ಭಾನುವಾರ, ಜನವರಿ 14, 2018

ಅರಸೀಕೆರೆಯಲ್ಲಿ ಜಾನಪದ ಸಿರಿ ಸಂಭ್ರಮ

ಜಾನಪದ ಸಿರಿ ಸಂಭ್ರಮ


ಅರಸೀಕೆರೆಯ ಸಾಧು ವೀರಶೈವ ಸಮಾಜ, ತರಳಬಾಳು ಯುವ ವೇದಿಕೆ, ಶಿವಕುಮಾರ ಬಳಗ ಹಾಗೂ ತರಳಬಾಳು ನೌಕರರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ, ಜಾನಪದ ಕಲಾ ಪ್ರಾಕಾರಗಳನ್ನು ಪರಿಚಯಿಸುವ ಜಾನಪದ ಸಿರಿ ಸಂಭ್ರಮವು ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಶ್ರೀ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ದಿನಾಂಕ 13-01-2018, ಶನಿವಾರ ಸಂಜೆ ಜರುಗಿತು.

ಜನಪದರ ಸಂಸ್ಕೃತಿಯ ಪ್ರತಿ ಹೆಜ್ಜೆಯಲ್ಲೂ ಜನಪದ ಕಲೆಗಳು ಹಾಸುಹೊಕ್ಕಾಗಿವೆ.  ತಮ್ಮ ದಿನನಿತ್ಯದ ದುಡಿಮೆಯಲ್ಲಿನ ಆಯಾಸ, ಬದುಕಿನ ಏಕಾನತೆ, ಬೇಸರಿಕೆ ಹೋಗಲಾಡಿಸಲು ಮನುಷ್ಯ ಕಲೆಯ ಮೊರೆಹೊಕ್ಕ.  ಕಾಲಗತಿಯಲ್ಲಿ ಮೂಲ ಜನಪದ ಕಲೆಗಳು ಮರೆಯಾಗಿ ಅವುಗಳು ಕೇವಲ ಯಾಂತ್ರಿಕ ಪ್ರದರ್ಶನಗಳಾಗಿವೆ.  ಇಂತಹ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಿರಿಗೆರೆಯ ತರಳಬಾಳು ಕಲಾ ಸಂಘವು ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಜಾನಪದ ಸಿರಿ ಸಂಭ್ರಮವನ್ನು ನಾಡಿನಾದ್ಯಂತ ಪ್ರದರ್ಶನ ನೀಡುತ್ತಿದೆ.

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿವಿಧ ವಯೋಮಾನದ 350ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯ ಸಮಯದಲ್ಲಿ ಸಿರಿಗೆರೆಯ ತರಳಬಾಳು ಕಲಾಸಂಘದಲ್ಲಿ ವಿಶೇಷ ಶಿಬಿರವನ್ನು ಏರ್ಪಡಿಸಿ, 15ಕ್ಕೂ ಅಧಿಕ ಜಾನಪದ ಕಲಾ ಪ್ರಾಕಾರಗಳನ್ನು ಅವುಗಳ ಮೂಲ ಕಲಾವಿದರುಗಳಿಂದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದೆ.

