತಿತ್ತು.

ಚಂದಣದ ಗೊಂಬೆ

ಚಂದಣದ ಅಭಿಷೇಕ ಪ್ರಾರಂಭವಾಗುವ ಹೊತ್ತಿಗೆ ಕತ್ತಲಾಗತೊಡಗಿತ್ತು... ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಡ ಬಾಹುಬಲಿ

ಆನಂದಭಾಷ್ಪ

ವೈರಾಗ್ಯ ಮೂರ್ತಿಗೆ ಜರುಗುತ್ತಿದ್ದ ಮಹಾಮಜ್ಜನವನ್ನು ನೋಡುತ್ತಿದ್ದ ಜೈನ ಸನ್ಯಾಸಿನಿಯೊಬ್ಬರ ಕಣ್ಣಿನಲ್ಲಿ ಧಾರಾಕಾರವಾಗಿ ಹರಿದ ಆನಂದಭಾಷ್ಪ
ಬಾಹುಬಲಿಯ ಮಸ್ತಕಾಭಿಷೇಕವನ್ನು ವೀಕ್ಷಿಸಲು ವಿಂಧ್ಯಗಿರಿ ಬೆಟ್ಟದಮೇಲೆ ನಿರ್ಮಿಸಿರುವ ಜರ್ಮನ್ ತಂತ್ರಜ್ಞಾನದ ಅಟ್ಟಣಿಗೆ, ಚಂದ್ರಗಿರಿ ಬೆಟ್ಟ, ಶ್ರವಣಬೆಳಗೊಳದ ವಿಹಂಗಮ ಪನೋರಾಮಿಕ್ ಚಿತ್ರShare:

ಬುಧವಾರ, ಫೆಬ್ರವರಿ 7, 2018

ಮಹಾಮಸ್ತಕಾಭಿಷೇಕ ಉದ್ಘಾಟನಾ ಸಮಾರಂಭ

ಮಹಾಮಸ್ತಕಾಭಿಷೇಕ ಉದ್ಘಾಟನಾ ಸಮಾರಂಭ


ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಗೊಮ್ಮಟೇಶ್ವರ ಭಗವಾನ್ ಶ್ರೀ ಶ್ರೀ ಶ್ರೀ ಬಾಹುಬಲಿ ಮಹಾಸ್ವಾಮಿಯ 88ನೇ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಇಂದು ಜರುಗಿತು.

ಭಾರತದ ಘನತೆವೆತ್ತ ರಾಷ್ಟ್ರಪತಿಗಳಾದ ಸನ್ಮಾನ್ಯ ಶ್ರೀ ರಾಮನಾಥ ಕೋವಿದ್ ರವರು ಚಾವುಂಡರಾಯ ಮಂಟಪದ ಬೃಹತ್ ವೇದಿಕೆಯ ಮೇಲಿದ್ದ ಬಾಹುಬಲಿಯ ಪ್ರತಿಕೃತಿಯನ್ನು ಅನಾವರಣಗೊಳಿಸಿ, ದೀಪ ಬೆಳಗಿಸಿ 88ನೇ ಮಹಾಮಸ್ತಕಾಭಿಷೇಕಕ್ಕೆ ಇಂದು ಚಾಲನೆ ನೀಡಿದರು.