ಅರಸೀಕೆರೆಯಲ್ಲಿ ಶನಿವಾರದಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದ ಪ್ರಮುಖ ಜಾನಪದ ಕಲಾ ಪ್ರಾಕಾರಗಳಾದ ದೇವರ ಗುಡ್ಡರು ಹಾಡುವ ಮಲೆಮಾದೇಶ್ವರನ ಬೀಸು ಕಂಸಾಳೆ ನೃತ್ಯ, ಶಕ್ತಿದೇವತೆಯ ಆರಾಧನೆಯ ಸಂಕೇತವಾದ ಪೂಜಾ ಕುಣಿತ, ಮೈಸೂರು ಪ್ರಾಂತ್ಯದ ಪಟಾ ಕುಣಿತ, ತುಳುನಾಡಿನ ಗೊಡ್ಡ ಜನಾಂಗದ ಸಾಂಪ್ರದಾಯಕ ಆಚರೆಣೆಯಾದ ಕಂಗೀಲು ನೃತ್ಯ, ಕೊಡಗಿನ ಪಾರಂಪರಿಕ ಉಮ್ಮತ್ತಾಟ್ ನೃತ್ಯ, ಉಡುಪಿ ಜಿಲ್ಲೆಯ ಕುಡುಬಿ ಜನಾಂಗದವರ ಕುಲದೇವತೆಯಾದ ಚಂಡಿಕಾ ದೇವಿ ಮಾರಿಯಮ್ಮ ಹಾಗೂ ಯಲ್ಲಮ್ಮನ ಪೂಜಿಸುವ ಕರಗ ಕೋಲಾಟ, ಚಾಮರಾಜನಗರದ ಸೋಲಿಗರ ನೃತ್ಯ,  ಮಧ್ಯಕರ್ನಾಟಕದ ವಿಶಿಷ್ಠ ಕಲೆಯಾದ ಶೈವ ಸಂಪ್ರದಾಯದ ವೀರಗಾಸೆ ನೃತ್ಯ, ಹಾಲುಮತ ಸಮುದಾಯದ ಆರಾಧ್ಯದೈವ ಬೀರಪ್ಪನ ಭಕ್ತರ ಡೊಳ್ಳು ಕುಣಿತ, ಲಂಬಾಣಿ ಜನಾಂಗದ ವರ್ಣರಂಜಿತ ಲಂಬಾಣಿ ನೃತ್ಯ, ಭಾರತದ ಪ್ರಾಚೀನ ಕ್ರೀಡೆಗಳಲ್ಲಿ ಒಂದಾದ ಪ್ರೇಕ್ಷಕರ ಮೈನವಿರೇಳಿಸುವ ಮಲ್ಲಕಂಬ ಹಾಗೂ ಮಲ್ಲಿಹಗ್ಗ ಮೊದಲಾದ ಜಾನಪದ ಕಲೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.  ಕಿಕ್ಕಿರಿದು ತುಂಬಿದ್ದ ಕಲಾಭಿಮಾನಿಗಳು ವಿದ್ಯಾರ್ಥಿಗಳ ಕಲಾ ನೈಪುಣ್ಯತೆಗೆ ಮನಸೋತರು.
Share:

ಶುಕ್ರವಾರ, ಜನವರಿ 5, 2018

ಶಾಲಾ ಶತಮಾನೋತ್ಸವ

ಶಾಲಾ ಶತಮಾನೋತ್ಸವ ಸಮಾರಂಭ

ಅರಸೀಕೆರೆ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (ರಾಮಣ್ಣ ಸ್ಕೂಲ್) ಇದೀಗ ಶತಮಾನೋತ್ಸವದ ಸಂಭ್ರಮ.

28 ಸೆಪ್ಟೆಂಬರ್ 1917 ರಂದು ಹಾಸನದ ಅಂದಿನ ಡೆಪ್ಯೂಟಿ ಕಮಿಷನರ್ ರವರಾಗಿದ್ದ ಜಿ.ವೆಂಕಟ ರಾವ್ Esq ರವರು ಶಾಲೆಯ ಪ್ರಾರಂಭೋತ್ಸವದ ಶಿಲಾನ್ಯಾಸವನ್ನು ನೆರವೇರಿಸಿದ್ದರು. ಈ ಶಾಲೆಯ ಕಟ್ಟಡವನ್ನು ಮರುಳಸಿದ್ದಪ್ಪ ಮತ್ತು ರುದ್ರಪ್ಪ ಎನ್ನುವರು ದಾನವಾಗಿ ನೀಡಿದ್ದರು ಎಂದು ತಿಳಿಸುವ ಶಿಲಾಫಲಕ ಇಂದಿಗೂ ಶಾಲೆಯ ಆವರಣದಲ್ಲಿದೆ.

Esq : ಕುರಿತು ಕಿರು ಮಾಹಿತಿ
ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿ ಸರ್ಕಾರದ ಹಿರಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರಿಗೆ ಗೌರವ ಸೂಚಕವಾಗಿ Esq (Esquire) ಇಸ್ಕ್ವೈರ್ ಎಂಬ ಪದನಾಮ ಬಳಸಲಾಗುತ್ತಿತ್ತು.  ಈ ಪದನಾಮ ಹೊಂದಲು ಅವರು ಇಂಗ್ಲೇಂಡಿನ ಆಕ್ಸ್ ಫರ್ಡ್, ಕೇಂಬ್ರಿಂಜ್ ಅಥವಾ ಲಂಡನ್ ಯೂನಿವರ್ಸಿಟಿಗಳಲ್ಲಿ ವ್ಯಾಸಂಗ ಮಾಡಿರಬೇಕಿತ್ತು. ಇಲ್ಲವೇ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕಿತ್ತು. 

ಅಂದರೆ, ಈ ಶಾಲೆಯ ಶಿಲಾನ್ಯಾಸವನ್ನು ಮಾಡಿದ್ದಂತಹ ವ್ಯಕ್ತಿ ಅಂದಿನ ಕಾಲಕ್ಕೆ ಅತ್ಯಂತ ಮೇಧಾವಿ ಹಾಗೂ ಪ್ರಭಾವಶಾಲಿ ವ್ಯಕ್ತಿಯೇ ಆಗಿದ್ದರು.  ಬ್ರಿಟಿಷರ ಆಳ್ವಿಕೆಯ ಸಮಯದಲ್ಲೇ ಹಾಸನ ಜಿಲ್ಲೆಯ ಡೆಪ್ಯೂಟಿ ಕಮಿಷನ್ ಆಗಿದ್ದರು ಎಂದರೆ ಅವತ್ತಿನ ಅವರ ವರ್ಚಸ್ಸು ಹೇಗಿರಬಹುದೆಂದು ಊಹಿಸಿಕೊಳ್ಳಬಹುದು.  ಇಂತಹ ಘನತೆವೆತ್ತ ವ್ಯಕ್ತಿಯಿಂದ ಪ್ರಾರಂಭಗೊಂಡ ಶಾಲೆಯು ಇಂದು ಶತಮಾನದ ಸಂಭ್ರಮಕ್ಕೆ ಅಣಿಯಾಗಿದೆ.

ಕಳೆದ ಒಂದು ನೂರು ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.  ಇವರೆಲ್ಲರೂ ಸಂಭ್ರಮಿಸುವ ಸಂದರ್ಭ ಇದೀಗ ಬಂದಿದೆ.

ದಿನಾಂಕ 06-01-2018, ಶನಿವಾರ, ಅಂದರೆ ನಾಳೆ ಸಂಜೆ 4 ಗಂಟೆಗೆ ಶಾಲೆಯ ಆವರಣದಲ್ಲಿ ಶತಮಾನೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.  ಕಾರ್ಯಕ್ರಮದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ.ಹೆಚ್.ಡಿ.ದೇವೇಗೌಡರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಎ.ಮಂಜುರವರು, ಅರಸೀಕೆರೆ ಕ್ಷೇತ್ರದ ಶಾಸಕರಾದ ಶ್ರೀ. ಕೆ.ಎಂ.ಶಿವಲಿಂಗೇಗೌಡರು ಸೇರಿದಂತೆ ಅನೇಕ ಗಣ್ಯವ್ಯಕ್ತಿಗಳು ಮತ್ತು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದಂತಹ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಖಾಸಗಿ ಶಾಲೆಗಳ ಅಬ್ಬರದಲ್ಲಿ ಇಂದಿಗೂ ಉತ್ತಮ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿ, ಶತಮಾನ ಪೂರೈಸಿದ ನಮ್ಮೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ.

ವಂದನೆಗಳೊಂದಿಗೆ,

ಇದೇ ಶಾಲೆಯಲ್ಲಿ 1982 ರಿಂದ 1989 ರವರೆಗೆ ವ್ಯಾಸಂಗ ಮಾಡಿದ ಹೆಮ್ಮೆಯ ವಿದ್ಯಾರ್ಥಿ

ಶ್ರೀರಾಮ ಜಮದಗ್ನಿ
ಅರಸೀಕೆರೆ.

Share:

ಗುರುವಾರ, ಜನವರಿ 4, 2018

ಅರಸೀಕೆರೆಯಲ್ಲಿ ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

ಅರಸೀಕೆರೆಯಲ್ಲಿ ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ ಅರಸೀಕೆರೆ ತಾಲ್ಲೂನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳಡಿ ನೆರವು ಪಡೆಯಲಿರುವ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.

ಇಂದು ಬೆಳಗ್ಗೆ 11.45 ಕ್ಕೆ ಹೆಲಿಕಾಪ್ಟರಿನಲ್ಲಿ ಅರಸೀಕೆರೆ ಜೇನುಕಲ್ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್ ಗೆ ಆಗಮಿಸದ ಮುಖ್ಯಮಂತ್ರಿಗಳಿಗೆ ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಗೌರವ ಸಮರ್ಪಣೆ ನೀಡಲಾಯಿತು.   ನಂತರ, ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು, ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

Share:

ಶುಕ್ರವಾರ, ಡಿಸೆಂಬರ್ 29, 2017

ಅರಸೀಕೆರೆ ಮಾಲೇಕಲ್ಲು ತಿರುಪತಿಯಲ್ಲಿ ವೈಕುಂಠ ಏಕಾದಶಿ

"ವೈಕುಂಠ ಏಕಾದಶಿ"