ರಾಷ್ಟ್ರಪತಿಗಳ ಆಗಮನ ಆಗುತ್ತಿದ್ದಂತೆಯೇ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜುರವರು ಆಗಮಿಸಿದ್ದ ಗಣ್ಯರೆಲ್ಲರಿಗೂ ಸ್ವಾಗತ ಕೋರಿದರು. ನಂತರ ಮಾತನಾಡಿದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಾವು ಪಟ್ಟಾಧಿಕಾರ ಹೊಂದಿದ ನಂತರ ಜರುಗಿದ 1981 ರ ಹಾಗೂ ನಂತರದ ಮಸ್ತಕಾಭಿಷೇಕಗಳ ಬಗ್ಗೆ ಮಾತನಾಡಿದರು.  ಶ್ರವಣಬೆಳಗೊಳಕ್ಕೆ ರೈಲು ಸಂಚಾರವನ್ನು ಮಾಡಲು ಶ್ರಮಿಸಿದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ. ಹೆಚ್.ಡಿ.ದೇವೇಗೌಡರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು ಹಾಗೂ ಈ ವರ್ಷದ ಮಹಾಮಸ್ತಕಾಭಿಷೇಕಕ್ಕೆ ಅನುದಾನ ನೀಡಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.  ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಆಚಾರ್ಯ ಶ್ರೀ 108 ಶಾಂತಿಸಾಗರ ಮುನಿಮಹಾರಾಜರ ಪರಂಪರೆಯ ಪರಮಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನಸಾಗರ ಮುನಿ ಮಹಾರಾಜರು ಆಶೀರ್ವಚನವನ್ನು ನೀಡಿ ಬಾಹುಬಲಿಯ ದಿವ್ಯ ಸಂದೇಶವನ್ನು ತಿಳಿಸಿದರು. ನಂತರ ಮಾತನಾಡಿದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು, ತಮ್ಮ ಅಧಿಕಾರಾವಧಿಯಲ್ಲಿ ಮಹಾಮಸ್ತಕಾಭಿಷೇಕ ಜರುಗುತ್ತಿರುವುದು ತಮ್ಮ ಸೌಭಾಗ್ಯವೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಯಾವುದೇ ಕೊರತೆ ಉಂಟಾಗದಂತೆ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು ಮತನಾಡಿ ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ನೂರಾರು ಜನ ಆಚಾರ್ಯರು, ತ್ಯಾಗಿಗಳು ಹಾಗೂ ಆರ್ಯಿಕಾ ರವರುಗಳ ದರ್ಶನ ಭಾಗ್ಯವನ್ನು ಪಡೆದ ನಾವೇ ಧನ್ಯರು ಎಂದರು.  ನಂತರ ರಾಷ್ಟ್ರಪತಿಯವರಿಗೆ ರಾಜ್ಯಸರ್ಕಾರದ ವತಿಯಿಂದ ಹಾಗೂ ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.  ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ವಜುಭಾಯಿ ರೂಢಾಭಾಯಿ ವಾಲಾ ರವರು ಜೈನ ಧರ್ಮದ ಅಹಿಂಸಾ ತತ್ವಗಳ ಬಗ್ಗೆ ಮತ್ತು ಬಾಹುಬಲಿಯ ತ್ಯಾಗದ ಬಗ್ಗೆ ಮಾತನಾಡಿದರು. ಕೊನೆಯದಾಗಿ ಮಾತನಾಡಿದ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ರವರು ಮೊದಲಿಗೆ ಕನ್ನಡದಲ್ಲಿ ಮಾತನಾಡಿದರು. ತಾವು ಅಧಿಕಾರ ಸ್ವೀಕರಿಸಿದ ನಂತರ ಇದು ಮೂರನೇ ಬಾರಿ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಈ ರಾಜ್ಯಕ್ಕೆ ಬರಲು ಸಂತೋಷವಾಗುತ್ತದೆ ಎಂದರು. ಜಗದ್ವಿಖ್ಯಾತ ಏಕಶಿಲಾ ಮೂರ್ತಿಯಾದ ಗೊಮ್ಮಟೇಶ್ವರನ ಇತಿಹಾಸವನ್ನು ತಿಳಿಸಿದರು.  ರಾಷ್ಟ್ರಪತಿಯವರ ಭಾಷಣದ ನಂತರ ಮತ್ತೊಮ್ಮೆ ರಾಷ್ಟ್ರಗೀತೆ ನುಡಿಸಲಾಯಿತು. ರಾಷ್ಟ್ರಪತಿಗಳ ಜೊತೆ ಅವರ ಧರ್ಮಪತ್ನಿ ಶ್ರೀಮತಿ ಸವಿತಾ ಕೋವಿಂದ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೃಹತ್ ವೇದಿಕೆಯ ಎಡಭಾಗದಲ್ಲಿ ಆಚಾರ್ಯರು ಮತ್ತು ತ್ಯಾಗಿಗಳಿಗೆ ಮತ್ತು ಬಲಭಾಗದಲ್ಲಿ ಆರ್ಯಿಕಾ ರವರುಗಳಿಗೆ ಆಸನವನ್ನು ಕಲ್ಪಿಸಲಾಗಿತ್ತು.  ಕಾರ್ಯಕ್ರಮದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡರು, ಮಹಾಮಸ್ತಕಾಭಿಷೇಕ ರಾಜ್ಯಮಟ್ಟದ ಸಮಿತಿಯ ಸಹ ಅಧ್ಯಕ್ಷರಾದ ಅಭಯಚಂದ್ರ ಜೈನ್,  ಹಾಸನ ಜಿಪಂ ಅಧ್ಯಕ್ಷೆ ಶ್ವೇತ ದೇವರಾಜ್, ಹಾಸನ ಜಿಲ್ಲೆಯ ಶಾಸಕರುಗಳಾದ ಸಿ.ಎನ್.ಬಾಲಕೃಷ್ಣ, ಹೆಚ್.ಡಿ.ರೇವಣ್ಣ, ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಎಸ್.ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ವಿಧಾನಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸರಿತಾ ಎಂ.ಕೆ.ಜೈನ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಕೆ.ರತ್ನಪ್ರಭಾ, ಹಿರಿಯ ಪೊಲೀಸ್ ಅಧಿಕಾರಿಗಳಾದ ಶ್ರೀ ಭಾಸ್ಕರ ರಾವ್, ಶ್ರೀ ಕಮಲ್ ಪಂಥ್,  ಜಿಲ್ಲಾಧಿಕಾರಿ ಶ್ರೀಮತಿ ರೋಹಿಣಿ ಸಿಂಧೂರಿ ಸೇರಿದಂತೆ ಗಣ್ಯರುಗಳು ಉಪಸ್ಥಿತರಿದ್ದರು.  ಸಾವಿರಾರು ಸಂಖ್ಯೆಯಲ್ಲಿ ಜೈನ ಸಮಾಜಬಾಂಧವರು ಹಾಗೂ ಸಾರ್ವಜನಿಕರುಗಳು ಭಾಗವಹಿಸಿದ್ದರು.  ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಾಹುಲ್ ಕುಮಾರ್ ಶಹಪೂರ್ವಾಡ್ ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.  ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಶ್ರೀಮಠದ ವತಿಯಿಂದ ಭೋಜನದ ವ್ಯವಸ್ತೆ ಏರ್ಪಾಡು ಮಾಡಲಾಗಿತ್ತು.
Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....