"ವೈಕುಂಠ ಏಕಾದಶಿ" ಪ್ರಯುಕ್ತ ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ದೇವಸ್ಥಾನದಲ್ಲಿ ಇಂದು ಪ್ರಾತಃಕಾಲ ಶ್ರೀಯವರಿಗೆ ಹಾಗೂ ಅಮ್ಮನವರಿಗೆ ಅಭಿಷೇಕ, ನಂತರ ಶ್ರೀ ಗೋವಿಂದರಾಜ ಸ್ವಾಮಿಯವರಿಗೆ "ಗೋವರ್ಧನಗಿರಿಧಾರಿ" ಅಲಂಕಾರ ಶ್ರೀ ಮಹಾಲಕ್ಷ್ಮಿ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀ ಆಂಜನೇಯ ಸ್ವಾಮಿಯವರಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು.

ದೇವಸ್ಥಾನದ ವೈಕುಂಠ ದ್ವಾರದಲ್ಲಿ  ನಿರ್ಮಿಸಿರುವ ಮಂಟಪದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರೀಯವರಿಗೆ "ಗಜಾರೂಢ ವೈಕುಂಠನಾರಾಯಣ" ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.

Share:

ಸೋಮವಾರ, ಡಿಸೆಂಬರ್ 25, 2017

ವೈಕುಂಠ ಏಕಾದಶಿ ಕಾರ್ಯಕ್ರಮಕ್ಕೆ ಆಹ್ವಾನ

"ವೈಕುಂಠ ಏಕಾದಶಿ"

ದಿನಾಂಕ 29-12-2017, ಶುಕ್ರವಾರದಂದು "ವೈಕುಂಠ ಏಕಾದಶಿ" ಪ್ರಯುಕ್ತ ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ದೇವಸ್ಥಾನದಲ್ಲಿ ಪ್ರಾತಃಕಾಲ ಶ್ರೀಯವರಿಗೆ ಹಾಗೂ ಅಮ್ಮನವರಿಗೆ ಅಭಿಷೇಕ, ನಂತರ ವಿಶೇಷ ಅಲಂಕಾರ ಹಾಗೂ ತೀರ್ಥಪ್ರಸಾದ ವಿನಿಯೋಗವಿರುತ್ತದೆ.

ಬೆಳಿಗ್ಗೆ 7.30 ರಿಂದ ಸಂಜೆ 6.30 ರ ವರೆಗೆ ದೇವಸ್ಥಾನದ ವೈಕುಂಠ ದ್ವಾರದಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರೀಯವರಿಗೆ ವಿಶೇಷ ಅಲಂಕಾರವನ್ನು ಏರ್ಪಡಿಸಲಾಗುವುದು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ರವರ ವತಿಯಿಂದ ದೇವಸ್ಥಾನಕ್ಕೆ ಹೂವಿನ ವಿಶೇಷ ಅಲಂಕಾರ ಹಾಗೂ ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.  ಅನ್ನ ಸಂತರ್ಪಣೆಗಾಗಿ ತಿರುಪತಿಯಲ್ಲಿರುವ ಆರ್ಯವೈಶ್ಯ ಕಲ್ಯಾಣ ಮಂದಿರವನ್ನು ಮಂಡಲಿಯ ವತಿಯಿಂದ ಉಚಿತವಾಗಿ ನೀಡಲಾಗಿರುತ್ತದೆ.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 6.30ರ ವರೆಗೆ ಅರಸೀಕೆರೆಯ ವಿವಿಧ ಸಂಘ ಸಂಸ್ಥೆಗಳಿಂದ ದೇವಸ್ಥಾನದ ಆವರಣದಲ್ಲಿ ಭಕ್ತಿಗೀತೆ, ದೇವರನಾಮ, ಭಜನೆ ಕಾರ್ಯಕ್ರಮ ಜರುಗಲಿದೆ.

ಅರಸೀಕೆರೆ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಮಾಲೇಕಲ್ಲು ತಿರುಪತಿಗೆ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಸಂಚಾರ ವ್ಯವಸ್ಥೆ ಇರುತ್ತದೆ.

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ನಿಮ್ಮ ಈಮೇಲ್ ವಿಳಾಸ ನೀಡಿ, ಅಲ್ಲಿಗೇ ಸುದ್ದಿ ಕಳಿಸುತ್ತೇವೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....